ಗಮನ ಸೆಳೆಯುತ್ತಿರುವ ಋಣಾತ್ಮಕ ವಿಷಯಗಳು
ಮೈಸೂರು: ನಗರ ಪ್ರದೇಶದ ನೈರ್ಮಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ನಿವಾರಿಸುವ ಮೂಲಕ ಆರೋಗ್ಯಕರ ಬದುಕಿಗೆ ಪೂರಕ ವಾತಾವರಣ ನಿರ್ಮಿಸುವಂತೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸತ್ಯಮೂರ್ತಿ ಹೇಳಿದರು.
ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆಡಳಿತ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿರುವ ನಗರ ನೈರ್ಮಲ್ಯ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಉದಾಹರಣೆಗಳು ಮಾದರಿ ಅಭಿವೃದ್ಧಿ ಕಾರ್ಯಕ್ರಮಗಳು ಬೆಳಕಿಗೆ ಬಾರದೆ ಹೆಚ್ಚು ಪ್ರಚಾರ ಪಡೆಯುವಲ್ಲಿ ವಿಫಲವಾಗುತ್ತಿವೆ. ಋಣಾತ್ಮಕ ವಿಷಯಗಳೇ ಹೆಚ್ಚಿನ ಗಮನ ಸೆಳೆಯುತ್ತಿವೆ. ಉತ್ತಮ ಕೆಲಸಗಳನ್ನು ಮಾಡುವ ಜೊತೆಗೆ ಅವುಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಕೆಲಸವೂ ಆಗಬೇಕಿದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಜಿನಿಯರುಗಳು, ಪಾಲಿಕೆ ಆಯುಕ್ತರು, ಮುಖ್ಯಾಧಿಕಾರಿಗಳು ಹೆಚ್ಚು ಬದ್ಧತೆಯಿಂದ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು. ನೀರಿನಂತಹ ಸಂಪನ್ಮೂಲಗಳನ್ನು ಸೃಷ್ಟಿಸಲು ನಮಗೆ ಸಾಧ್ಯವಿಲ್ಲವಾದರೂ ಅವುಗಳ ಮಿತಬಳಕೆ, ಮರುಬಳಕೆಯಂತಹ ಉಳಿತಾಯ ಕ್ರಮಗಳನ್ನಾದರೂ ಅನುಸರಿಸಬೇಕು. ನಗರ ನೈರ್ಮಲ್ಯ ನಿರ್ವಹಣೆ ಕುರಿತಾದ ಕರಾರುವಕ್ಕಾದ ಅಂಕಿ ಅಂಶಗಳ ಮಾಹಿತಿ ನಮ್ಮ ಬಳಿ ಇಲ್ಲ. ನೈರ್ಮಲ್ಯ ನಿರ್ವಹಣೆಗೆ ತತ್ಕ್ಷಣದ ಹಾಗೂ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಇದರಿಂದ ಈಗಿನ ಸಮಸ್ಯೆ ನಿವಾರಣೆ ಜೊತೆಗೆ ಭವಿಷ್ಯದಲ್ಲಿ ಸಮಸ್ಯೆಗಳು ಉದ್ಭವವಾಗದಂತೆ ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶೇ.31 ರಷ್ಟು ಒಳಚರಂಡಿ: ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕಿ ಡಾ.ಅಮಿತಾ ಪ್ರಸಾದ್ ಮಾತನಾಡಿ, ಕರ್ನಾಟಕ ನಗರೀಕರಣದಲ್ಲಿ ಮುಂದಿದ್ದು, ಇತ್ತೀಚಿನ ಗಣತಿಯ ಪ್ರಕಾರ ನಗರ ಜನಸಂಖ್ಯೆಯ ಕೇವಲ ಶೇ.31 ರಷ್ಟು ಮಂದಿ ಮಾತ್ರ ಸುರಕ್ಷಿತ ಒಳಚರಂಡಿ ವ್ಯವಸ್ಥೆ ಹೊಂದಿದ್ದಾರೆ. ಶೇ.53 ರಷ್ಟು ಜನಸಂಖ್ಯೆಗೆ ಮಾತ್ರ ಶುದ್ಧ ಕುಡಿಯುವ ನೀರು ದೊರೆಯುತ್ತಿದೆ. ಬಯಲು ಮಲ ವಿಸರ್ಜನೆ ನಗರ ಪ್ರದೇಶದಲ್ಲಿ ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ. ರಾಷ್ಟ್ರೀಯ ನಗರ ನೈರ್ಮಲ್ಯ ನೀತಿ 2008ರ ಅನುಸಾರ ಮೈಸೂರಿನ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯು ನಗರ ನೈರ್ಮಲ್ಯ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಐದು ಹಿಂದುಳಿದ ಜಿಲ್ಲೆಗಳ 26 ನಗರ ಹಾಗೂ ಪಟ್ಟಣಗಳಿಗೆ ನಗರ ನೈರ್ಮಲ್ಯ ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ಪುಣೆಯ ಅಖಿಲ ಭಾರತ ಸ್ಥಳೀಯ ಸ್ವಯಂ ಸರ್ಕಾರಿ ಸಂಸ್ಥೆಗಾಗಿ ರೂಪಿಸಿರುವ ಈ ಯೋಜನೆಯನ್ನು ನಾಲ್ಕು ಪಟ್ಟಣಗಳು ಈಗಾಗಲೇ ಅನುಷ್ಠಾನಗೊಳಿಸುತ್ತಿವೆ. ಸರ್ಕಾರದಿಂದಷ್ಟೇ ಈ ಸಮಸ್ಯೆ ನಿವಾರಣೆ ಸಾಧ್ಯವಿಲ್ಲ. ಸಾರ್ವಜನಿಕರು ಸ್ವಯಂ ಸೇವಾ ಸಂಸ್ಥೆಗಳೂ ಸರ್ಕಾರದ ಜತೆ ಕೈಜೋಡಿಸಬೇಕು ಎಂದು ಹೇಳಿದರು.
ಆಡಳಿತ ತರಬೇತಿ ಸಂಸ್ಥೆಯ ನಗರ ಯೋಜನಾ ತಜ್ಞ ಎನ್.ನಾರಾಯಣಶಾಸ್ತ್ರಿ ಕಾರ್ಯಾಗಾರದ ಉದ್ದೇಶ ವಿವರಿಸಿದರು. ತ್ಯಾಜ್ಯ ನೀರು ನಿರ್ವಹಣೆ ಕುರಿತ ಕಿರು ಚಿತ್ರವನ್ನು ಇದೇ ವೇಳೆ ಸತ್ಯಮೂರ್ತಿ ಬಿಡುಗಡೆ ಮಾಡಿದರು. ನಗರ ನೈರ್ಮಲ್ಯ ಕುರಿತಾದ ವಸ್ತುಪ್ರದರ್ಶನವನ್ನು ಸಹ ಆಯೋಜಿಸಲಾಗಿತ್ತು.
ಕರ್ನಾಟಕ, ಗೋವಾ, ಕೇರಳ, ಮಹಾರಾಷ್ಟ್ರ ಹಾಗೂ ಚತ್ತೀಸ್ಗಢ ರಾಜ್ಯಗಳ 60ಕ್ಕೂ ಹೆಚ್ಚು ಶಿಬಿರಾರ್ಥಿಗಳು, ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ. ಪುಣೆ, ಬೆಂಗಳೂರು, ಮುಂಬೈ, ಕೊಯಮತ್ತೂರು, ವೆಲ್ಲೂರು ಹಾಗೂ ಮೈಸೂರಿನ ಸಂಪನ್ಮೂಲ ವ್ಯಕ್ತಿಗಳು ಸಹ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾಹಿತಿ ನೀಡಲಿದ್ದಾರೆ. ಶಿಬಿರಾರ್ಥಿಗಳಿಗೆ ಕ್ಷೇತ್ರ ಭೇಟಿಯನ್ನು ಸಹ ಏರ್ಪಡಿಸಲಾಗುತ್ತದೆ.