ವೈದ್ಯರ ವರ್ಗಾವಣೆಗೆ ವಿರೋಧ
ಅರಸೀಕೆರೆ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಹ ಪರಿಸ್ಥಿತಿ ಎದುರಾಗಿರುವಾಗಲೇ ವೈಯಕ್ತಿಕ ಕಾರಣಗಳಿಂದಾಗಿ ವೈದ್ಯರೊಬ್ಬರನ್ನು ಅಮಾನತುಗೊಳಿಸಿ, ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ತಾಪಂ ಸದಸ್ಯ ಲಕ್ಷ್ಮಣ ತರಾಟೆಗೆ ತೆಗೆದುಕೊಂಡ ಪ್ರಸಂಗ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾಪಂ ಅಧ್ಯಕ್ಷೆ ಹೇಮಾವತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನಿಮ್ಮ ವೈಯಕ್ತಿಕ ಜಗಳದಿಂದ ಬಡರೋಗಿಗಳ ಪಾಡು ಹೇಳತೀರದ್ದಾಗಿದ್ದು ಶಸ್ತ್ರ ಚಿಕಿತ್ಸಾ ತಜ್ಞ ಡಾ.ಪ್ರದೀಪ್ ಅವರನ್ನು ಯಾವ ಕಾರಣಕ್ಕೆ ಅಮಾನತ್ತು ಮಾಡಿಸಿದ್ದೀರಾ ಎಂಬುದನ್ನು ಸಭೆಯ ಗಮನಕ್ಕೆ ತರಬೇಕೆಂದು ತಾಕೀತು ಮಾಡಿದರು.
ನಮ್ಮ ಪಾತ್ರ ಇಲ್ಲ: ಇದಕ್ಕೆ ಉತ್ತರಿಸಿದ ಜೆ.ಸಿ.ಆಸ್ಪತ್ರೆ ಆಡಳಿತಾಧಿಕಾರಿ ಚಕ್ರಪಾಣಿ ಅವರ ಅಮಾನತ್ತಿನಲ್ಲಿ ನಮ್ಮ ಪಾತ್ರವೇನು ಇಲ್ಲ. ಮೇಲಾಧಿಕಾರಿಗಳು ಅವರನ್ನು ಆಮಾನತ್ತುಗೊಳಿಸಿದ್ದಾರೆ ಎಂದು ಉತ್ತರಿಸಿದರು. ತಾಪಂ ಸದಸ್ಯರಾದ ಬಿ.ಆರ್.ಜಯಣ್ಣ, ಎಚ್.ಟಿ.ಶಿವಮೂರ್ತಿ ಮಾತನಾಡಿ, ಡಾ. ಪ್ರದೀಪ್ ಅವರನ್ನು ವಾಪಸ್ ಕರೆಸಲು ತಾಲೂಕು ಪಂಚಾಯ್ತಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.
ಸಿಬ್ಬಂದಿ ನೇಮಿಸಿ: ಬಿಜೆಪಿ ಸದಸ್ಯ ದಿನೇಶ್ ತಾಲೂಕಿನಲ್ಲಿ ಕಣಕಟ್ಟೆ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಬರುತ್ತಾರೆ. ಇಲ್ಲಿನ ವೈದ್ಯರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ರಜೆಮೇಲೆ ಹೋಗಿದ್ದರೆ ಇಲ್ಲಿನ ಸಿಬ್ಬಂದಿಯನ್ನು ವರ್ಗಾವಣೆ ಮಾಡಿರುವುದರಿಂದ ಗ್ರಾಮೀಣ ಜನರಿಗೆ ತೀವ್ರ ತೊಂದರೆಯಾಗಿದ್ದು, ತಕ್ಷಣವೇ ಸಿಬ್ಬಂಧಿಯನ್ನು ನಿಯೋಜಿಸಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ರವಿ ಅವರನ್ನು ಒತ್ತಾಯಿಸಿದರು. ಕಾಂಗ್ರೆಸ್ ಸದಸ್ಯೆ ಲಕ್ಷ್ಮಿ ಹಂದ್ರಾಳಿನಲ್ಲಿ ಸರ್ಕಾರಿ ವೈದ್ಯ ಡಾ.ವರದರಾಜ್ ಜ್ರೋಗಿಗಳಿಗೆ ಚಿಕಿತ್ಸೆ ನೀಡದೆ ಜಾವಗಲ್ನ ನರ್ಸಿಂಗ್ಹೋಂ ಗೆ ಬರುವಂತೆ ತಿಳಿಸುತ್ತಿದು,್ದ ಸರ್ಕಾರಿ ಆಸ್ಪತ್ರೆಗಳು ಇದರಿಂದ ನಿಷ್ಪ್ರಯೋಜಕವಾಗುತ್ತಿವೆ ಎಂದು ದೂರಿದರು. ಇದಕ್ಕೆ ತಾಪಂ ಸದಸ್ಯರಾದ ಬಿ.ಆರ್.ಜಯಣ್ಣ, ಲಕ್ಷ್ಮಣ, ಎಚ್.ಟಿ.ಶಿವಮೂರ್ತಿ ಧ್ವನಿಗೂಡಿಸಿದರು.
ಅವ್ಯವಹಾರ ನಡೆದರೆ ಕ್ರಮ: ತಹಶೀಲ್ದಾರ್ ನರಾಜ್ ಮಾಹಿತಿ ನೀಡಿ, 110 ಗ್ರಾಮಗಳಲ್ಲಿ ಟಾಸ್ಕ್ಫೋರ್ಸ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗಿದ್ದು ಸರಬರಾಜು ಮಾಡಿದವರು ತಕ್ಷಣ ಬಿಲ್ ಪಾವತಿಸಿ ಹಣ ಪಡೆಯಬಹುದು. ನೀರು ಪೂರೈಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿದ್ದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಹಾರನಹಳ್ಳಿ ಕೆರೆಗೆ ಯಗಚಿ ನೀರು ಹರಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದು, ಇದರ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದದ್ದು ಸರ್ಕಾರ. ಸ್ಥಳಕ್ಕೆ ಡಿಸಿ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ತೆರೆದ ಕೊಳವೆ ಬಾವಿ ಮುಚ್ಚಲು ಸೂಚನೆ
ಅರಸೀಕೆರೆ: ಬಿಜಾಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಅಕ್ಷತಾ 4 ವರ್ಷದ ಬಾಲಕಿ ಕೊಳವೆಬಾವಿಗೆ ಬಿದ್ದು ರಾಜ್ಯಾದ್ಯಂತ ಸುದ್ದಿಯಾಗಿರುವಾಗಲೇ ತಾಲೂಕಿನ ಹಲವೆಡೆ ಕೊಳವೆಬಾವಿಗಳನ್ನು ಕೊರೆಯಿಸಿ ಹಾಗೆಯೇ ಬಿಟ್ಟಿರುವ ಅನೇಕ ಪ್ರಕರಣಗಳು ಅಲ್ಲಲ್ಲಿ ಕಾಣಸಿಗುತ್ತಿವೆ. ಈ ವಿಷಯ ತಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ತಾಲೂಕಿನ ಸಂಕೋಡನಹಳ್ಳಿ ಕೊಳವೆಬಾವಿಗೆ ಅಳವಡಿಸಿದ ಕೇಸಿಂಗ್ ಪೈಪ್ಗೆ ಮುಚ್ಚಳ ಅಳವಡಿಸಿಲ್ಲ. ದುರಂತ ಸಂಭವಿಸುವ ಮುನ್ನ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಯಿತು. ಜಿಲ್ಲಾಧಿಕಾರಿ ಅನ್ಬುಕುಮಾರ್ ಈ ಹಿಂದೆಯೇ ವೈಫಲ್ಯ ಹೊಂದಿರುವ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸುವಂತೆ ಜಿಪಂ ಸಿಇಓಗೆ ಸೂಚನೆ ನೀಡಿದ್ದರು. ಆದರೆ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸದಸ್ಯರು ಆರೋಪಿಸಿದರು.