ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮುಂಚೂಣಿಯಲ್ಲಿ ಮೈವಿವಿ ಗ್ರಂಥಾಲಯ

Mainashree
Updated On : 24 Jun 2014, 10:24 am

ಕ.ಪ್ರ. ವಾರ್ತೆ ್ಣ ಮೈಸೂರು ್ಣ ಜೂ.24
ಇಡೀ ದೇಶದಲ್ಲಿ ಮೈಸೂರು ವಿವಿಯು ಗ್ರಂಥಾಲಯ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ ಎಂದು ರಾಷ್ಟ್ರೀಯ ಗ್ರಂಥಾಲಯ ಮಹಾನಿರ್ದೇಶಕ ಡಾ.ಪಿ.ವೈ. ರಾಜೇಂದ್ರ ಕುಮಾರ್ ಹೇಳಿದರು.
ಮೈಸೂರು ವಿವಿಯ ಗ್ರಂಥಾಲಯ ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಾಲಯ ಮಾಹಿತಿ ವಿಜ್ಞಾನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನ ಹಾಗೂ ಕೌಶಲ ರೂಪಿಸುವಲ್ಲಿ ಇಡೀ ದೇಶದಲ್ಲಿ ಮೈಸೂರು ವಿವಿಯು ಮುಂಚೂಣಿಯಲ್ಲಿದೆ. ಹೊಸ ಕೋರ್ಸ್‌ಗಳು, ಬೋಧನಾ ಕ್ರಮ ಹಾಗೂ ಸಂಶೋಧನೆ ನಡೆಸುವ ಮೂಲಕ ಇನ್ನಿತರ ವಿವಿಗೆ ಮಾದರಿಯಾಗಿದೆ. ಅಲ್ಲದೆ ಈ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದು, ಆ ಮೂಲಕ ಮುಂದಿನ ಪೀಳಿಗೆಗೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ರಾಷ್ಟ್ರೀಯ ಗ್ರಂಥಾಲಯಕ್ಕೆ 170 ವರ್ಷಗಳ ಇತಿಹಾಸವಿದೆ. ಇದು ಕೋಲ್ಕತಾದಲ್ಲಿ ಆರಂಭವಾದ ಮೊದಲ ಸಾರ್ವಜನಿಕ ಗ್ರಂಥಾಲಯ. ರವೀಂದ್ರನಾಥ ಠಾಗೋರ್ ಇದರ ಪ್ರಥಮ ಅಧ್ಯಕ್ಷರು. ಸ್ವಾತಂತ್ರ್ಯ ನಂತರ 1948 ರಲ್ಲಿ ರಾಷ್ಟ್ರೀಯ ಗ್ರಂಥಾಲಯವೆಂದು ನಾಮಕರಣ ಮಾಡಲಾಯಿತು ಎಂದರು.
ಶೈಕ್ಷಣಿಕ ಚಟುವಟಿಕೆ: ಗ್ರಂಥಾಲಯ ಮಾಹಿತಿ ವಿಜ್ಞಾನಗಳ ಬಗ್ಗೆ ತರಬೇತಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಗೆ ಪ್ರತಿ ತಿಂಗಳು 15 ಸಾವಿರ ಸ್ಟೈಫಂಡ್ ನೀಡುವುದು, ಕಾರ್ಯಾಗಾರ, ವಿಚಾರ ಸಂಕಿರಣ ಮುಂತಾದ ಚಟುವಟಿಕೆ ಹಮ್ಮಿಕೊಳ್ಳಲಾಗುವುದು. ದೇಶದ ವಿವಿಧೆಡೆ 200 ಹುದ್ದೆಗಳು ಭರ್ತಿ ಮಾಡಲಾಗುವುದು ಎಂದ ಅವರು, ಗ್ರಂಥಾಲಯ ದಿನಾಚರಣೆಗೆ ಸಾರ್ವಜನಿಕ ಮಹತ್ವ ಬರಬೇಕು ಅಂತಹ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ದೇಶದಲ್ಲಿ 75 ವಿವಿಗಳಲ್ಲಿ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗಗಳಿವೆ. ಗ್ರಂಥಾಲಯ ಶಿಕ್ಷಣ ಹಾಗೂ ಡಿಜಿಟಲ್ ವ್ಯವಸ್ಥೆಯಲ್ಲಿ ಮೈಸೂರು ವಿವಿಯು ಪ್ರಥಮ ಎಂಬ ಕೀರ್ತಿಗೆ ಭಾಜನವಾಗಿದೆ. ಇಡೀ ಪ್ರಪಂಚದಲ್ಲಿ ಮಾಸ್ಕೋ ಗ್ರಂಥಾಲಯದಲ್ಲಿ ಮಾದರಿಯಾಗಿದ್ದು, ಇಂತಹ ಗ್ರಂಥಾಲಯ ಎಲ್ಲಾ ಕಡೆ ಸ್ಥಾಪನೆಯಾಗಲಿ ಎಂದರು.
ರೇವಾ ವಿವಿಯ ಕುಲಪತಿ ಪ್ರೊ.ವಿ.ಜಿ.ತಳವಾರ್ ಹಾಗೂ ಡಾ.ಪಿ.ವೈ. ರಾಜೇಂದ್ರ ಕುಮಾರ್ ಅವರನ್ನು ಪ್ರೊ.ಕೆ.ಎಸ್. ರಂಗಪ್ಪ ಸನ್ಮಾಸಿದರು. ಪ್ರೊ.ಶಾಲಿನಿ ಆರ್. ಅರಸ್ ಕಾರ್ಯಕ್ರಮ ಕುರಿತು ಮಾತನಾಡಿದರು. ವಿಭಾಗದ ಅಧ್ಯಕ್ಷ ಪ್ರೊ.ಎಂ. ಚಂದ್ರಶೇಖರ್ ಸ್ವಾಗತಿಸಿದರು. ಡಾ.ಸಿ.ಪಿ. ರಮೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement