ಆದಿವಾಸಿಗಳ ಸಮಸ್ಯೆ ಬಗೆಹರಿಸಲು ಬದ್ಧ
ಕ.ಪ್ರ. ವಾರ್ತೆ, ಹುಣಸೂರು, ಜೂ.22
ಮೈಸೂರು ಮತ್ತು ಕೊಡಗು ಜಿಲ್ಲೆಯ ಆದಿವಾಸಿ ಹಾಡಿಗಳಿಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಮದನ್ ಗೋಪಾಲ್ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ತಾಲೂಕಿನ ವಿವಿಧ ಹಾಡಿಗಳಿಗೆ ಭೇಟಿ ನೀಡಿದ್ದ ಅವರು, ಅರಣ್ಯ ಹಕ್ಕು ಕಾಯ್ದೆಯನ್ನು ಶೀಘ್ರವಾಗಿ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿ ವೈಯಕ್ತಿಕ ಹಾಗೂ ಸಾಮೂಹಿಕ ಹಕ್ಕು ಪತ್ರ ನೀಡಲು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗಳಿಗೆ ಸೂಚಿಸಲಾಗುವುದು. ಈ ಸಂಬಂಧ ರಾಜ್ಯ ಮಟ್ಟದಲ್ಲಿ ಕಂದಾಯ, ಸಮಾಜ ಕಲ್ಯಾಣ ಹಾಗೂ ಅರಣ್ಯ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡ ಅಧಿಕಾರಿಗಳ ಸಭೆ ಕರೆದು ವೀಡಿಯೋ ಕಾನ್ಫ್ರೆನ್ಸ್ ನಡೆಸುವುದಾಗಿ ತಿಳಿಸಿದರು.
ಅರಣ್ಯದಿಂದ ಪುನರ್ ವಸತಿ ನೀಡದೆ ಮೊದಲೆ ಹೊರಹಾಕಿರುವ ಆದಿವಾಸಿ ಕುಟುಂಬಗಳಿಗೆ ರಾಜ್ಯ ಹೈಕೋರ್ಟ್ ತೀರ್ಪಿನ ಅನ್ವಯ ಪುನರ್ ವಸತಿ ಸೌಲಭ್ಯ ಕಲ್ಪಿಸಲು ಸಂಪುಟ ಸಭೆಗೆ ಪ್ರಸ್ತಾವನೆ ಕಳುಹಿಸಿ ಕ್ರಮ ಜರುಗಿಸಲಾಗುವುದು. ನಾಗರಹೊಳೆ ರಾಷ್ಟೀಯ ಉದ್ಯಾನವು ಈಗ ಹುಲಿ ಸಂರಕ್ಷಣಾ ನೆಲೆಯಾಗಿರುವುದರಿಂದ ಕಾಡಿನ ಹಾಡಿಗಳಲ್ಲೆ ನೆಲೆಸುವವರಿಗೆ ಕನಿಷ್ಠ ಸೌಲಭ್ಯವಾದ ಮನೆ, ಶಾಲೆ, ಸಂಪರ್ಕ ರಸ್ತೆ, ಅಂಗನವಾಡಿ, ಕುಡಿಯುವ ನೀರು, ಸೌರಶಕ್ತಿಯಿಂದ ಬೆಳಕನ್ನು ಕೇಂದ್ರೀಯ ಹುಲಿ ಸಂರಕ್ಷಣಾ ಮಂಡಳಿಯ ಒಪ್ಪಿಗೆ ಪಡೆದು ಒದಗಿಸಲಾಗುವುದು.
ಅಗತ್ಯ ನೆರವಿನ ಭರವಸೆ: ಹೆಚ್ಚಿನ ಸೌಲಭ್ಯಕ್ಕಾಗಿ ಕಾಡು ಬಿಟ್ಟು ಪುನರ್ವಸತಿ ಬಯಸಿ ಹೊರ ಬರುವವರಿಗೆ 10 ಲಕ್ಷ ಪ್ಯಾಕೇಜಿನಲ್ಲಿ ಮನೆ, ಜಮೀನು, ಕೃಷಿಗೆ ನೆರವು ಬ್ಯಾಂಕ್ನಲ್ಲಿ ಇಡುಗಂಟು, ಶಾಲೆ, ಕುಡಿಯುವ ನೀರು, ವಿದ್ಯುತ್ ಒದಗಿಸಲಾಗುವುದು. ಹೀಗೆ ಹೊರಬರಲು ಇಚ್ಛಿಸುವವರನ್ನು ಯಾರು ಅಡ್ಡಿಪಡಿಸಕೂಡದು ಎಂದರು.
ಆದಿವಾಸಿಗಳ ಅರಣ್ಯ ಹಕ್ಕು ಹಾಗೂ ಅಭಿವೃದ್ಧಿ ಕಾರ್ಯವನ್ನು ಸಮನ್ವಯಗೊಳಿಸಲು ಸಮಾಜ ಕಲ್ಯಾಣ, ಕಂದಾಯ ಹಾಗೂ ಅರಣ್ಯ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಸಮನ್ವಯ ಸಮಿತಿಯನ್ನು ರಾಜ್ಯಮಟ್ಟದಲ್ಲಿ ರಚಿಸಲಾಗುವುದು ಎಂದರು.
