ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೆರೆ ಸಂರಕ್ಷಿಸದಿದ್ದರೆ ಕೂಡಲೇ ಕ್ರಮ

Mainashree
Updated On : 18 Jun 2014, 10:38 am

ಕ.ಪ್ರ. ವಾರ್ತೆ, ಮೈಸೂರು, ಜೂ.18
ಮೈಸೂರು ಜಿಲ್ಲೆಯಲ್ಲಿ ಇರುವ ಪ್ರತಿ ಕೆರೆಗಳ ಸಂರಕ್ಷಣೆ, ಒತ್ತುವರಿ ತೆರವು, ಅಭಿವೃದ್ಧಿಪಡಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಬೃಹತ್ ಲೋಕ ಅದಾಲತ್‌ನಲ್ಲಿ ಸಲ್ಲಿಸುವಂತೆ ಲೋಕ ಅದಾಲತ್ ಸದಸ್ಯ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯಲ್ಲಿನ ಕೆರೆಗಳ ಸಂರಕ್ಷಣೆ, ಅಭಿವೃದ್ಧಿ ಕುರಿತ ಮಿನಿ ಅದಾಲತ್‌ನಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೃಹತ್ ನೀರಾವರಿ, ಸಣ್ಣ ನೀರಾವರಿ ಹಾಗೂ ಪಂಚಾಯತ್ ರಾಜ್ ಮತ್ತು ಎಂಜಿನಿಯರಿಂಗ್ ವ್ಯಾಪ್ತಿಗೆ ಬರುವ ಕೆರೆಗಳ ಬಗ್ಗೆ ಆಯಾಯ ಅಧಿಕಾರಿಗಳು ಪ್ರತ್ಯೇಕವಾಗಿ ಕ್ರಿಯಾಯೋಜನೆ ಮಂಡಿಸಬೇಕು. ಈ ಬಗ್ಗೆ ನಿರ್ಲಕ್ಷ್ಯವಹಿಸಿ ಸಬೂಬು ಹೇಳುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದರು.
ತಹಸೀಲ್ದಾರ್, ಅರಣ್ಯ ಇಲಾಖೆ, ಗ್ರಾಪಂ ಹಾಗೂ ಇತರೆ ಇಲಾಖೆ ಸಹಯೋಗದಲ್ಲಿ ಸರ್ವೆ ನಡೆಸಿ ಕೆರೆಗಳ ಗಡಿ ಗುರುತಿಸಬೇಕು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸಿ ತೆರವುಗೊಳಿಸಬೇಕು ಎಂದರು.
ಕೆರೆಗಳ ಒತ್ತುವರಿ ತೆರವು, ಸಂರಕ್ಷಣೆಗೆ ಇರುವ ಅಡ್ಡಿ, ಆತಂಕಗಳಿವೆಯೇ ಎಂದು ಡಾ.ಯಲ್ಲಪ್ಪ ರೆಡ್ಡಿ ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಸಾಕಷ್ಟು ಸಮಸ್ಯೆಗಳಿವೆ ಎಂದು ಹೇಳಿದರು.
ಪ್ರತಿಯೊಂದನ್ನು ಸರ್ವೆ ಮಾಡಿಸಿ: ನಗರಪಾಲಿಕೆ, ಎಂಡಿಎ, ಸಣ್ಣ ನೀರಾವರಿ, ಬೃಹತ್ ನೀರಾವರಿ, ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಬರುವ ರಾಜಕಾಲುವೆ, ಕೆರೆ, ನಾಲೆ, ಗೋಕಟ್ಟೆ, ಕಲ್ಯಾಣಿ ಸೇರಿದಂತೆ ಪ್ರತಿಯೊಂದನ್ನು ಸರ್ವೆ ಮಾಡಿಸಬೇಕು. ಒತ್ತುವರಿ ತೆರವುಗೊಳಿಸಲು ಅನುಸರಿಸಬೇಕಾದ ಕ್ರಮ, ಸಂರಕ್ಷಣೆ ಮತ್ತು ಅಭಿವೃದ್ಧಿ, ಅದರ ಪ್ರಯೋಜನ ಸಂಬಂಧ ಬೃಹತ್ ಲೋಕ ಅದಾಲತ್‌ನಲ್ಲಿ ವರದಿ ಮಂಡಿಸುವಂತೆ ತಿಳಿಸಿದರು. ಪ್ರತಿ ಗ್ರಾಪಂ, ನಗರ ವ್ಯಾಪ್ತಿಯಲ್ಲಿ ಈ ಕಾರ್ಯ ನಡೆಯಬೇಕು. ಆ.22 ರಂದು ನಡೆಯುವ ಸಭೆಯಲ್ಲಿ ಸಂಪೂರ್ಣ ವರದಿ ಮಂಡಿಸಬೇಕು. ಇದು ಮುಂದಿನ ಕ್ರಮ ಜರುಗಿಸಲು ಉಪಯೋಗವಾಗಲಿದೆ ಎಂದರು. ಇದಕ್ಕೆ ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಸಹಮತ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 807 ಕೆರೆಗಳಿವೆ: ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಶಿವಮೂರ್ತಿ ಮಾತನಾಡಿ, ಜಿಲ್ಲೆಯ ಬೃಹತ್ ನೀರಾವರಿ, ಸಣ್ಣ ನೀರಾವರಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 807 ಕೆರೆಗಳಿವೆ. ನವೀಕರಣ ಮತ್ತು ಪುನರುಜ್ಜೀವನ ಯೋಜನೆಯಡಿ 51.31 ಕೋಟಿ ವೆಚ್ಚದಲ್ಲಿ 2007-2008 ರಿಂದ 2012-13ನೇ ಸಾಲಿನವರೆಗೆ 220 ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 34.03 ಕೋಟಿ ವೆಚ್ಚದಲ್ಲಿ 182 ಕೆರೆಗಳ ಅಭಿವೃದ್ಧಿ ಪೂರ್ಣಗೊಳಿಸಲಾಗಿದೆ. ಉಳಿದ 38 ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಣಹೇಳಿದರು.
ಎಲ್ಲ ಕೆರೆಗಳ ಸರ್ವೆ, ಒತ್ತುವರಿ ತೆರವು, ಹೂಳೆತ್ತುವಿಕೆ, ಜಲ ಮೂಲಗಳ ಸಂರಕ್ಷಣೆ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳಲಾಗಿದೆ. 156 ಕೆರೆಗಳಲ್ಲಿ 472.65 ಹೆಕ್ಟೇರ್ ಒತ್ತುವರಿ ಜಾಗವನ್ನು ಗುರುತಿಸಲಾಗಿದೆ. 182 ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿದ್ದು, 137.97 ಮೆಟ್ರಿಕ್ ಅಡಿ ನೀರು ಸಂಗ್ರಹ ಸಾಮರ್ಥ್ಯವನ್ನು ಮರುಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಜಿಪಂ ಸಿಇಒ ಪಿ.ಎ. ಗೋಪಾಲ್,  ಜನ ಚೇತನ ಟ್ರಸ್ಟ್‌ನ ಎನ್. ಪ್ರಸನ್ನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement