ಸುವರ್ಣ ಗ್ರಾಮೋದಯದ ಬದಲು ಗ್ರಾಮ ವಿಕಾಸ ಯೋಜನೆ
ಮೈಸೂರು: ರಾಜ್ಯ ರಚನೆಯಾಗಿ ಐವತ್ತು ವರ್ಷಗಳ ತುಂಬಿದ ಅಂಗವಾಗಿ ಜಾರಿಗೆ ತಂದಿದ್ದ ಸುವರ್ಣ ಗ್ರಾಮೋದಯ ಯೋಜನೆಯು ಪ್ರಗತಿಯಲ್ಲಿರುವ ಕಾಮಗಾರಿಗಳು ಮುಗಿದ ನಂತರ ಬಂದ್ ಆಗಲಿದೆ. ಇದರ ಬದಲಿಗೆ ಬರಲಿದೆ ಗ್ರಾಮ ವಿಕಾಸ ಯೋಜನೆ.
ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸುವರ್ಣಗ್ರಾಮ ಯೋಜನೆಯನ್ನು ಜಾರಿಗೆ ತರಲಾಗಿತ್ತು. ವರ್ಷಕ್ಕೆ ಒಂದು ಸಾವಿರ ಗ್ರಾಮಗಳನ್ನು ಆಯ್ಕೆ ಮಾಡಿ, ತಲಾ 1 ಕೋಟಿ ರು.ವೆಚ್ಚದಲ್ಲಿ ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶ.
1ನೇ ಹಂತದಲ್ಲಿ ರಾಜ್ಯದ 1,204, 2ನೇ ಹಂತದಲ್ಲಿ ಗುಲ್ಬರ್ಗ ಕಂದಾಯ ವಿಭಾಗದ 6 ಜಿಲ್ಲೆಗಳ 222, 3ನೇ ಹಂತದಲ್ಲಿ ರಾಜ್ಯದ 1,574, 4ನೇ ಹಂತದಲ್ಲಿ ಗುಲರ್ಗ ಕಂದಾಯ ವಿಭಾಗದ 6 ಜಿಲ್ಲೆಗಳ 381, 5ನೇ ಹಂತದಲ್ಲಿ ರಾಜ್ಯದ 2,162 ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ.
ಅದರಂತೆ ಯೋಜನೆಯ 1ನೇ ಹಂತದಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಉಳಿದ
ಹಂತಗಳ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ರಾಜ್ಯದ ಸುವರ್ಣ ವರ್ಷಾಚರಣೆ ಅಂಗವಾಗಿ ಜಾರಿಗೆ ತಂದ ಈ ಯೋಜನೆ ದೀರ್ಘ ಕಾಲ ಮುಂದುವರೆಯಬಾರದು. ಅಲ್ಲದೇ ಶಾಸಕರು ರಾಜಕೀಯ ಕಾರಣಗಳಿಗಾಗಿ ಸುವರ್ಣ ಗ್ರಾಮ ಯೋಜನೆಗೆ ಗ್ರಾಮಗಳನ್ನು ಆಯ್ಕೆ ಮಾಡುತ್ತಿರುವುದು ಯೋಜನೆಯ ಸಾಫಲ್ಯ ಕಾಣುವುದಕ್ಕಿಂತ ವೈಫಲ್ಯದ ಕಡೆ ಹೆಚ್ಚು ಸಾಗಿದೆ. ಹೀಗಾಗಿ ಹಾಲಿ ವಿವಿಧ ಹಂತಗಳಲ್ಲಿ ಆಯ್ಕೆಯಾಗಿರುವ ಸುವರ್ಣ ಗ್ರಾಮ ಕಾಮಗಾರಿಗಳನ್ನು ಮುಕ್ತಾಯಗೊಳಿಸಿದ ನಂತರ ಈ ಯೋಜನೆ ಬಂದ್ ಆಗಲಿದೆ. ಇದನ್ನು ಅಧಿಕೃತವಾಗಿ ಹೇಳಿಲ್ಲ. ಆದರೆ ಮೌಖಿಕವಾಗಿ ಅಧಿಕಾರಿಗಳಿಗೆ ಈ ರೀತಿಯ ಸೂಚನೆ ಬಂದಿದೆ. ಅಲ್ಲದೇ ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಬಜೆಟ್ನಲ್ಲಿಯೇ ಸುವರ್ಣ ಗ್ರಾಮೋದಯ ಯೋಜನೆಯ ಮಾದರಿಯಲ್ಲಿ ಗ್ರಾಮ ವಿಕಾಸ ಯೋಜನೆಯನ್ನು ಜಾರಿಗೆ ತರುವ ವಿಷಯವನ್ನು ಪ್ರಸ್ತಾಪಿಸಿದೆ. ಸುವರ್ಣ ಗ್ರಾಮೋದಯ ಯೋಜನೆ ಜಾರಿ ಮಾಡುವಾಗ ಎದುರಾಗಿರುವ ಸಮಸ್ಯೆಗಳನ್ನು ಗ್ರಾಮ ವಿಕಾಸ ಯೋಜನೆಯಲ್ಲಿ ನಿವಾರಿಸುವ ಉದ್ದೇಶ ಇದೆ.