ಅರಣ್ಯ ಹಕ್ಕು ಪತ್ರ ಹೊಂದಿರುವ ಹಾಡಿಗಳಿಗೆ ಕನಿಷ್ಠ ನಾಗರೀಕ ಸೌಲಭ್ಯಗಳನ್ನು ಒದಗಿಸಲಾಗುವುದು. ಹಕ್ಕು ಪತ್ರ ನೀಡುವಾಗ ಭೂಮಿ ಕಡಿಮೆ ನಿಗದಿಪಡಿಸಿದ್ದರೆ ಹಕ್ಕುಗಳನ್ನು ತಿರಸ್ಕರಿಸುವುದಕ್ಕಿಂತ ಸ್ವೀಕರಿಸಿ ಹೆಚ್ಚಿನ ಭೂಮಿಗಾಗಿ ಮನವಿ ಮಾಡಿ ನಿಮ್ಮ ಹೋರಾಟ ಮುಂದುವರಿಸುವ ಹಕ್ಕು ನಿಮ್ಮದಾಗಿದೆ. ಕಾಡಿನಿಂದ ಹೊರಬರುವವರಿಗೆ ಪುನರ್ ವಸತಿ ನಿಯಮನುಸಾರ ಸೌಲಭ್ಯ ಒದಗಿಸಲಾಗುವುದು. ಆದರೆ ಕಾಡಿನಲ್ಲೆ ಉಳಿಯುವವರಿಗೆ ಈ ಪದ್ರೇಶವು ಹುಲಿ ಯೋಜನೆಯಡಿ ಬರುವುದರಿಂದ ನಾಗರಿಕ ಸೌಕರ್ಯಕ್ಕೆ ಪ್ರಧಾನ ಮಂತ್ರಿಗಳ ಒಪ್ಪಿಗೆಯನ್ನೇ ಪಡೆಯಬೇಕು ಎಂದು ವಿವರಿಸಿದರು.
ಶೆಟ್ಟಹಳ್ಳಿ ಹಾಡಿ ಮತ್ತು ಹೆಬ್ಬಾಳ ಪುನರ್ ವಸತಿ ಕೇಂದ್ರಗಳಲ್ಲಿ ಅರಣ್ಯ ಹಕ್ಕು ಪತ್ರ ನೀಡುವಂತೆ ಹಾಗೂ ಕಾಡಿನಿಂದ ಮೊದಲೆ ಹೊರ ಹಾಕಿದ ಕುಟುಂಬಗಳಿಗೆ ಪುನರ್ ವಸತಿ ನಿಯಮಾನುಸಾರ ಸೌಕರ್ಯ ಒದಗಿಸಲು ವಿನಂತಿಸಿದರು. ಅಯ್ಯನಕೆರೆಹಾಡಿ, ಹೆಬ್ಬಾಳಹಾಡಿ, ಶೆಟ್ಟಹಳ್ಳಿಹಾಡಿ, ಹೆಮ್ಮಿಗೆಹಾಡಿ, ನೇರಳಕುಪ್ಪೆ ಹಾಡಿ, ಹರಳಹಳ್ಳಿ ಹಾಡಿ, ದಾಸನಪುರಹಾಡಿ, ಮಾದಯ್ಯನ ಕಟ್ಟೆಹಾಡಿಯ ಅರಣ್ಯ ಹಕ್ಕುಗಳ ಸಮಿತಿಗಳ ಪ್ರತಿನಧಿಗಳು ಸಲ್ಲಿಸಿದ ಮನವಿಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಎಪಿಸಿಸಿಎಫ್ ಶ್ರೀನಿವಾಸ್, ಸಿಸಿಎಫ್ ಹನುಮಂತಪ್ಪ, ಡಿಸಿಎಫ್ ಬಾಲಚಂದ್ರ, ಎಸಿಎಫ್ ಬೆಳ್ಳಿಯಪ್ಪ, ಡೀಡ್ ಸಂಸ್ಥೆ ನಿರ್ದೇಶಕ ಎಸ್.ಶ್ರೀಕಾಂತ್, ಕಾರ್ಡ್ ಸಂಸ್ಥೆಯ ರಾಯ್ ಡೇವಿಡ್, ರಾಜ್ಯ ಮೂಲನಿವಾಸಿ ಬುಡಕಟ್ಟು ವೇದಿಕೆಯ ಜೆ.ಪಿ.ರಾಜು, ನಾಗರಹೊಳೆ ಬುಡಕಟ್ಟು ಹಕ್ಕು ಸ್ಥಾಪನ ಸಮಿತಿಯ ಪಿ.ಕೆ. ರಾಮು, ಆರ್ಎಫ್ಒಗಳಾದ ರಾಜಪ್ಪ, ದೇವರಾಜು, ಪುನರ್ವಸತಿ ಕೇಂದ್ರದ ಜೆ.ಟಿ. ರಾಜಪ್ಪ, ಪಿರಿಯಾಪಟ್ಟಣ ಬುಡಕಟ್ಟು ಕೃಷಿಕರ ಸಂಘದ ಜಯಪ್ಪ, ಗಿಡಮೂಲಿಕೆ ತಜ್ಞ ಹೆಬ್ಬಾಳ ಮಸ್ತಮ್ಮ, ನೇರಳಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಶಿವಣ್ಣ, ಪಿಡಿಒ ಮಣಿ, ಲಿಫ್ಟ್ ಸಂಸ್ಥೆಯ ಲೋಕೇಶ, ನಾಗರಹೊಳೆ ಗದ್ದೆ ಹಾಡಿಯ ಜೆ.ಕೆ. ತಿಮ್ಮ ಮತ್ತು ಐಯಪ್ಪ, ವರ್ತಿ ಹಾಡಿಯ ಶಿವಣ್ಣ ಚೋಮಮ್ಮ, ಮಹದೇವ ಇದ್ದರು.