ಕಸದ ರಾಶಿ ಬೃಹದಾಕಾರ
ಮೈಸೂರು: ನೆರೆಯವರು ತಮ್ಮ ಮನೆಯ ಕಸವನ್ನು ಪಕ್ಕದ ಮನೆಗೆ ತಳ್ಳಿದರು ಎಂಬ ವಿಷಯಕ್ಕೆ ದೊಡ್ಡ ಜಗಳವೇ ನಡೆಯುವುದನ್ನು ಇಲ್ಲ ಎನ್ನುವಂತಿಲ್ಲ. ಅಲ್ಲದೆ ಕೆಲವೊಮ್ಮೆ ಆ ಜಗಳ ವಿಕೋಪಕ್ಕೆ ಹೋಗಿ ಅನಾಹುತಗಳೇ ಘಟಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಬೇರೆ ವಾರ್ಡ್‌ನ ತ್ಯಾಜ್ಯವನ್ನು ತಮ್ಮ ಬಡಾವಣೆಯಲ್ಲಿ ಸುರಿಯಲು ನಿವಾಸಿಗಳು ಸಮ್ಮತಿಸುವರೆಂಬುದನ್ನು ಚಿಂತಿಸಬೇಕು.
ಅಂತಹ ಸನ್ನಿವೇಶ ಎದುರಾಗಿರುವುದು ಮೈಸೂರಿನ ಜೆ.ಪಿ.ನಗರ ಹಾಗೂ ವಿದ್ಯಾರಣ್ಯಪುರಂ ಸುತ್ತಮುತ್ತ ಇರುವ ಬಡಾವಣೆಗಳ ನಿವಾಸಿಗಳಿಗೆ. ಏಕೆಂದರೆ ಈ ಭಾಗದ ವ್ಯಾಪ್ತಿಗೆ ಸೇರಿರುವ ಜಾಗದಲ್ಲಿಯೇ ನಿರ್ಮಾಣವಾಗಿದೆ ಎಕ್ಸೆಲ್‌ಪ್ಲಾಂಟ್. ಇದು ಬೃಹತ್ ಘನತ್ಯಾಜ್ಯ ಸಂಸ್ಕರಣಾ ಘಟಕ. ಇಡೀ ಮೈಸೂರು ನಗರದ ಕಸವನ್ನು ಸಂಗ್ರಹಿಸುವ ತಾಣ. ಇದರಿಂದ ಸೂಸುವ ವಾಸನೆ ಸಹಿಸಲಾಗದೆ ಈ ಘಟಕವನ್ನು ಸ್ಥಳಾಂತರಿಸುವಂತೆ ಸರಣಿ ಹೋರಾಟಗಳೇ ನಡೆದಿವೆ. ಆದರೆ ಇತ್ತೀಚೆಗೆ ಅಂತಹ ಗಬ್ಬು ವಾಸನೆ ಬಡಾವಣೆಗೆ ತಾಕದ ಕಾರಣ ಮೌನ ವಹಿಸಲಾಗಿದೆ. ಆದರೆ ಮೈಸೂರು - ನಂಜನಗೂಡು ರಸ್ತೆ ಹಾಗೂ ಜೆ.ಪಿ. ನಗರದ ವರ್ತುಲ ರಸ್ತೆಯಲ್ಲಿ ಸಂಚರಿಸುವವರಿಗೆ ದುರ್ನಾತ ಬಿರುವುದು ಇಲ್ಲವೆನ್ನುವಂತಿಲ್ಲ. ಆದರೆ ಸಮೀಪದ ಬಡಾವಣೆ ನಿವಾಸಿಗಳು ಸದ್ಯಕ್ಕಂತೂ ನೆಮ್ಮದಿಯಿಂದ ಇದ್ದಾರೆ. ಏಕೆಂದರೆ ದುರ್ನಾತ ತಡೆಯಲು ತಿಂಗಳಿಗೆ ನಗರ ಪಾಲಿಕೆಯು 96 ಸಾವಿರ ಖರ್ಚು ಮಾಡುತ್ತಿದೆ.
ಕೊಳೆತು ನಾರುತ್ತಿದೆ
ಈ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಎಡಿಬಿ ನೆರವಿನೊಂದಿಗೆ 2000 ರಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಘನತ್ಯಾಜ್ಯ ಸಂಸ್ಕರಿಸಿ ಅದರಿಂದ ಗೊಬ್ಬರ ತಯಾರಿಸುವ ಕೆಲಸ ನಡೆಸಲಾಗುತ್ತಿದೆ. ಇದರ ಒಟ್ಟು ಸಾಮರ್ಥ್ಯ 150 ರಿಂದ 160 ಟನ್ ಮಾತ್ರ. ಆದರೆ ಮೈಸೂರಿನ ವಿವಿಧ ವಾರ್ಡ್‌ಗಳಿಂದ ಪ್ರತಿ ದಿನ 300 ಟನ್‌ಗೂ ಅಧಿಕ ಕಸದ ರಾಶಿ ಬಂದು ಇಲ್ಲಿನ ಆವರಣ ಸೇರುತ್ತಿದೆ. ಸಂಸ್ಕರಿಸುವ ಕಾರ್ಯ ನಡೆದರೂ ಉಳಿದ ತ್ಯಾಜ್ಯವು ಬೆಟ್ಟದಂತೆ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಇಲ್ಲಿ ಕೇವಲ ಬಳಸಿ ಬಿಸಾಡಿರುವ ವಸ್ತುಗಳು ಮಾತ್ರವಲ್ಲ, ಅಥವಾ ಇನ್ನಿತರ ಕಸವಲ್ಲ. ಸತ್ತ ಪ್ರಾಣಿ ಪಕ್ಷಿಗಳು ಮತ್ತು ನಗರದ ವಿವಿಧ ಭಾಗಗಳಲ್ಲಿನ ಮಾಂಸದ ಮಾರುಕಟ್ಟೆಯ ತ್ಯಾಜ್ಯಗಳು ಶೇಖರವಾಗಿದ್ದು, ಅವು ಕೊಳೆತು ಜೀವಂತ ಪ್ರಾಣಿಗಳಿಗೆ ಅಹಾರದ ತಾಣವಾಗಿದೆ. ದುರ್ನಾತದಿಂದ ಮುಕ್ತ ಮಾಡಲು ಹಾಗೂ ಈ ಭಾಗದ ನಾಗರಿಕರು ನೆಮ್ಮದಿಯಾಗಿ ವಾಸ ಮಾಡಬೇಕಾದರೆ ಇಲ್ಲಿಗೆ ಬರುವ ಅಧಿಕ ತ್ಯಾಜ್ಯವನ್ನು ತಪ್ಪಿಸುವ ಅಗತ್ಯವಿದೆ. ಇದಕ್ಕಾಗಿ ಈ ಹಿಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ.ರಾಮದಾಸ್ ಅವರು 9 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಸ್ಕರಿಸುವ ಘಟಕ ಸ್ಥಾಪಿಸುವ ಯೋಜನೆ ರೂಪಿಸಿದ್ದರು. ಆದರೆ 2 ವರ್ಷ ಕಳೆದರೂ ಅದು ಅನುಷ್ಠಾನವಾಗದೆ ಕಸದ ರಾಶಿಯು ಬೆಟ್ಟದಂತೆ ಬೃಹದಾಕಾರವಾಗಿ ಬೆಳೆದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಸಕ್ತಿಯ ಕೊರತೆಯೂ ಇದಕ್ಕೆ ಕಾರಣ.
ಎಕ್ಸೆಲ್ ಪ್ಲಾಂಟ್‌ನಲ್ಲಿ ಇರುವ ನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪ್ರತಿದಿನ 150 - 160 ಟನ್ ಕಸವನ್ನು ಸಂಸ್ಕರಿಸುವ ಕೆಲಸ ನಿರಂತರವಾಗಿ ನಡೆದಿದೆ. ಇಂದಿನ ಜನಸಂಖ್ಯೆಗೆ ಅನುಗುಣವಾಗಿ ತ್ಯಾಜ್ಯ ಸಂಗ್ರಹವು ಅಧಿಕವಾಗಿದ್ದು, ಹೆಚ್ಚುವರಿಯಾಗಿ ತರುವ ಕಸವನ್ನು ನಾವು ಘಟಕದ ಒಳಗೂ ಬಿಡುವುದಿಲ್ಲ. ಅದನ್ನು ಆವರಣದಲ್ಲಿಯೇ ಸುರಿಯಲಾಗುತ್ತಿದೆ. ಕಸದ ನಿರ್ವಹಣೆಯು ಸಾರ್ವಜನಿಕರ ಸಹಭಾಗಿತ್ವ ಇಲ್ಲದೆ ಸಮರ್ಪಕವಾಗಿ ನಿರ್ವಹಿಸುವುದು ಸುಲಭವಲ್ಲ. ಹಸಿ ಹಾಗೂ ಒಣಕಸವನ್ನು ಬೇರ್ಪಡಿಸಿ ನಾಗರಿಕರು ಕೊಡುವ ಕೆಲಸ ಮಾಡಬೇಕು.
- ಹರೀಶ್, ಮುಖ್ಯಸ್ಥ, ಘನತ್ಯಾಜ್ಯ ನಿರ್ವಹಣಾ ಘಟಕ, ಮೈಸೂರು ಮಹಾನಗರ ಪಾಲಿಕೆ
ರಾಶಿ ರಾಶಿ ಕಸ ಸಂಗ್ರಹವಾಗುತ್ತಿರುವ ಕಾರಣ, ಅದರ ದುರ್ನಾತವು ಮೈಸೂರು- ನಂಜನಗೂಡು ರಸ್ತೆ ಹಾಗೂ ಜೆ.ಪಿ.ನಗರದ ವರ್ತುಲ ರಸ್ತೆಯಲ್ಲಿ ಸಂಚರಿಸುವವರಿಗೆ ವಾಕರಿಕೆ ತರಿಸಿದೆ. ದೇಶದಲ್ಲಿಯೇ ಎರಡನೇ ಸ್ವಚ್ಛತಾನಗರ ಎಂಬ ಪ್ರಸಿದ್ಧಿ ಗಳಿಸಿರುವ ಮೈಸೂರಿಗೆ ಇದೊಂದು ಕಪ್ಪುಚಿಕ್ಕೆ.
- ಎಂ.ಎನ್. ರಮೇಶ್, ವಾಹನ ಚಾಲಕ
ಕಳೆದ ಅನೇಕ ವರ್ಷಗಳಿಂದ ಎಕ್ಸೆಲ್ ಪ್ಲಾಂಟ್‌ನ ಕಸದ ರಾಶಿಯಿಂದ ಸುತ್ತಮುತ್ತ ಬಡಾವಣೆಯ ಜನರಿಗೆ ತೊಂದರೆ ತಪ್ಪಿದ್ದಲ್ಲ. ಹಗಲಿನ ವೇಳೆ ವಾಸನೆ, ರಾತ್ರಿ ವೇಳೆ ಸೊಳ್ಳೆ ಕಾಟ. ನಿದ್ರೆ ಹಾಗೂ ಊಟ ಮಾಡಲು ಆಗದೆ ಪ್ರತಿದಿನ ನರಕಯಾತನೆ ಅನುಭವಿಸಿದ್ದೇವೆ. ಇಂತಹ ವಾತಾವರಣ ಮಾರಕ ಕಾಯಿಲೆಗೂ ವರದಾನವಾಗಿದೆ. ಹೋರಾಟಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ.
- ಕೃಷ್ಣಮೂರ್ತಿ, ನಿವಾಸಿ, ಜೆ.ಪಿ.ನಗರ
-ಮಾ. ವೆಂಕಟೇಶ್