ಜಾತಿಯ ಪರಿಧಿಯಲ್ಲಿ ವೀರಶೈವ ಧರ್ಮ
ನಂಜನಗೂಡು: ಬಸವಣ್ಣನ ವಿಶ್ವವ್ಯಾಪಿ ವೀರಶೈವ ಧರ್ಮಕ್ಕೆ ನಾವು ಇಂದು ಕಡಿವಾಣ ಹಾಕಿ ಜಾತಿಯ ಪರಿಧಿಯೊಳಗೆ ಬಂಧಿಸಿದ್ದೇವೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ವಿಷಾದಿಸಿದರು.
ಇಲ್ಲಿನ ವೀರಶೈವ ಒಕ್ಕೂಟದ ಬಳಗವು ಮಂಗಳವಾರ ಪಟ್ಟಣದ ಶ್ರೀಕಂಠೇಶ್ವರ ಕಲಾ ಮಂಟಪದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಬಸವಣ್ಣನಂತಹ ದಾರ್ಶನಿಕರ ಜಯಂತಿ ಆಚರಣೆಯೊಂದಿಗೆ ಅವರ ತತ್ವಾದರ್ಶಗಳ ಅನುಷ್ಠಾನ ಕುರಿತಂತೆ ಆತ್ಮಾವಲೋಕನ ಮುಖ್ಯ ಎಂದು ಅಭಿಪ್ರಾಯಪಟ್ಟರು.
ನಮ್ಮಲ್ಲಿ ಅನುಷ್ಠಾನಕ್ಕಿಂತ ವೈಭವೀಕರಣವೇ ಹೆಚ್ಚು. ಇಂತಹ ಮಹನೀಯರ ತತ್ವ, ಆದರ್ಶಗಳ ಅನುಷ್ಠಾನದ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಂಡು ಮಾನವ ಕುಲದ ಒಳಿತಿಗಾಗಿ ನಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಜಯಂತಿ ಆಚರಣೆ ಸಾರ್ಥಕ. ಇಂದು ನಾವು ಕಾಣುತ್ತಿರುವ ಗ್ರಾಪಂಗಳ ಸ್ಥಾಪನೆಗೆ ಅಂದು ಬಸವಣ್ಣನ ಅನುಭವ ಮಂಟಪವೇ ಪ್ರೇರಣೆ ಎಂದು ಹೇಳಿದರು.
ಉಪನ್ಯಾಸಕ ಕೆ.ಎಂ.ಸಿದ್ದರಾಜಪ್ಪ ಮಾತನಾಡಿದರು. ನವಿಲೂರು ಹಾಗೂ ಚುಂಚನಹಳ್ಳಿ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ಅವರನ್ನು ಒಕ್ಕೂಟದ ವತಿಯಿಂದ ಸಚಿವ ವಿ.ಶ್ರೀನಿವಾಪ್ರಸಾದ್ ಸನ್ಮಾನಿಸಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದೇವನೂರು ಮಠಾಧ್ಯಕ್ಷ ಮಹಂತ ಸ್ವಾಮೀಜಿ, ಮಲ್ಲನಮೂಲೆ ಮಠದ ಚನ್ನಬಸವ ಸ್ವಾಮೀಜಿ, ಜಿಪಂ ಸದಸ್ಯರಾದ ಕಾ.ಪು.ಸಿದ್ದವೀರಪ್ಪ, ಸಿಂಧುವಳ್ಳಿ ಕೆಂಪಣ್ಣ, ಡಾ. ಶಿವರಾಮ್ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ.ಎಂ.ಮಾದಪ್ಪ, ಪುರಸಭಾ ಉಪಾಧ್ಯಕ್ಷ ದೊರೆಸ್ವಾಮಿ, ತಾಪಂ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನಸ್ವಾಮಿ, ಎಸ್.ಮಹದೇವಯ್ಯ, ಕೆ.ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ಕಳಲೆ ಕೇಶವಮೂರ್ತಿ, ಬಸವಣ್ಣ, ಎಚ್.ಕೆ.ಚನ್ನಪ್ಪ, ಲಲಿತಾ ಬಾಲಚಂದ್ರ, ಶಿವನಾಗಪ್ಪ, ಪುರಸಭಾ ಸದಸ್ಯರಾದ ಅನುಸೂಯ, ಮಹದೇವಸ್ವಾಮಿ, ಮಾಜಿ ಅಧ್ಯಕ್ಷರಾದ ಆರ್.ವಿ. ಮಹದೇವಸ್ವಾಮಿ, ಎನ್. ನರಸಿಂಹಸ್ವಾಮಿ ಇದ್ದರು.