ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾನವ ಹಕ್ಕುಗಳ ಸದಸ್ಯರಿಗೆ ಸಮಸ್ಯೆಗಳ ಸರ್ವ ದರ್ಶನ

Mainashree
Updated On : 24 Jun 2014, 10:24 am

ಮೈಸೂರು: ಸರ್ಕಾರದ ವಿವಿಧ ಇಲಾಖೆಗಳು ನಗರದಲ್ಲಿ ನಡೆಸುತ್ತಿರುವ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ನ್ಯಾ.ಸಿ.ಜಿ. ಹುನಗುಂದ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಕೆಲವು ಹಾಸ್ಟೆಲ್‌ಗಳಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶೌಚಾಲಯ ಮತ್ತು ಕುಡಿಯುವ ನೀರಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿ.ವಿ. ಮೊಹಲ್ಲಾದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿದ ನ್ಯಾ. ಹುನಗುಂದ ಅವರು, ವಿದ್ಯಾರ್ಥಿಗಳ ಅಹವಾಲು ಕೇಳಿದರು. ಅಡುಗೆ ಮನೆ, ಉಗ್ರಾಣ, ಡೈನಿಂಗ್ ಹಾಲ್, ವಾಸದ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಉಗ್ರಾಣದಲ್ಲಿದ್ದ ತೊಗರಿಬೇಳೆ, ಹೆಸರುಬೇಳೆ, ಕಡ್ಲೆ, ಸೂರ್ಯಕಾಂತಿ ಎಣ್ಣೆ ಹಾಗೂ ಇತರೆ ಧಾನ್ಯಗಳನ್ನು ಪರಿಶೀಲಿಸಿದರು. ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯಲಾಗುತ್ತಿದ್ದು, ಇತರೆ ವಸ್ತುಗಳನ್ನು ಟೆಂಡರ್ ಮೂಲಕ ಪಡೆಯಲಾಗುತ್ತಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ ವಿವರಿಸಿದರು. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಯಾರೇ ಪ್ರವೇಶ ಕೋರಿ ಬಂದರೂ ಅವಕಾಶ ನಿರಾಕರಿಸಬಾರದು ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಹರಾದ ಯಾರಿಗೂ ಅವಕಾಶ ನಿರಾಕರಿಸುತ್ತಿಲ್ಲ. ಹೀಗಾಗಿ ಸ್ಥಳಾಭಾವ ಉಂಟಾಗಿತ್ತು. ಇದೀಗ ಬಾಡಿಗೆ ಕಟ್ಟಡಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸರಸ್ವತಿ ತಿಳಿಸಿದರು.
ಸ್ವಲ್ಪ ಸಮಸ್ಯೆಯೂ ಇದೆ: ಆಹಾರಧಾನ್ಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಆದರೆ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು ಪೂರೈಕೆಯಲ್ಲಿ ಸ್ವಲ್ಪ ಸಮಸ್ಯೆ ಇದೆ. ಇದೀಗ ಈ ಸಮಸ್ಯೆ ಪರಿಹಾರಕ್ಕೆ ಮೈಸೂರು ಜಿಲ್ಲೆಗೆ ರಾಜ್ಯವಲಯದಲ್ಲಿ 2.39 ಕೋಟಿ ಬಿಡುಗಡೆಯಾಗಿದ್ದು, ಭೂ ಸೇನಾ ನಿಗಮಕ್ಕೆ ಕಾಮಗಾರಿ ವಹಿಸಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿವೆ. ಶುದ್ಧ ಕುಡಿಯುವ ನೀರಿಗಾಗಿ ಫಿಲ್ಟರ್‌ಗಳನ್ನು ಅಳವಡಿಸಲಾಗುತ್ತಿದ್ದು, ಈ ಕಾರ್ಯವೂ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಗ್ರಂಥಾಲಯ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಕೋರಿದರು. ಈ ಬಗ್ಗೆ ಕ್ರಮ ವಹಿಸಲು ನ್ಯಾ. ಹುನಗುಂದ ಅವರು ಸೂಚಿಸಿದರು. ನಗರಪಾಲಿಕೆಯ ಹಾಸ್ಟೆಲ್‌ನ ವಿದ್ಯಾರ್ಥಿಗಳು ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟಿಸುವುದರ ಬಗ್ಗೆ ಸುದ್ದಿಗಾರರ ಗಮನ ಸೆಳೆದಾಗ, ಪಕ್ಕದಲ್ಲೇ ಇದ್ದ ಪಾಲಿಕೆ ಹಾಸ್ಟೆಲ್‌ಗೂ ನ್ಯಾ.ಹುನಗುಂದ ಭೇಟಿ ನೀಡಿ ಪರಿಶೀಲಿಸಿದರು.
ವರ್ಷಕ್ಕೆ ಎರಡು ಬಾರಿ ವೈದ್ಯಾಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ, ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುತ್ತಾರೆ. ನಡುವೆ ಯಾರಿಗಾದರೂ ಅನಾರೋಗ್ಯ ತಪ್ಪಿದರೆ ಸರ್ಕಾರಿ ಆಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆ ಕೊಡಿಸಿ, ಪೋಷಕರ ಬಳಿ ಕಳುಹಿಸಿ ಕೊಡಲಾಗುತ್ತದೆ ಎಂದು ಹಾಸ್ಟೆಲ್ ವಾರ್ಡನ್ ತಿಳಿಸಿದರು. ಇದಕ್ಕೂ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುವ ಲಲಿತಮಹಲ್ ರಸ್ತೆಯಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜವರೇಗೌಡ, ಜಿಲ್ಲಾ ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ ಸಮನ್ವಯಾಧಿಕಾರಿ ಭಾರತಿ ಇದ್ದರು.
ಸಮಸ್ಯೆ ಪರಿಹಾರಕ್ಕೆ ಕ್ರಮ
ಸರ್ಕಾರದ ವಿವಿಧ ಇಲಾಖೆಗಳು ನಡೆಸುತ್ತಿರುವ ಹಾಸ್ಟೆಲ್‌ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಊಟ- ತಿಂಡಿ ನೀಡಲಾಗುತ್ತಿದೆ. ಉಳಿದ ಮೂಲಭೂತ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ವಹಿಸಲು ಸೂಚಿಸುವುದಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ನ್ಯಾ. ಸಿ.ಜಿ.ಹುನಗುಂದ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement