ಕಾಲೇಜು ಕಾಮಗಾರಿಗೆ ಸಚಿವರ ಚಾಲನೆ
ಮೈಸೂರು: ಸಿದ್ಧಾರ್ಥನಗರದ ವಿಹಾರ ಮಾರ್ಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಕಾಮಗಾರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅವರ ಮನವಿ ಮೇರೆಗೆ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಪ್ರೌಢಶಾಲಾ ಆವರಣದಲ್ಲಿ ಮಂಜೂರಾಗಿರುವ 31 ಗುಂಟೆ ಜಾಗದಲ್ಲಿ ಈ ಕಾಮಗಾರಿಗೆ ಚಾಲನೆಗೊಳಿಸಿ ಮಾತನಾಡಿದ ಅವರು, ಈ ಕಟ್ಟಡದ ಕಾಮಗಾರಿಗೆ ಕಾಲೇಜು ಶಿಕ್ಷಣ ಇಲಾಖೆಯು 2 ಕೋಟಿ ಅನುದಾನ ನೀಡಿದೆ ಎಂದರು.
ಈ ಕಾಲೇಜಿಗೆ ಶಾಶ್ವತ ಕಟ್ಟಡ ದೊರಕುವುದರಿಂದ ಕೃಷ್ಣರಾಜ ಕ್ಷೇತ್ರದ ಜನತೆಗೆ ಅದರಲ್ಲೂ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಕೊಡುಗೆ ನೀಡಿದಂತೆ ಆಗಿದ್ದು, ಶಾಸಕರ ಪರಿಶ್ರಮದಿಂದ ಇಂತಹ ಅನುಕೂಲ ಒದಗಿದೆ. ಪ್ರೌಢಶಾಲೆಗೂ ಅಗತ್ಯ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.
ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, 2007-08 ರಲ್ಲಿ ಈ ಕಾಲೇಜು ಆರಂಭವಾಗಿದ್ದು, ಕಟ್ಟಡದ ಕೊರತೆಯಿಂದ ಪ್ರೌಢಶಾಲೆಯಲ್ಲಿ ಬೋಧನೆ ನಡೆಸಲಾಗುತ್ತಿದೆ. ಸುಮಾರು 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಪ್ರತ್ಯೇಕ ಕಟ್ಟಡದ ಅಗತ್ಯವಿದೆ. ಹಾಗೆಯೇ ಶಿಥಿಲಾಸ್ಥೆಯಲ್ಲಿರುವ ಪ್ರೌಢಶಾಲೆಗೂ ಉತ್ತಮ ಕಟ್ಟಡ ಬೇಕಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ಪಾಲಿಕೆ ಸದಸ್ಯೆ ಮಹದೇವಮ್ಮ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುಧಾ, ನಯಮೂರ್ ರೆಹಮಾನ್, ಡಿ.ಮಂಜುನಾಥ್, ಅಪ್ಪುಗೌಡ, ಕುರುಬಾರಹಳ್ಳಿ ರವಿಕುಮಾರ್, ಕೆ.ಸೋಮಣ್ಣ, ಪ್ರದೀಪ್, ಪ್ರಕಾಶ್ ಜೈನ್, ಮುಖಂಡ ನಾಗಣ್ಣ ಹಾಗೂ ಪ್ರಾಂಶುಪಾಲರು, ಶಿಕ್ಷಕರು ಇದ್ದರು.