ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿಎಂ ಅಹಿಂದ ಒಡೆಯುವ ಕೆಲಸ ಬಿಡಲಿ

Mainashree
Updated On : 24 Jun 2014, 10:25 am

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಒಡೆಯುವ ಕೆಲಸ ಬಿಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ಮೈಸೂರಿನ ರೈಲು ನಿಲ್ದಾಣ ಬಳಿಯ ಬಾಬು ಜಗಜೀವನರಾಮ್ ವೃತ್ತದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಜನ ಕೊಟ್ಟಿರುವ ತೀರ್ಪನ್ನು ಸಿದ್ದರಾಮಯ್ಯ ಅವರು ಸ್ವೀಕರಿಸಿ, ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಮುಖ್ಯಮಂತ್ರಿಯವರು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದರು.
ಅಹಿಂದ ಚಳವಳಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರನ್ನು ಯಾರೂ ಗೌರವಿಸಿರಲಿಲ್ಲ. ಆದರೆ, ಅವರ ಸರ್ಕಾರದ ಇತ್ತೀಚಿನ ನೀತಿಗಳನ್ನು ನೋಡಿದಾಗ ಅಹಿಂದದಲ್ಲಿರುವ ಅ (ಅಲ್ಪಸಂಖ್ಯಾತರು) ಮತ್ತು ದ (ದಲಿತ) ಮಾತ್ರ ಉಳಿದಿದೆ. ಮಧ್ಯದಲ್ಲಿರುವ ಹಿಂ (ಹಿಂದುಳಿದವರು) ಕಳೆದು ಹೋಗಿದೆ. ಈ ರೀತಿ ಅಹಿಂದ ಒಡೆಯುವ ಕೆಲಸವನ್ನು ಅವರು ಬಿಡಬೇಕು ಎಂದು ಒತ್ತಾಯಿಸಿದರು.
ಸಾಮಾನ್ಯ, ಬಡ ಜನರಿಗೆ ಸೌಲಭ್ಯ ನೀಡುವುದರಲ್ಲಿ ತಾರತಮ್ಯ ಮಾಡುವುದನ್ನು ಬಿಡಬೇಕು. ಇದರಿಂದ ಎಲ್ಲ ಸಮಾಜಕ್ಕೂ ಒಳ್ಳೆಯದು ಆಗುತ್ತದೆ. ಕೇಂದ್ರ ಬಿಜೆಪಿ ಸರ್ಕಾರ ಜನರ ಒಳಿತಿಗಾಗಿ ಕೆಲಸ ಮಾಡಬೇಕೆಂದು ಸಂಕಲ್ಪ ತೊಟ್ಟಿದ್ದೇವೆ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೈಗೊಂಡಿದ್ದ ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಸೇರಿದಂತೆ ಒಳ್ಳೆಯ ಯೋಜನೆಗಳನ್ನು ಕೈಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಬಡವರಲ್ಲೇ ತಾರತಮ್ಯ, ವಸತಿ ಯೋಜನೆಯಲ್ಲೂ ಸರ್ಕಾರ ತಾರತಮ್ಯ, ನಿರ್ಲಕ್ಷ್ಯ ಮಾಡುತ್ತಿದೆ. ಜನರ ಮಧ್ಯದಲ್ಲಿ ತಾರತಮ್ಯ ಮಾಡುವುದು, ಒಡೆಯುವ ಕೆಲಸ ಮಾಡುವುದನ್ನು ಬಿಟ್ಟು, ಎಲ್ಲ ಬಡವರ ಹಿತಾಸಕ್ತಿ ಕಾಪಾಡಲು ಮುಖ್ಯಮಂತ್ರಿಯವರು ಮುಂದಾಗಬೇಕು. ಅಭಿವೃದ್ಧಿ ಯೋಜನೆ ಕೈಗೊಂಡು, ತಾರತಮ್ಯ ಮಾಡಬಾರದು. ಇದು ಮುಂದುವರಿದರೆ ಮುಂಬರುವ ಚುನಾವಣೆಗಳಲ್ಲೂ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement