ಮಹಿಳಾ ದೌರ್ಜನ್ಯ: ಇತ್ಯರ್ಥಕ್ಕೆ ಕ್ರಮ
ಮೈಸೂರು: ಮಹಿಳಾ ಆಯೋಗದಲ್ಲಿ ದಾಖಲಾದ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದರು. ನಗರ ಪಾಲಿಕೆ ಸದಸ್ಯ ಸ್ಥಾನಕ್ಕೆ ಗುರುವಾರ ರಾಜಿನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ನನಗೆ ಉನ್ನತ ಜವಾಬ್ದಾರಿ ನೀಡಿದೆ. ಅದನ್ನು ಎಲ್ಲರ ವಿಶ್ವಾಸದೊಂದಿಗೆ ಸಮರ್ಥವಾಗಿ ನಿರ್ವಹಿಸುತ್ತೇನೆ. ಮಹಿಳಾ ಆಯೋಗದಲ್ಲಿ ವರದಕ್ಷಿಣೆ, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಸುಮಾರು 1,613 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಅವುಗಳ ಇತ್ಯರ್ಥಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಮಹಿಳೆಯರ ನಾಪತ್ತೆ ಕುರಿತು ಮಾಹಿತಿ ಸಂಗ್ರಹಿಸುತ್ತೇನೆ. ಅಲ್ಲದೆ ಆಯಾ ಜಿಲ್ಲಾ ಎಸ್ಪಿಗಳ ಜೊತೆ ಮಾತುಕತೆ ನಡೆಸಿ ಎಷ್ಟು ಪ್ರಕರಣಗಳಲ್ಲಿ ಮಹಿಳೆಯರು ಪತ್ತೆ ಆಗಿದ್ದಾರೆ, ಪತ್ತೆ ಆಗದ ಪ್ರಕರಣ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಅಲ್ಲದೆ ಮಹಿಳೆಯರ ಕಾಣೆಯ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು. ಇದರ ಜೊತೆಗೆ ಆ್ಯಸಿಡ್ ದಾಳಿಗೆ ಒಳಗಾದವರಿಗೆ ರು. 2 ಲಕ್ಷ ಪರಿಹಾರ ನೀಡಲಾಗುತ್ತಿದೆ. ಪರಿಹಾರದ ಮೊತ್ತ ಹೆಚ್ಚಳ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.