ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಸ್ಕರಣೆಗೆ ಇಲ್ಲಿಲ್ಲ ಸೌಕರ್ಯ

Mainashree
Updated On : 28 Jun 2014, 10:32 am

ಮೈಸೂರು: ಆರ್ಥಿಕ ನೆರವು ಹಾಗೂ ಮೂಲಸೌಕರ್ಯ ಮುಂತಾದ ಸವಲತ್ತುಗಳನ್ನು ಒದಗಿಸಿದರೂ ಕೆಲಸ ಮಾಡುವಲ್ಲಿ ಹಿಂದುಳಿಯುವುದು ಹಾಗೂ ನಿರೀಕ್ಷಿತ ಯೋಜನೆ ವಿಫಲವಾಗುವುದು ಸರ್ಕಾರದ ಅನುಷ್ಠಾನದಲ್ಲಿ ಸಹಜ. ಆದರೆ ಸೌಕರ್ಯದ ಕೊರತೆ ನಡುವೆಯೂ ಉದ್ದೇಶಿತ ಗುರಿ ತಲುಪುವುದು ಸಾಹಸ ಕಾರ್ಯವೇ ಸರಿ. ಇದು ಮೈಸೂರು ನಗರದ ವರುಣ ನಾಲೆ ಬಳಿ ಇರುವ ಹಳೆ ಕೆಸರೆಯ ಶೂನ್ಯ ಕಸ ನಿರ್ವಹಣಾ ಘಟಕ. ಮಹಾನಗರ ಪಾಲಿಕೆಯು ನರ್ಮ್ ಯೋಜನೆಯಡಿ ಸುಮಾರು 35 ಲಕ್ಷ ವೆಚ್ಚ ಮಾಡಿ ಇದನ್ನು ರೂಪಿಸಿದೆ. ಘಟಕ ಸಮರ್ಪಕವಾಗಿ ನಿರ್ವಹಿಸಿದರೆ 5 ರಿಂದ10 ಟನ್ ಗೊಬ್ಬರವನ್ನು ತಯಾರಿಸಬಹುದಾಗಿದೆ. ಆದರೆ ಈ ಕಾರ್ಯವು ಇಲ್ಲಿ ಪರಿಪೂರ್ಣವಾಗಿ ನಡೆಯುತ್ತಿಲ್ಲ.
ಕಸ ಸಂಗ್ರಹಕ್ಕೆ ಸೂಕ್ತ ತಾಣ, ಗೊಬ್ಬರ ತಯಾರಿಕೆಗೆ ಅಗತ್ಯ ವ್ಯವಸ್ಥೆ ಹಾಗೂ ಕಾರ್ಯಾಲಯ ಕಟ್ಟಡ ನಿರ್ಮಿಸಲಾಗಿದೆ. ಆದರೆ ಗೊಬ್ಬರ ತಯಾರಿಕೆಗೆ ಬಹುಮುಖ್ಯವಾಗಿ ಬೇಕಾದ ನೀರಿನ ವ್ಯವಸ್ಥೆಯನ್ನು ಇಲ್ಲಿ ಮಾಡದಿರುವುದು ಅಧಿಕಾರಿಗಳ ಬೇಜಾಬ್ದಾರಿಗೆ ನಿದರ್ಶನ. ಅಲ್ಲದೆ ದೀಪ ಹಾಗೂ ಯಂತ್ರಗಳಿಗೆ ಅವಶ್ಯಕವಾದ  ವಿದ್ಯುತ್ ಸಂಪರ್ಕ ಸಹ ಕಲ್ಪಿಸಿಲ್ಲ. ಘಟಕ ನಿರ್ಮಾಣವಾಗಿ ವರ್ಷವೇ ಕಳೆದಿದ್ದರೂ ಮೂಲಸೌಕರ್ಯ ಒದಗಿಸುವಲ್ಲಿ ಆಸಕ್ತಿ ತೋರಿಸದಿರುವುದು ಯೋಜನೆಯ ಅನುಷ್ಠಾನಕ್ಕೆ ಅಡ್ಡಿಯಾಗಿದೆ.  
ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ವಾರ್ಡ್ 46- ಕೆಸರೆ, 47- ಸುಭಛಾಷನಗರ, 48- ರಾಜೇಂದ್ರನಗರ-  49- ಎನ್.ಆರ್ ಮೊಹಲ್ಲಾ, 50- ಗಾಂಧಿನಗರ, 51- ಸತ್ಯನಗರ, 52- ಉದಯಗಿರಿ, 53- ರಾಜೀವ್‌ನಗರ, 54 ಶಾಂತಿನಗರ ಈ ಒಂಬತ್ತು ಪ್ರದೇಶಗಳು ಸೇರಿವೆ. ಸುಮಾರು 1.8 ಲಕ್ಷಕ್ಕೂ ಅಧಿಕ ಜನಸಂಖ್ಯೆ, 45 ಸಾವಿರಕ್ಕೂ ಅಧಿಕ ಮನೆಗಳು ಹಾಗೂ 2.5 ಸಾವಿರಕ್ಕೂ ಹೆಚ್ಚಿನ ಉದ್ದಿಮೆಗಳಿವೆ. ವಲಯ 8 ರ ವ್ಯಾಪ್ತಿಗೆ ಇದು ಸೇರಿದೆ.