445 ಕೋಟಿ ರು. ನಿಗದಿ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪದನಿಮಿತ್ತ ಉಪ ಕಾಯಂದರ್ಶಿ ಹಾಗೂ ಸುವರ್ಣ ಗ್ರಾಮ ಯೋಜನೆಯ ನಿರ್ದೇಶಕ ಬೂವನಹಳ್ಳಿ ನಾಗರಾಜ್ ಅವರು ಇತ್ತೀಚೆಗೆ ಹೊರಡಿಸಿರುವ ಆದೇಶದ ಪ್ರಕಾರ, 2014-15ನೇ ಸಾಲಿನ ಆಯವ್ಯಯದಲ್ಲಿ ಪ್ರಗತಿಯಲ್ಲಿರುವ ಸುವರ್ಣ ಗ್ರಾಮೋದಯ ಯೋಜನೆಯನ್ನು ಪೂರ್ಣಗೊಳಿಸಲು ಹಾಗೂ 2014-15ನೇ ಸಾಲಿನಿಂದ ಆರಂಭವಾಗುವ ಗ್ರಾಮ ವಿಕಾಸ ಯೋಜನೆಗೆ ರು. 445.30 ಕೋಟಿಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
ಈ ಪೈಕಿ ಬಂಡವಾಳ ವೆಚ್ಚಗಳು, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯ ಲೆಕ್ಕ ಶೀರ್ಷಿಕೆಯಡಿ ಕ್ರಮವಾಗಿ ರು. 230.19 ಕೋಟಿ, 171.21 ಕೋಟಿ ಮತ್ತು 43.90 ಕೋಟಿಗಳು ನಿಗದಿಯಾಗಿವೆ. ಅದರಂತೆ ಮೊದಲನೇ ಕಂತಿನ ರು. 111.32 ಕೋಟಿಗಳ ಅನುದಾನವನ್ನು ಆಂತರಿಕ ಆರ್ಥಿಕ ಸಲಹೆಗಾರರು ನೀಡಿರುವ ಸಹಮತಿಯಂತೆ ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಪ್ರಸ್ತುತ ಹೆಚ್ಚಿಗೆ ಅನುದಾನವನ್ನು ಅಖೈರು ಶಿಲ್ಗಾಗಿ ಉಳಿಸಿಕೊಂಡಿರುವ ಜಿಲ್ಲೆಗಳನ್ನು ಹೊರತುಪಡಿಸಿ ಹಾಗೂ ಅನುದಾನ ಬೇಡಿಕೆ ಇರುವ 20 ಜಿಲ್ಲೆಗಳಿಗೆ ಈ ಕೆಳಕಂಡಂತೆ ಅನುದಾನ ಬಿಡುಗಡೆ ಮಾಡಲಾಗಿದೆ.
ಬಂಡವಾಳ ವೆಚ್ಚಗಳು: ರು. 57.54 ಕೋಟಿಗಳು, ವಿಶೇಷ ಘಟಕ ಯೋಜನೆ- ರು. 42.80 ಕೋಟಿಗಳು, ಗಿರಿಜನ ಉಪ ಯೋಜನೆ- ರು. 10.97 ಕೋಟಿಗಳು. ಒಟ್ಟು ರು. 111.32 ಕೋಟಿಗಳು. ಈ ಅನುದಾನವನ್ನು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆ ಮಾಡಿದ ಗ್ರಾಮಗಳ ಅನುಮೋದಿತ ಗ್ರಾಮಾಭಿವೃದ್ಧಿ ಯೋಜನೆಯ ಕಾಮಗಾರಿಗಳ ಅನುನಕ್ಕಾಗಿ ಮಾತ್ರ ವಿನಿಯೋಗಿಸಬೇಕು. ವಿಶೇಷ ಘಟಕ ಯೋಜನೆ ಮತ್ತುಗಿರಿಜನ ಉಪ ಯೋಜನೆಯಡಿ ಒದಗಿಸಿರುವ ಅನುದಾನವನ್ನು ಜಿಲ್ಲೆಗಳಿಗೆ. ಗ್ರಾಮಗಳಿಗೆ ಹಂಚಿಕೆಯಾಗಿರುವ ಅನುದಾನದಲ್ಲಿ ಆಯಾ ಲೆಕ್ಕ ಶೀರ್ಷಿಕೆಯಡಿ ಕಡ್ಡಾಯವಾಗಿ ಭರಿಸಬೇಕು. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರವಾದ ವರದಿಯನ್ನು ಪ್ರತ್ಯೇಕವಾಗಿ ಪ್ರತಿ ಮಾಹೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಅಂಶಿ ಪ್ರಸನ್ನಕುಮಾರ್