ಗಿಡಗಳಿಗೆ ಬಿಳಿ ಕಾಂಡಕೊರಕ: ಕಾಫಿ ಬೆಳೆಗಾರರಲ್ಲಿ ಆತಂಕ
ಬೇಲೂರು: ಅರೇಬಿಕಾ ಕಾಫಿ ಗಿಡಗಳಿಗೆ ಬಿಳಿಕಾಂಡ ಕೊರಕ ಹುಳುಗಳ ಹಾವಳಿಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದು, ರೋಗ ನಿಯಂತ್ರಿಸುವ ಔಷಧ ಕಂಡು ಹಿಡಿಯುವಲ್ಲಿ ಕಾಫಿ ಮಂಡಳಿ ವಿಫಲವಾಗಿದೆ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಅರೋಪಿಸಿದ್ದಾರೆ. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ 25 ಸಾವಿರ ಎಕರೆ ಪ್ರದೇಶದಲ್ಲಿ ಅರೇಬಿಕಾ ಕಾಫಿ ಬೆಳೆ ಇದ್ದು ಪ್ರತಿ ದಿನ ಬಿಳಿಕಾಂಡ ಕೊರಕದ ಹಾವಳಿಯಿಂದ ಬೆಳೆಗಾರರು ತೀವ್ರ ಸಂಕಟ ಅನುಭವಿಸುವಂತಾಗಿದೆ ಎಂದರು. ಔಷಧ ಕಂಡುಹಿಡಿಯಲು ಆಗ್ರಹ: ಈಗಾಗಲೆ ಕಾಂಡ ಕೊರಕ್ಕೆ ಹಲವರು ಬೆಳೆಗಾರರು ನಷ್ಟಕ್ಕೆ ಗುರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅರೇಬಿಕಾ ಕಾಫಿ ನಶಿಸಲಿದೆ. ಆದ್ದರಿಂದ ಕಾಫಿ ಮಂಡಳಿಯವರು ಎಚ್ಚೆತ್ತು ಔಷಧಿ ಕಂಡುಹಿಡಿಯಲು ಮುಂದಾಗಬೇಕು ಎಂದರು. ಸಮಾವೇಶ: ಬೇಲೂರಿನಲ್ಲಿ ಜೂ. 24 ರಂದು ಕಾಫಿ ಬೆಳೆಗಾರರ ಸಮಾವೇಶ ಹಮ್ಮಿಕೊಂಡಿದ್ದು ಈ ಸಮಾವೇಶದಲ್ಲಿ ಹಾಸನ ಸಂಸದ ಹೆಚ್.ಡಿ.ದೇವೇಗೌಡ, ಮೈಸೂರು ಸಂಸದ ಪ್ರತಾಪಸಿಂಹ ಭಾಗವಹಿಸಲಿದ್ದು, ಈ ಸಮಾವೇಶದಲ್ಲಿ ಕಾಫಿ ಬೆಳೆಗಾರರ ಬೇಡಿಕೆಯನ್ನು ಈಡೇರಿಸುವಂತೆ ಸಂಸದಲ್ಲಿ ಮನವಿ ಮಾಡಲಾಗುವುದು ಎಂದರು. ಕಾಫಿ ಬೆಳೆಗರರ ಟ್ರಸ್ಟ್ ಅಧ್ಯಕ್ಷ ಎಂ.ಅರ್. ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರ ಕಾಫಿ ಉಳಿಸುವ ಹಿತದೃಷ್ಟಿಯಿಂದ ಯೋಜನೆ ರೂಪಿಸುವುದು ಅಗತ್ಯವಾಗಿದೆ ಎಂದರು.ಜೆ.ಸಿ. ಶೇಖರ್, ಜಿ.ಬಿ. ಶ್ರೀನಿವಾಸ್, ದಿನೇಶ್ ಇದ್ದರು.