ಜಿಲ್ಲೆಯಲ್ಲಿ ಕೆರೆ, ಸರ್ಕಾರಿ ಜಾಗ ಒತ್ತುವರಿ
ಕ.ಪ್ರ. ವಾರ್ತೆ ಟಿ ಮೈಸೂರು ಟಿ ಜೂ.19
ಜಿಲ್ಲೆಯಲ್ಲಿ ಕೆರೆ, ಸರ್ಕಾರಿ ಆಸ್ತಿ ಒತ್ತುವರಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ ಎಂಬುದಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಫೋನ್ ಇನ್ ಕಾರ್ಯಕ್ರಮಕ್ಕೆ ಬಂದ ದೂರುಗಳೇ ಸಾಕ್ಷಿಯಾದವು.
ಕರೆ ಮಾಡಿದ ಹಲವು ಗ್ರಾಮಸ್ಥರು ಒತ್ತುವರಿ ಬಗ್ಗೆ ದೂರು ನೀಡಿದರು. ಅಲ್ಲದೆ ಅಧಿಕಾರಿಗಳ ವಿಳಂಬದ ಬಗ್ಗೆ ಕಿಡಿಕಾರಿದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆ, ಸರ್ಕಾರಿ ಜಾಗವನ್ನು ಕೂಡಲೇ ತೆರವುಗೊಳಿಸಲು ಕ್ರಮ ವಹಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹುಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಕರೆ ಮಾಡಿದ್ದ ಸಾರ್ವಜನಿಕರು, ಕೆರೆ ಹಾಗೂ ಸರ್ಕಾರಿ ಆಸ್ತಿ ಒತ್ತುವರಿಯಾಗಿರುವ ಬಗ್ಗೆ ದೂರು ನೀಡಿದರು. ಜಿಲ್ಲೆಯಲ್ಲಿನ ಕೆರೆಗಳ ಸರ್ವೆ ಮಾಡಿ ಗಡಿ ಗುರುತಿಸಿದರೂ ಕೆರೆಗಳ ಒತ್ತುವರಿ ತೆರವುಗೊಳಿಸದೆ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸಂಬಂಧ ತಹಸೀಲ್ದಾರ್ ಹಾಗೂ ತಾಪಂ ಇಒಗಳು ಆದ್ಯತೆ ಮೇರೆಗೆ ಗಮನಹರಿಸಿ, ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಬಸ್ ಸೇವೆ ವ್ಯತ್ಯಯ: ಕೆಎಸ್‌ಆರ್‌ಟಿಸಿ ಬಸ್‌ನ ಪರ್ಮಿಟ್ ನವೀಕರಿಸದೆ ಬಸ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಖಾಸಗಿ ಬಸ್‌ಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಆರ್‌ಟಿಒ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ವೇಳೆ ಸಾರಿಗೆ ಬಸ್ ಪರ್ಮಿಟ್ ನವೀಕರಿಸಲು ಆರ್‌ಟಿಒ ಅಧಿಕಾರಿಗೆ ಪಾಲಯ್ಯ ನಿರ್ದೇಶಿಸಿದರು.
