ಕೃಷಿ ವಿಮೆ: ನಾಳೆವರೆಗೆ ಅವಕಾಶ
ಮೈಸೂರು: ಮೈಸೂರು ಜಿಲ್ಲೆಯ ಹಲವು ಹೋಬಳಿಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದು, ಹವಾಮಾನ ಮುನ್ಸೂಚನೆ ಪ್ರಕಾರ ಜು.10 ರೊಳಗೆ ಮಳೆ ಬರುವ ಸಂಭವವಿದೆ. ಬೆಳೆಗಳು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2014-15ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಪ್ರದೇಶಗಳಲ್ಲಿ ಮುಖ್ಯವಾಗಿ ಮೈಸೂರು ತಾಲೂಕಿನ ಇಲವಾಲ ಹೋಬಳಿ, ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಮತ್ತು ಹುಲ್ಲಹಳ್ಳಿ ಹೋಬಳಿಗಳು, ಹುಣಸೂರು ತಾಲೂಕಿನ ಬಿಳಿಕೆರೆ ಹಾಗೂ ಗಾವಡಗೆರೆ, ಪಿರಿಯಾಪಟ್ಟಣ ತಾಲೂಕಿನ ಕಸಬಾ, ಬೆಟ್ಟದಪುರ ಹಾಗೂ ರಾವಂದೂರು, ಟಿ.ನರಸೀಪುರ ತಾಲೂಕಿನ ಸೋಸಲೆ ಹಾಗೂ ಮೂಗೂರು ಹೋಬಳಿ ಹಾಗೂ ಕೆ.ಆರ್.ನಗರ ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿರುವುದನ್ನು ಗಮನಿಸಲಾಗಿದೆ ಎಂದು ಹೇಳಿದ್ದಾರೆ.
ಮಳೆ ಬಾರದಿದ್ದರೆ ಬೆಳೆಗಳು ಸಂಪೂರ್ಣ ಒಣಗಿ ಹೋಗುವ ಅವಕಾಶಗಳು ಕೂಡ ಹೆಚ್ಚಾಗಿದೆ. ಹೀಗಾಗಿ, ರೈತರು ಈಗ ಚಾಲ್ತಿಯಲ್ಲಿರುವ ಮಾರ್ಪಡಿಸಿದ ಕೃಷಿ ವಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಲು ಜೂ.30 ಕೊನೆ ದಿನವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇನ್ನೂ ಬಿತ್ತನೆಯಾಗಿರದ ಪ್ರದೇಶಗಳಿಗೆ ಪರ್ಯಾಯ ಬೆಳೆ ಪದ್ಧತಿಗಳನ್ನು ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳೊಂದಿಗೆ ಚರ್ಚಿಸಿ ತಯಾರಿಸಲಾಗಿದ್ದು, ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.