ಲೋಕಾಗೆ ಪ್ರಮೋದಾದೇವಿ ದೂರು
ಕ.ಪ್ರ. ವಾರ್ತೆ, ಮೈಸೂರು, ಜೂ.19
ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಸೇರಿದ ಸ್ಥಿರಾಸ್ತಿಯನ್ನು ಅಕ್ರಮ ಪರಭಾರೆ ಮಾಡಿದ ನಾಲ್ಕು ಮಂದಿ ಉಪ ನೋಂದಣಾಧಿಕಾರಿಗಳ ವಿರುದ್ಧ ಪ್ರಮೋದಾದೇವಿ ಒಡೆಯರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ಮೈಸೂರು ತಾಲೂಕಿನ ಕುರುಬಾರಹಳ್ಳಿ ಸರ್ವೆ ನಂ.4, ಕಸಬಾ ಹೋಬಳಿಯ ಸರ್ವೆ ನಂ.1 ಹಾಗೂ ಆಲನಹಳ್ಳಿಯ ಸರ್ವೆ ನಂ. 41ರಲ್ಲಿ ಒಟ್ಟು 15 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ನಾಲ್ವರು ಉಪ ನೋಂದಣಾಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.
ಉಪ ಲೋಕಾಯುಕ್ತರಿಗೆ ರವಾನೆ: ಒಡೆಯರ್ ಆಸ್ತಿಯನ್ನು ಅಕ್ರಮವಾಗಿ ಕಬಳಿಸಲು ಯತ್ನಿಸಿದ ಸಂಬಂಧ 5 ಪ್ರಕರಣಗಳು ಬೆಳಕಿಗೆ ಬಂದಿವೆ. ಎಂಜಿ ರಸ್ತೆಯ ನಿವೇಶನ ಪರಭಾರೆಗೆ ಸಂಬಂಧಿಸಿ ಉಪ ಲೋಕಾಯುಕ್ತ ಸುಭಾಷ ಬಿ. ಅಡಿ ಅವರೇ ವಿಚಾರಣೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ.
ಪ್ರಸ್ತುತ ಪ್ರಮೋದಾದೇವಿ ಒಡೆಯರ್ ನಾಲ್ಕು ದೂರುಗಳನ್ನು ನೀಡಿದ್ದು, ಇವುಗಳನ್ನೂ ಉಪ ಲೋಕಾಯುಕ್ತರಿಗೆ ರವಾನಿಸಲಾಗಿದೆ ಎಂದು ಮೈಸೂರು ವಿಭಾಗದ ಲೋಕಾಯುಕ್ತ ಎಸ್ಪಿ ಎಸ್.ಎಂ. ಜಗದೀಶ ಪ್ರಸಾದ್ ತಿಳಿಸಿದ್ದಾರೆ.