ಗೊಬ್ಬರ ತಯಾರಿಕೆ ಕೆಲಸ: ಮನೆ ಮನೆಯಿಂದ ವಿವಿಧ ತ್ಯಾಜ್ಯವನ್ನು ಆಟೋ ಟಿಪ್ಪರ್ ಮೂಲಕ ತಂದು ನಗರ ಪಾಲಿಕೆ ಸಿಬ್ಬಂದಿ ಇಲ್ಲಿನ ಘಟಕದ ಆವರಣದಲ್ಲಿ ಸುರಿಯುತ್ತಾರೆ.  ಘಟಕದ ನಿರ್ವಹಣೆ ವಹಿಸಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಯು  ಹಸಿಕಸ, ಒಣಕಸ ಹಾಗೂ ಲೋಹದ ವಸ್ತುಗಳು ಹಾಗೂ ಅಪಾಯಕಾರಿ ಪದಾರ್ಥಗಳನ್ನು ವಿಂಗಡಿಸುವ ಕೆಲಸ ಮಾಡುತ್ತಿದೆ. ಅಲ್ಲದೆ, ಹಸಿಕಸವನ್ನು ಪ್ರತ್ಯೇಕಿಸಿ ಅದರಿಂದ ಎರೆಹುಳು ಗೊಬ್ಬರ ತಯಾರಿಸುವ ಕೆಲಸ ನಡೆಸುತ್ತಿದೆ.
ತ್ಯಾಜ್ಯ ನಿರ್ವಹಣೆಗೆ ಯಾವುದೇ ಆರ್ಥಿಕ ನೆರವು ಪಡೆಯದೆ ಈ ಎನ್‌ಎನ್‌ಜಿಒ ಸ್ವಹಿತಾಸಕ್ತಿ ವಹಿಸಿ ಉಚಿತವಾಗಿ ಸಂಸ್ಕರಣೆ ಕಾರ್ಯಕ್ಕೆ ಮುಂದಾಗಿದೆ. ಗೊಬ್ಬರ ಮಾರಿದ ಹಣದಿಂದಲೇ ಸಿಬ್ಬಂದಿ ವೇತನ ಮತ್ತಿತರ ವೆಚ್ಚ ಭರಿಸಬೇಕಿದೆ. ಇದರ ನಡುವೆ ಮೂಲ ಸೌಕರ್ಯವೂ ಕೊರತೆಯಾದರೆ ಆ ಸಂಸ್ಥೆ ಹೇಗೆ ನಿಭಾಯಿಸಬೇಕು ಎಂಬುದನ್ನು ಅಧಿಕಾರಿಗಳು ಚಿಂತಿಸಬೇಕು. ಇಂತಹ ಸಂಸ್ಥೆಗಳು ಮುಂದೆ ಬಂದಾಗ ಪಾಲಿಕೆಯು ಸಹ ಅಗತ್ಯ ಸವಲತ್ತು ಒದಗಿಸಿ ಸಹಕಾರ ನೀಡಿದಾಗ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
ಈ ಭಾಗದಲ್ಲಿ ಸಂಗ್ರಹವಾಗುವ ಕಸವನ್ನು ಇಲ್ಲಿನ ಘಟಕದಲ್ಲಿ ಸಂಸ್ಕರಿಸುವ ಯೋಜನೆ ರೂಪಿಸಲಾಗಿದ್ದರೂ.  ಪ್ರಸ್ತುತ ಕೇವಲ 1- 2 ಟನ್ ಮಾತ್ರ ಸಂಸ್ಕರಿಸುವ ಕೆಲಸ ನಡೆದಿದೆ. ವಾರ್ಡ್‌ನಲ್ಲಿ ಲಭ್ಯವಾಗುವ ಎಲ್ಲಾ ಕಸವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸ್ಯೂಯೇಜ್ ಫಾರಂನಲ್ಲಿರುವ ಎಕ್ಸೆಲ್ ಪ್ಲಾಂಟ್‌ನ ಹೊರೆ ತಪ್ಪಿಸಬಹುದಾಗಿದೆ.
ಘಟಕಗಳು ಶೀಘ್ರ ಪುನರಾರಂಭ
ಮೈಸೂರಿನ ಬನ್ನಿಮಂಟಪದ ಜೋಡಿ ತೆಂಗಿನಮರ ಸ್ಮಶಾನದ ಬಳಿ ನಿರ್ಮಿಸಿರುವ ಶೂನ್ಯಕಸ ನಿರ್ವಹಣಾ ಘಟಕವನ್ನು ಶೀಘ್ರದಲ್ಲಿ ಪುನಾರಂಭಿಸಲಾಗುವುದು ಎಂದು ನಗರ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ತಿಳಿಸಿದ್ದಾರೆ. ಕನ್ನಡಪ್ರಭದಲ್ಲಿ ಮೈಸೂರು ಕಸಬ್ ಸರಣಿ ಮಾಲಿಕೆಯಲ್ಲಿ ಜೂ.27 ರಂದು ಪ್ರಕಟವಾಗಿರುವ ಕಸ ಸಂಸ್ಕರಣೆ ಸ್ಥಗಿತ ಎಂಬ ವರದಿಗೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ನಗರದ ವಿವಿಧೆಡೆ ಸ್ಥಗಿತವಾಗಿರುವ ಶೂನ್ಯಕಸ ನಿರ್ವಹಣಾ ಘಟಕಗಳ ನಿರ್ವಹಣೆಗೆ ಆಸಕ್ತ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, 8 ಸಂಸ್ಥೆಗಳು ಮುಂದೆ ಬಂದಿವೆ. ಇವುಗಳೊಂದಿಗೆ ಷರತ್ತುಬದ್ಧ ಚರ್ಚೆ ನಡೆಸಿ ಒಪ್ಪಂದಕ್ಕೆ ಸಮ್ಮತಿಸಲಾಗುವುದು ಎಂದಿದ್ದಾರೆ.

ಮಾ. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement