ಎನ್ಐಇನಲ್ಲಿ ಆಟೋಮೋಟಿವ್ ಟೆಕ್ನಿಷಿಯನ್ ಕೋರ್ಸ್
ಮೈಸೂರು: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎನ್ಐಇ- ಐಟಿಐ ಕಾಲೇಜಿನಲ್ಲಿ ಒಂದು ವರ್ಷದ ಆಟೋಮೋಟಿವ್ ಟೆಕ್ನಿಷಿಯನ್ ಕೋರ್ಸ್ ಆರಂಭಿಸಲಾಗುತ್ತಿದೆ.
ಈ ತರಬೇತಿಯು ಎನ್ಐಇ- ಐಟಿಐ ಹಾಗೂ ವಿ.ಇ. ಕಮರ್ಷಿಯಲ್ ವೆಹಿಕಲ್ಸ್ ಆಶ್ರಯದಲ್ಲಿ 9 ತಿಂಗಳು ನಡೆಯಲಿದ್ದು, ಪ್ರಮುಖವಾಗಿ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾವಂತ ಯುವಜನರಲ್ಲಿ ಆಟೋಮೋಟಿವ್ ಕಾರ್ಖಾನೆಗಳಿಗೆ ಬೇಕಾಗುವಂತಹ ತಾಂತ್ರಿಕ ನೈಪುಣ್ಯತೆಯನ್ನು ಬೆಳೆಸಲು ಅನುಕೂಲವಾಗುವಂತೆ ಮಾದರಿಗೊಳಿಸಲಾಗಿದೆ ಎಂದು ಎನ್ಐಇ- ಐಟಿಐ ಮುಖ್ಯಸ್ಥ ಟಿ.ಕೆ. ಚಿತ್ತರಂಜನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಒಂಬತ್ತು ತಿಂಗಳ ನಂತರ ಕೈಗಾರಿಕೆ ಅಥವಾ ಡೀಲರ್ಗಳ ಬಳಿ 3 ತಿಂಗಳ ಒಳ ತರಬೇತಿ ನೀಡಲಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಯು ತಿಂಗಳಿಗೆ 5 ಸಾವಿರ ರು. ಶಿಷ್ಯವೇತನ ಪಡೆಯಲಿದ್ದಾರೆ. ತರಬೇತಿ ಮುಗಿದ ನಂತರ ತರಬೇತಿ ಪಡೆದವರನ್ನು ಅಪ್ರೆನ್ಟಿಸ್ ಆಗಿ ವಿ.ಇ. ಕಮರ್ಷಿಯಲ್ ವೆಹಿಕಲ್ಸ್ ಲಿಮಿಟೆಡ್ ಅಥವಾ ಭಾರತದ ಬೇರೆ ಕೈಗಾರಿಕೆಗಳಲ್ಲಿ ನೇಮಿಸಲಾಗುವುದು. ಕೋರ್ಸಿಗೆ ಪ್ರವೇಶವನ್ನು ಸಿಇಟಿ ಮುಖಾಂತರ ನಡೆಸಲಿದ್ದು, ಒಟ್ಟು 25 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದರು.
ಸಿಇಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಯು 15 ಸಾವಿರ ರು. ಬೋಧನಾ ಶುಲ್ಕ ಪಾವತಿಸಬೇಕು. ಮೊದಲಿಗೆ 10 ಸಾವಿರ ರು. ಹಾಗೂ ಒಳ ತರಬೇತಿ ಪಡೆಯುವ ಸಂದರ್ಭದಲ್ಲಿ ಉಳಿದ 5 ಸಾವಿರ ರು. ಪಾವತಿಸಬಹುದು. ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನೂ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಎನ್ಐಇ- ಐಟಿಐ ಪ್ರಾಂಶುಪಾಲ ಮಲ್ಲರಾಜ ಅರಸ್, ಪ್ರಾಧ್ಯಾಪಕ ಡಾ.ಟಿ.ಎನ್. ಶ್ರೀಧರ್, ವಿ.ಇ. ವೆಹಿಕಲ್ಸ್ ಲಿ.ನ ಎಎಸ್ಎಂ ಸುರೇಂದ್ರನಾಥ್, ಆರುಲ್ ಇದ್ದರು.