ರೈಲು ಪ್ರಯಾಣ ದರ ಹೆಚ್ಚಳಕ್ಕೆ ಖಂಡಿಸಿ ಪ್ರತಿಭಟನೆ
ಮೈಸೂರು: ಕೇಂದ್ರ ಸರ್ಕಾರವು ರೈಲು ಪ್ರಯಾಣ ದರ ಹೆಚ್ಚಿಸಿರುವುದನ್ನು ಖಂಡಿಸಿ ಸಿಪಿಎಂ ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಭಾನುವಾರ ಪ್ರತ್ಯೇತವಾಗಿ ಪ್ರತಿಭಟಿಸಿದರು.
ಮೈಸೂರು ರೈಲು ನಿಲ್ದಾಣದ ಬಳಿ ಪ್ರತಿಭಟಿಸಿದ ಸಿಪಿಎಂ ಕಾರ್ಯಕರ್ತರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈಲು ಪ್ರಯಾಣ ದರ ಮತ್ತು ಸರಕು ಸಾಗಾಣಿಕೆ ದರ ಏರಿಸಿರುವುದು ಸರಿಯಲ್ಲ ಎಂದು ಖಂಡಿಸಿದರು. ಹಿಂದಿನ ಯುಪಿಎ ಸರ್ಕಾರದ ತೀರ್ಮಾನವನ್ನು ನಾವು ಜಾರಿ ಮಾಡುತ್ತಿರುವುದಾಗಿ ರೇಲ್ವೆ ಸಚಿವ ಸದಾನಂದಗೌಡ ಅವರು ಹೇಳಿಕೆ ನೀಡಿರುವುದು ಬೇಜವಾಬ್ದಾರಿಯ ಪರಮಾವಧಿ. ಜನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಹೀಗಾಗಿ ರೈಲು ಪ್ರಯಾಣ ದರ ಮತ್ತು ಸರಕು ಸಾಗಾಣಿಕೆ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜ್, ಮುಖಂಡರಾದ ಲ.ಜಗನ್ನಾಥ್, ಎನ್. ವಿಜಯ್ಕುಮಾರ್, ಎನ್.ಕೆ. ಬಾಲಾಜಿರಾವ್, ಎಚ್.ಎಸ್.ಜಗದೀಶ್, ವಿ.ಬಸವರಾಜು ಕಲ್ಕುಣಿಕೆ, ಶಶಿಕುಮಾರ್, ಅಣ್ಣಪ್ಪ, ಬಸವಯ್ಯ, ಶ್ರೀಧರ್, ಕೃಷ್ಣಮೂರ್ತಿ ಇದ್ದರು.
ಆಪ್ ಪ್ರತಿಭಟನೆ: ನಗರದ ಗಾಂಧಿ ಚೌಕದಲ್ಲಿ ಪ್ರತಿಭಟಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ರೈಲು ಪ್ರಯಾಣ ದರ ಏರಿಕೆ ಸರಿಯಲ್ಲ ಎಂದು ಖಂಡಿಸಿದರು. ಹಾಗೂ ರೈಲು ಪ್ರಯಾಣ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಆಪ್ ಮುಖಂಡೆ ಪದ್ಮಮ್ಮ ನೇತೃತ್ವ ವಹಿಸಿದ್ದರು.