ಶರವಣ ಬಂಧನ; 30 ಮಂದಿ ವಶ
ಕೊಳ್ಳೇಗಾಲ: ಕಾಡುಗಳ್ಳ ಮರಿ ವೀರಪ್ಪನ್ ಎಂದೇ ಕುಖ್ಯಾತಿ ಪಡೆದು ಈಗ ಸೇಲಂ ಜೈಲಿನಲ್ಲಿರುವ ಮರಿ ವೀರಪ್ಪನ್ ಶರವಣನನ್ನು ಶುಕ್ರವಾರ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು ಬಾಡಿ ವಾರೆಂಟ್ ಪಡೆದು ತಮ್ಮ ವಶಕ್ಕೆ ಪಡೆಯಲು ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು 30ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗಿದೆ.
ಅರಣ್ಯ ಇಲಾಖೆ ವಶಕ್ಕೆ ಪಡೆದಿರುವ 30 ಮಂದಿಯಿಂದ ಕೆಲವು ಗುಪ್ತ ಮಾಹಿತಿಗಳು ವಿಚಾರಣೆ ವೇಳೆ ದೊರೆತಿದೆ ಎನ್ನಲಾಗಿದ್ದು, ಆದರೆ ಈ ಸಂಬಂಧ ಯಾವುದೇ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಮಧ್ಯೆ ಅರಣ್ಯಾಧಿಕಾರಿಗಳು ಶರವಣನ್ ಜೊತೆಯಲ್ಲಿ 25 ಮಂದಿ ಗುರುತಿಸಿಕೊಂಡಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದು ಈಗಾಗಲೇ ಆ ಹೆಸರುಗಳು ಬಹಿರಂಗಗೊಂಡಿವೆ.
ಪಟ್ಟಿ ತಯಾರಿಗಿತ್ತು: ಈಗಾಗಲೇ ಕಳೆದ 10 ದಿನಗಳ ಹಿಂದೆ ಅಧಿಕಾರಿಗಳು ತಯಾರಿಸಿದ್ದ ಪಟ್ಟಿಯಲ್ಲಿ ಕಾಳಿಯಪ್ಪ ಎಂಬುವರ ಪುತ್ರ ಶಕ್ತಿವೇಲು ಹೆಸರಿದ್ದು ಆತ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಅಲ್ಲದೆ ಕಾರೆಕಾಡು ಗ್ರಾಮದ ಚಿನ್ನತಂಬಿ ಮಗ ಶರವಣ ನುರಿತ ಬೇಟೆಗಾರನಾಗಿದ್ದಾನೆ. ಈತನ ಬಳಿ 15ಕ್ಕೂ ಹೆಚ್ಚು ಬೇಟೆ ನಾಯಿ ಹಾಗೂ ನಾಲ್ಕೈದು ಬಂದೂಕುಗಳಿವೆ ಎಂದು ಮಹದೇಶ್ವರ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಾಸುದೇವ ಮೂರ್ತಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈಗಾಗಲೇ ಹೊಗೇನಕಲ್‌ನ ಗೋವಿಂದರಾಜು, ಮಾರ್ಟಳ್ಳಿಯ ರಾವಣನ್, (ಹಾಲಿ ವಾಸ ತಮಿಳುನಾಡಿನ ಕಾರೆಕಾಡು) ತಮಿಳುನಾಡಿನ ಯಮಲೂರಿನ ಏಳುಮಲೈ ಮಗನಾದ ಮಣಿ, ಜಾಗೇರಿಯ ತಂಗರಾಜು, ಜಂಬುಟಪಟ್ಟಿಯ ಗೋವಿಂದರಾಜು, ಕುಳ್ಳ ಗೋವಿಂದ, ಗೋವಿಂದು, ಗೋಪಿನಾಥಂನ ಅಯ್ಯನ್ ಪೆರುಮಾಳ್, ಕಾಳಟ್ಟಿಕೊಟ್ಟಿಯೂರಿನ ಮಣಿ, ಕಾರೆಕಾಡು ಗ್ರಾಮದ ಮಂತ್ರಿ, ಪನ್ನಗಾಡು ಗ್ರಾಮದ ನಾರಾಯಣನ್, ಯಮಲೂರು ಗ್ರಾಮದ ಪುಂಗ, ವೇಲಯ್ಯ, ರವಿ, ಮೈಲುಸ್ವಾಮಿ, ಗಣೇಶ, ಶಕ್ತಿವೇಲು, ಗೋವಿಂದಪಾಡಿಯ ಶರವಣನ್, ಇಂಡಿಗನತ್ತ ಗ್ರಾಮದ ಮೊಗಂಮಾದಯ್ಯ ಸೇರಿದಂತೆ 25 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿ ಕಾರ್ಯಾಚರಣೆ ಸಹಾ ನಡೆಸುತ್ತಿದ್ದಾರೆ.
ವೀರಪ್ಪನ್ ಎಂದರೆ ಖುಷಿ- ವಾಸುದೇವ ಮೂರ್ತಿ: ಶರವಣನ್ ಹೇಳಿಕೊಳ್ಳುವಂತಹ ಮಟ್ಟಿಗೆ ಬೆಳೆದಿಲ್ಲ. ಆದರೆ, ಈತನನ್ನು ಸದೆ ಬಡಿಯದೆ ಬಿಟ್ಟರೆ ಮುಂದೆ ವೀರಪ್ಪನ್ ಮೀರಿಸುವಷ್ಟರ ಮಟ್ಟಿಗೆ ಬೆಳೆಯಬಲ್ಲ. ಈತನ ಬಳಿ ಸರ್ಕಾರಿ 303 ಗನ್ ಇದ್ದು, ಈತ ಪಾನಮತ್ತನಾಗಿಯೆ ಬೇಟೆಗೆ ಅರಣ್ಯಕ್ಕೆ ಆಗಮಿಸುತ್ತಾನೆ. ಆ ವೇಳೆಯಲ್ಲಿ ಜಿಂಕೆ ಹಾಗೂ ಕಡವೆ ಬೇಟೆಯಾಡುವುದರಲ್ಲಿ ಈತ ನಿಸ್ಸಿಮ. ಜಿಂಕೆ ಮಾಸ ಈತನಿಗೆ ಪ್ರಿಯ. ಈತನ ಬಂಧಿಸಿ ಅಟ್ಟಹಾಸ ಅಡಗಿಸದಿದ್ದರೆ ಮುಂದೊಂದು ದಿನ ಎರಡು ರಾಜ್ಯಗಳಿಗೂ ಈತ ಮಾರಕವಾಗಿವಾಗುತ್ತಿದ್ದ. ಈತ ತಮಿಳುನಾಡಿನ ವಾಸಿಯಾದರು ಕರ್ನಾಟಕದ ಅರಣ್ಯದಲ್ಲಿ ಬೇಟೆಗಿಳಿಯುತ್ತಿದ್ದಾನೆ. ನಮ್ಮ ಭಾಗದ ವನ್ಯಸಂಪತ್ತು ವನ್ಯಜೀವಿ ನಾಶಕ್ಕೆ ಕಾರಣನಾಗುತ್ತಿದ್ದ ಮಾತ್ರವಲ್ಲ ಈತನ ಅಟ್ಟಹಾಸಕ್ಕೆ ತಿರುಗಿಬಿದ್ದ ಕೆಲ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳನ್ನು ಈತ ಟಾರ್ಗೆಟ್ ಮಾಡಿಕೊಂಡಿದ್ದಾನೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಾಸುದೇವಮೂರ್ತಿ ಸ್ಪಷ್ಟಪಡಿಸಿದರು. ಬಾಡಿ ವಾರೆಂಟ್ ಮೂಲಕ ಈತನನ್ನು ಶುಕ್ರವಾರ ವಶಕ್ಕೆ ಪಡೆದು 10 ದಿನಗಳ ಕಾಲ ವಿಚಾರಣೆ ನಡೆಸುತ್ತೆವೆ. ನಮಗೆ ಬೇಕಾದ ಶರವಣ ಅಧಿಕಾರಿಗಳಿಗೆ ಸಿಕ್ಕಿ ಬಿದ್ದನೋ ಅಥವಾ ಶರಣಾದನೋ ಎಂಬುದು ಇನ್ನು ಚರ್ಚೆಯ ವಿಚಾರವಾಗಿದೆ. ಆದರೆ ತಮಿಳುನಾಡು ಅಧಿಕಾರಿಗಳು ಬಂಧಿಸಿರುವುದನ್ನು ದೃಢಪಡಿಸಿದಿದ್ದಾರೆ ಎಂದರು.
ಐದು ಪ್ರಕರಣಗಳಿವೆ: ಹನುಮಂತಯ್ಯ - ಸೇಲಂ ಜೈಲಿನಲ್ಲಿರುವ ಕಾಡುಗಳ್ಳ ಶರವಣನ್ ಮೇಲೆ ಈಗಾಗಲೇ 5 ಪ್ರಕರಣಗಳಿವೆ. ಈತನ ಗುಂಪಿನಲ್ಲೇ ಗುರುತಿಸಿಕೊಂಡಿರುವ ಮಾರ್ಟಳ್ಳಿ ಗ್ರಾಮದ ರಾವಣನ್ ಸಹ ನುರಿತ ಬೇಟೆಗಾರನಾಗಿದ್ದು, ಈತನ ಜೊತೆ ಈಗಾಗಲೇ 20 ಮಂದಿ ಗುರುತಿಸಿಕೊಂಡಿರುವುದು ದೃಢಪಟ್ಟಿದೆ ಎಂದು ತಿಳಿಸಿದರು. ಶರವಣನ್ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಹಾಗೂ ಮಹತ್ವದ ವಿಚಾರಣೆ ಕಲೆ ಹಾಕುವಲ್ಲಿ ತಮಿಳುನಾಡಿನ ಡಿವೈಎಸ್ಪಿ ರವಿ ಹಾಗೂ ಎಸ್ಪಿ ಕಲಾನಿಧಿ ಸಹಕರಿಸಿದ್ದಾರೆ ಎಂದರು.
ಎನ್. ನಾಗೇಂದ್ರಸ್ವಾಮಿ