ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಸವಣ್ಣ, ಗಾಂಧೀಜಿ ತತ್ವ ಪಾಲನೆಯಾಗಲಿ

Mainashree
Updated On : 22 Jun 2014, 11:15 am

ಕ.ಪ್ರ. ವಾರ್ತೆ ್ಣ ಮೈಸೂರು ್ಣ ಜೂ.22
ಮಾನವೀಯ ಮೌಲ್ಯ ರೂಢಿಸಿಕೊಳ್ಳಬೇಕಾದರೆ ಬಸವಣ್ಣ ಮತ್ತು ಗಾಂಧೀಜಿ ಅವರ ತತ್ವಗಳನ್ನು ಜನರು ಪಾಲಿಸುವುದು ಅವಶ್ಯಕ ಎಂದು ಹಿರಿಯ ಸಾಹಿತಿ ಪ್ರೊ.ದೇಜಗೌ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇಂಚರ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಭಾನುವಾರ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರ 69 ನೇ ಜನ್ಮದಿನೋತ್ಸವದಲ್ಲಿ ಅವರ ಗಾಂಧೀಜಿ ಮತ್ತು ಸಮಾಜಧರ್ಮ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗಾಂಧೀಜಿ ಮತ್ತು ಬಸವಣ್ಣನವರು ಮಾನವ ಧರ್ಮ ಪಾಲಿಸಿದವರು. ಆದರೆ ಇಂದು ನಾವು ಅವರನ್ನು ಮರೆಯುತ್ತಿದ್ದೇವೆ. ಸಮಾಜದಲ್ಲಿರುವ ಅನಿಷ್ಟ ಪದ್ಧತಿ ತೊರೆದಾಗ ಮಾತ್ರ ದೇಶ ಉದ್ಧಾರ ಸಾಧ್ಯ. ಇಂದು ಭಾರತ ಹಿಂದೆ ಉಳಿದಿರುವುದಕ್ಕೆ ಸಮಾಜದ ಆರ್ಥಿಕ ಕಾರಣಗಳು ಕೂಡ ಪ್ರಮುಖ ಸ್ಥಾನ ವಹಿಸುತ್ತದೆ ಎಂದರು.
ಮೊದಲು ಜ್ಞಾನ ನೀಡಿದ್ದು ಭಾರತ: ಹಿಂದೂ ಧರ್ಮ ಪ್ರಮುಖವಾದ ಧರ್ಮ. ಆದರೆ ಇಂದು ನಾವು ಹಿಂದೂ ಧರ್ಮವನ್ನು ಸರಿಯಾದ ರೀತಿಯಲ್ಲಿ ಪಾಲಿಸುತ್ತಿಲ್ಲ. ಅಲ್ಲದೆ ಜಗತ್ತಿಗೆ ಮೊದಲು ಜ್ಞಾನ ನೀಡಿದ ದೇಶ ಭಾರತ. ಆದರೆ, ಆರ್ಧಿಕ ಹಿನ್ನೆಡೆಯಿಂದ ದೇಶದಲ್ಲಿ ಜ್ಞಾನ ವೃದ್ಧಿಯಾಗುತ್ತಿಲ್ಲ. ಬ್ರಿಟಿಷರು ದೇಶಕ್ಕೆ ಬಾರದಿದ್ದರೆ, ದೇಶ ಇಷ್ಟು ಅಭಿವೃದ್ಧಿ ಹೊಂದುವುದು ಕಷ್ಟವಾಗುತ್ತಿತ್ತು ಎಂದು ಅವರು ವಿಷಾದಿಸಿದರು.
ಕನ್ನಡ ಸಾಹಿತ್ಯದಲ್ಲಿ ಸಾವಿರಾರು ವಚನಗಳು ರಚನೆಯಾಗಿವೆ. ನಮ್ಮಲ್ಲಿರುವಂಥ ವಚನ ಪ್ರಕಾರಗಳು ಬೇರೆ ಯಾವುದೇ ಸಾಹಿತ್ಯದಲ್ಲೂ ಕಂಡುಬಂದಿಲ್ಲ. ಆದ್ದರಿಂದ ವಚನಗಳು ಕನ್ನಡ ಸಾಹಿತ್ಯದ ಕಿರೀಟ ಇದ್ದಂತೆ. ಬಸವಣ್ಣನವರು ವಚನಗಳ ಮೂಲಕವೇ 12ನೇ ಶತಮಾನದಲ್ಲಿ ಸಮಾಜ ಪರಿವರ್ತನೆ ಮಾಡಿದರು. ಉತ್ತಮ ರೀತಿಯ ಜೀವನ ರೂಪಿಸಿಕೊಳ್ಳುವಲ್ಲಿ ವಚನಗಳು ಸಹಕಾರಿ ಎಂದು ತಿಳಿಸಿದರು.
ಪ್ರೊ.ಭೈರವಮೂರ್ತಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡ ಮಾತ್ರವಲ್ಲದೇ ಆಂಗ್ಲ ಭಾಷೆಯಲ್ಲೂ ಅಪಾರ ಪ್ರಾವಿಣ್ಯತೆ ಪಡೆದಿರುವ ಇವರು ಉತ್ತಮ ವಿದ್ವತ್ ಅನ್ನು ಹೊಂದಿದ್ದಾರೆ. ಇದೇ ರೀತಿ ಕ್ರಿಯಾಶೀಲರಾಗಿ ಕನ್ನಡ ಸಾಹಿತ್ಯಕ್ಕೆ ಇನ್ನೂ ಹೆಚ್ಚು ಕೊಡುಗೆ ನೀಡಲಿ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಅಂಕಣಕಾರ ಪ್ರೊ.ಕೆ.ಭೈರವಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿಗಳಾದ ಡಾ.ಮಳಲಿ ವಸಂತಕುಮಾರ್, ಪ್ರೊ.ಕೆ.ಅನಂತರಾಮು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷ ಎಂ.ಚಂದ್ರಶೇಖರ್, ಇಂಚರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಂಗನಾಥ್ ಮೈಸೂರು, ಕವಿ ಜಯಪ್ಪ ಹೊನ್ನಾಳಿ ಇದ್ದರು. ನಂತರ ಕವಿಗೋಷ್ಠಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement