ಸ್ವರ್ಣಲೇಪನ ಕಡತ ನಾಪತ್ತೆ: ತನಿಖೆ
ಮೈಸೂರು: ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಸ್ವರ್ಣಲೇಪನ ಕಾಮಗಾರಿಗೆ ಸಂಬಂಧಿಸಿದ ಮಹತ್ವದ ದಾಖಲೆ ಅರಮನೆ ಆಡಳಿತ ಮಂಡಳಿಯ ಕಚೇರಿಯಿಂದ ನಾಪತ್ತೆಯಾಗಿರುವ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಅರಮನೆ ಸ್ವರ್ಣಲೇಪನ 4 ಕಾಮಗಾರಿಗಳ ವಿವರಗಳಿದ್ದ ಅಳತೆ ಪುಸ್ತಕ (ಮೆಸರಿಂಗ್ ಬುಕ್) ನಾಪತ್ತೆಯಾಗಿದೆ ಹಾಗೂ ಕಚೇರಿ 5 ಮಂದಿ ಸಿಬ್ಬಂದಿ ಮೇಲೆ ಅನುಮಾನವಿದೆ ಎಂದು ಆರೋಪಿಸಿ ಅರಮನೆ ಅಡಳಿತ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ದೂರು ನೀಡಿದ್ದಾರೆ.
ಅಲ್ಲದೆ, ಲೆಕ್ಕ ಪರಿಶೋಧನೆಯ ವೇಳೆ ಅಳತೆ ಪುಸ್ತಕ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಹಿಂದಿನ ನಿರ್ದೇಶಕ ಸ್ವಾಮಿ, ಲೆಕ್ಕ ಅಧೀಕ್ಷಕ ಕೆ.ಬಿ. ಈಶ್ವರಪ್ಪ, ಕ್ಯಾಷಿಯರ್ ಆನಂದ, ಬೋರಪ್ಪ, ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ಕಂಪ್ಯೂಟರ್ ಆಪರೇಟರ್ ಸೌಮ್ಯ ಎಂಬುವರ ಮೇಲೆ ಅನುಮಾನ ಇರುವುದಾಗಿ ಸುಬ್ರಹ್ಮಣ್ಯ ದೂರಿನಲ್ಲಿ ಆರೋಪಿಸಿದ್ದಾರೆ.
ಅರಮನೆ ಮಂಡಳಿ ಉಪ ನಿರ್ದೇಶಕರು ನೀಡಿರುವ ಈ ದೂರಿನ ಹಿನ್ನೆಲೆಯಲ್ಲಿ ದೇವರಾಜ ಠಾಣೆ ಇನ್ಸ್ಪೆಕ್ಟರ್ ಎಚ್.ಎಂ. ಕಾಂತರಾಜು ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಸಹ ಆರೋಪಿಯಾಗಿರುವುದು ಗಮನಾರ್ಹ.
ಲೋಕಾಯುಕ್ತ ಪ್ರಕರಣ ತನಿಖೆ: ಅರಮನೆಯ ಸ್ವರ್ಣಲೇಪನ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ 10 ಮಂದಿಯ ವಿರುದ್ಧ ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಿತರಾಗಿ ದಾಖಲಿಸಿಕೊಂಡಿರುವ ಪ್ರಕರಣ ತನಿಖೆ ಸಹ ಚುರುಕಾಗಿ ನಡೆಯುತ್ತಿದೆ.
ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಮಣ್ಯ, ಮಾಜಿ ನಿರ್ದೇಶಕ ಪಿ.ವಿ. ಅವರಾದಿ, 2007 ರಿಂದ 2013 ರವರೆಗೆ ಎಂಜಿನಿಯರ್ಗಳಾಗಿ ಕಾರ್ಯ ನಿರ್ವಹಿಸಿದ್ದ ಲಕ್ಷ್ಮಿಶ್, ಶ್ರೀನಿವಾಸ್, ರಾಜಶೇಖರ್ಗೌಡ, ಮುರಳೀಧರ್, ಸೋಮಶೇಖರ್, ಪರಶಿವಮೂರ್ತಿ, ಕಲಾವಿದರಾದ ಬಾಂಬೆ ಪಿಂಕ್ ಸಿಟಿಯ ಶಯ್ಜಾದ್ ಖಾನ್ ಮತ್ತು ಗಂಜೀಫಾ ರಘುಪತಿ ಭಟ್ಟ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆದರೆ, ಈ ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಯಾರನ್ನು ಸಹ ಲೋಕಾಯುಕ್ತ ಪೊಲೀಸರು ಬಂಧಿಸಿಲ್ಲ. ಈ ನಡುವೆ ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಕಲಾವಿದ ಗಂಜೀಫಾ ರಘುಪತಿ ಭಟ್ಟ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.