ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಕ್ಷಣ ಇಲಾಖೆ ಶ್ವೇತಪತ್ರ ಹೊರಡಿಸಲಿ

Mainashree
Updated On : 24 Jun 2014, 10:24 am

ಮೈಸೂರು: ಸರ್ವಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಮೀಸಲಿರಿಸುವ ಹಣ ಸರಿಯಾಗಿ ಖರ್ಚಾಗದೆ ಅನ್ಯರ ಪಾಲಾಗುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯು ಶ್ವೇತಪತ್ರ ಹೊರಡಿಸಬೇಕು ಎಂದು ಅಖಿಲ ಕರ್ನಾಟಕ ಶಿಕ್ಷಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಕೆ.ಸಿ.ಪುಟ್ಟಸಿದ್ದಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಿಕ್ಷಣ ಇಲಾಖೆಗೆ ದಕ್ಷ ಆಡಳಿಗಾರರು ಇಲ್ಲದೆ ನಿಂತ ನೀರಾಗಿದೆ. ಇದೊಂದು ಫಲವತ್ತಾದ ಹುಲ್ಲುಗಾವಲಾಗಿದ್ದು ಎಸ್‌ಎಸ್‌ಎ ಮತ್ತು ಆರ್‌ಎಂಎಸ್‌ಎ ಅಡಿ ಬಿಡುಗಡೆಯಾದ ಹಣ ದುರ್ಬಳಕೆಯಾಗುತ್ತಿದೆ. ಸಾವಿರಾರು ಕೋಟಿ ಅನುದಾನ ಸಿಕ್ಕಿದವರಿಗೆ ಸಿರುಂಡೆ ಆಗಿರುತ್ತದೆ. ಯಾವುದೇ ವಿಶ್ವಾಸರ್ಹತೆ ಇಲ್ಲದೆ, ಪಾರದರ್ಶಕತೆ ಇಲ್ಲದೆ ಆಡಳಿತ ದುರ್ಬಲಗೊಂಡಿದೆ. ಪಠ್ಯಪುಸ್ತಕ ರಚನೆ, ಮುದ್ರಣ ಹಾಗೂ ವಿತರಣೆಯಲ್ಲಿ ಕೋಟ್ಯಂತರ ರುಪಾಯಿ ಕಿಕ್‌ಬ್ಯಾಕ್ ನಡೆಯುತ್ತಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಕ್ಷಣ ಇಲಾಖೆಯಲ್ಲಿ ಹಲವು ದಕ್ಷ ಅಧಿಕಾರಿಗಳಿದ್ದರು ಕೂಡ, ಕೆಲವರು ಆಯಕಟ್ಟಿನ ಜಾಗಗಳಿಗೆ ರಾಜಕೀಯ ಹಾಗೂ ಹಣದ ಪ್ರಭಾವ ಬೀರಿ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಲಕ್ಷಾಂತರ ರುಪಾಯಿ ಕೈ ಬದಲಾವಣೆ ಆಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದರಿಂದ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಆದ್ದರಿಂದ ಮೈಸೂರು ಜಿಲ್ಲೆಯವರೆ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಇಲಾಖೆಗೆ ಮೇಜರ್ ಸರ್ಜರಿ ಮಾಡಿ ಅದಕ್ಷ, ಅಪ್ರಾಮಾಣಿಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕು. ಅಂತವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಎಸ್ಸೆಸ್ಸೆಲ್ಸಿ ಗಣಿತ ಕಷ್ಟ: ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ತಯಾರಿಸಿರುವ ಗಣಿತ ಪುಸ್ತಕದ ಗಾತ್ರ ಹೆಚ್ಚಾಗಿದ್ದು ವಿಷಯಗಳು ತುಂಬಾ ಇವೆ. ಇದರಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಕಷ್ಟವಾಗುತ್ತಿದೆ. ಅದೂ ಅಲ್ಲದೆ ಪುಸ್ತಕ ತುಂಬಾ ಹುಡುಕಿದರೆ ಸುಮಾರು 300ಕ್ಕೂ ಹೆಚ್ಚು ತಪ್ಪುಗಳು ಸಿಗುತ್ತವೆ. ಈ ಬಗ್ಗೆ ಸ್ವತಃ ಶಿಕ್ಷಕರೆ ಆರೋಪಿಸಿದ್ದಾರೆ. ದೋಷವನ್ನೇ ಓದಿದ ಮಕ್ಕಳ ಮುಂದಿನ ಭವಿಷ್ಯ ಏನು ಎಂಬುದರ ಬಗ್ಗೆ ಆತಂಕ ಶುರುವಾಗಿದೆ ಎಂದರು.
ಇತ್ತೀಚೆಗೆ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದು, ಶಿವಕುಮಾರ್ ಎಂಬವರು ಲಕ್ಷಾಂತರ ರುಪಾಯಿಗೆ ಮಾರಾಟ ಮಾಡಿದ್ದಾರೆ. ಇದರ ಹಿಂದೆ ಕೋಟ್ಯಂತರ ಹಣ ಚಲಾವಣೆಯಾಗಿದೆ. ಈ ಪ್ರಕರಣ ಭೇದಿಸಿರುವ ಸಿಸಿಬಿ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ. ಇಡೀ ಪ್ರಕರಣದ ವಿಚಾರಣೆಯನ್ನು ಸಿಸಿಬಿಗೆ ವಹಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಅಭಿಪ್ರಾಯಪಟ್ಟರು.
ಒಕ್ಕೂಟದ ಖಜಾಂಚಿ ಲೋಕೇಶ್, ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement