ಸಹಕಾರಿ ಸಂಘದಿಂದ ಸಮಾಜ ಅಭಿವೃದ್ಧಿ
ಕೆ.ಆರ್. ನಗರ: ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡಿದರೆ ಸಮಾಜದ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಬಹುದು ಎಂದು ಸಹಕಾರ ಸಂಘಗಳ ಜಂಟಿ ನಿರ್ದೇಶಕಿ ಕೆ.ಎಂ. ಆಶಾ ಹೇಳಿದರು.
ಪಟ್ಟಣದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸಂಘಗಳಲ್ಲಿ ಹಣಕಾಸಿನ ನಿರ್ವಹಣೆ ಮತ್ತು ಸಂಘಟನಾ ಕೆಲಸ ಮುಖ್ಯವಾಗಿದ್ದು ಇವೆರಡು ಯಶಸ್ವಿಯಾದರೆ ಉತ್ತಮ ಸಾಧನೆ ಮಾಡಬಹುದು. ಸಹಕಾರ ಸಂಘಗಳಿಂದ ಆರ್ಥಿಕ ಬೆಳಣಿಗೆ ಜತೆಗೆ ಪರಸ್ಪರ ಸಾಮರಸ್ಯ ಬೆಳೆಯುವುದರಿಂದ ಪ್ರತಿಯೊಬ್ಬ ಶಿಕ್ಷಕರು ನೂತನ ಸಹಕಾರ ಸಂಘದ ಸದಸ್ಯರಾಗಿ ಅನುಕೂಲ ಪಡೆದುಕೊಳ್ಳುವುದರ ಜತೆಗೆ ಇತರರಿಗೂ ಸಹಕಾರ ನೀಡಿ ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ಎಚ್.ಬಿ.ಸಂಪತ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಡಾ.ಬಿ.ಸಿ. ದೊಡ್ಡೇಗೌಡ, ಪಿ. ಶಶಿಧರ್, ಸುಬ್ರಹ್ಮಣ್ಯ ಇದ್ದರು.