ಬನ್ನೂರು ರಸ್ತೆ ರಂಗನಾಥಪುರದಲ್ಲಿ ಬಸ್ ನಿಲುಗಡೆ ನೀಡದೆ ತೊಂದರೆಯಾಗುತ್ತಿದೆ, ಎಕ್ಸ್‌ಪ್ರೆಸ್ ಬಸ್‌ಗಳಿಗೆ ಕೋರಿಕೆ ನಿಲುಗಡೆಗೆ ಅವಕಾಶ ಕೊಡಿಸಿ ಎಂಬ ದೂರು ಬಂದಾಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸಲು ಸೂಚಿಸಿದರು. ಹಿನಕಲ್‌ನಲ್ಲಿ 2ನೇ ಅಡ್ಡರಸ್ತೆಗೆ ಬಹಳ ವರ್ಷಗಳಿಂದ ಡಾಂಬರೀಕರಣ ಆಗಿಲ್ಲ. ಪಕ್ಕದ ರಸ್ತೆಗೆ ಡಾಂಬರು ಮಾಡಲಾಗಿದೆ ಎಂದು ನಿವಾಸಿಯೊಬ್ಬರು ದೂರಿದರು. ಇದಕ್ಕೆ ಸ್ಪಂದಿಸಿದ ಪಾಲಯ್ಯ, ಎಂಡಿಎ ವತಿಯಿಂದ ಈಗಾಗಲೇ ಹಿನಕಲ್‌ನ ರಸ್ತೆ ಅಭಿವೃದ್ಧಿಪಡಿಸಿದ್ದು, ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ತಮ್ಮ ಮಗುವಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಸೀಟು ದೊರೆತಿದ್ದರೂ ಪ್ರವೇಶ ನೀಡುತ್ತಿಲ್ಲ ಎಂದು ಇಲವಾಲದ ಚಂಪಾ ಎಂಬವರು ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲು ಡಿಡಿಪಿಐಗೆ ಪಾಲಯ್ಯ ಸೂಚಿಸಿದರು. ಬಂಡಿಪಾಳ್ಯ ಸರ್ವೇ ನಂ.112 ಹಾಗೂ 113ರ ಮದ್ಯೆ 1.05 ಎಕರೆ ಓಣಿ ಒತ್ತುವರಿಯಾಗಿದ್ದು, ಈಗಾಗಲೇ ತೆರವಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಒತ್ತುವರಿ ತೆರವು ಆಗಿಲ್ಲ ಎಂದು ನಾಗರಿಕರೊಬ್ಬರು ದೂರಿದರು. ಇದಕ್ಕೆ ಸ್ಪಂದಿಸಿದ ಪಾಲಯ್ಯ, ಒತ್ತುವರಿ ತೆರವಿಗೆ ಕ್ರಮ ವಹಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
ಬಾರ್ ತೆರವುಗೊಳಿಸಿ: ನಂಜನಗೂಡು ಪಟ್ಟಣದ ಶಾಲೆಯ ಬಳಿ ಇರುವ ಬಾರ್‌ಗಳನ್ನು ತೆರವುಗೊಳಿಸುವಂತೆ ಸ್ಥಳೀಯ ನಿವಾಸಿ ಶಿವಸ್ವಾಮಿ ಆಗ್ರಹಿಸಿದರು. ಈಗಾಗಲೇ ನೋಟಿಸ್ ಜಾರಿ ಮಾಡಿದ್ದು, ಕೂಡಲೇ ತೆರವಿಗೆ ಕ್ರಮ ವಹಿಸುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.
ಉದ್ಯೋಗಖಾತ್ರಿ ಯೋಜನೆಯಡಿ ಮಾಡಿದ ಕೆಲಸಕ್ಕೆ 6 ತಿಂಗಳಾದರೂ ಎಚ್.ಡಿ. ಕೋಟೆ ತಾಲೂಕಿನ ಮಾದಾಪುರ ಗ್ರಾಪಂ ಕೂಲಿ ನೀಡಿಲ್ಲ ಎಂದು ಕುಮಾರಸ್ವಾಮಿ ದೂರಿದರು. ಒಂದು ವಾರದೊಳಗೆ ಹಣ ಕೊಡಿಸುವುದಾಗಿ ಪಾಲಯ್ಯ ಭರವಸೆ ನೀಡಿದರು. ಫೋನ್ ಇನ್ ಕಾರ್ಯಕ್ರಮಕ್ಕೆ 20ಕ್ಕೂ ಹೆಚ್ಚಿನ ಸಾರ್ವಜನಿಕರು ದೂರವಾಣಿ ಮೂಲಕ ಕರೆ ಮಾಡಿ, ತಮ್ಮ ಹಾಗೂ ಗ್ರಾಮದ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆದರು. ಅಲ್ಲದೆ, ಹಲವಾರು ಮಂದಿ ಖುದ್ದಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಅಹವಾಲು ಸಲ್ಲಿಸಿದರು.
ಸಾರ್ವಜನಿಕ ಕುಂದುಕೊರತೆಗೆ ಸಂಬಂಧಿಸಿ ಸ್ವೀಕೃತವಾಗುವ ದೂರುಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ, ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಪಾಲಯ್ಯ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಪಂ ಸಿಇಒ ಪಿ.ಎ. ಗೋಪಾಲ್, ನಗರಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಉಪ ವಿಭಾಗಾಧಿಕಾರಿ ಜಗದೀಶ್ ಇದ್ದರು.