ಅನಾರೋಗ್ಯ ತಡೆಗೆ ಅರಿವು ಅವಶ್ಯ
ಮೈಸೂರು: ಅನಾರೋಗ್ಯ ತಡೆಯುವಲ್ಲಿ ಜನರಿಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ವೈದ್ಯ ವಾರ್ತಾ ಪ್ರಕಾಶನವು ಎಂಜಿನಿಯರಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಿ.ವಿ.ಎಸ್.ಅಯ್ಯರ್ ಅವರ ಸಂಪಾದಿತ ಮುದ್ರಾವಿಜ್ಞಾನ ಕೃತಿ ಲೋಕಾರ್ಪಣೆ ಹಾಗೂ ವಿಜ್ಞಾನಿ ಡಾ.ರಾಜರಾಮಣ್ಣ ಪ್ರಶಸ್ತಿ ಪುರಸ್ಕೃತ ಡಾ.ಕೆ.ಚಿದಾನಂದಗೌಡರ ಅಭಿನಂದನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸರ್ಕಾರದ ನೀತಿಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಾದ ಎಂಬಿಬಿಎಸ್, ಎಂಡಿ ಮುಂತಾದ ಶಿಕ್ಷಣವನ್ನು ನೀಡುವುದಕ್ಕೆ ಪ್ರಾಶಸ್ತ್ಯವನ್ನು ಹಾಗೂ ಕಾಯಿಲೆ ಬಂದಾಗ ಔಷಧ ಕೊಡುವುದಕ್ಕೆ ಆದ್ಯತೆ ವಹಿಸಲಾಗಿದೆ. ಆದರೆ ರೋಗ ಬರದಂತೆ ತಡೆಯುವಲ್ಲಿ ಬೇಕಾದ ಶಿಕ್ಷಣವನ್ನು ಹಾಗೂ ಅರಿವು ನೀಡುವಲ್ಲಿ ವಿಫಲವಾಗಿದೆ. ರೋಗ ತಡೆಗೆ ಮುಂದಾಗುವ ಚೀನಾ ದೇಶ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ನಮ್ಮ ದೇಶದಲ್ಲಿ ಇಂಗ್ಲಿಷ್, ಆಯುರ್ವೇದ, ಯುನಾನಿ, ಹೋಮಿಯೋಪತಿ ಮುಂತಾದ ಎಲ್ಲ ರೀತಿಯ ವೈದ್ಯಕೀಯ ಪದ್ಧತಿ ಅನುಸರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಅಪಾರ ಸಂಪತ್ತಿದ್ದು, ಅದನ್ನು ಉಪಯೋಗಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ. ಇಂದಿನ ಒತ್ತಡದ ಜೀವನದಲ್ಲಿ ಯಾವುದೇ ಹಣದ ಖರ್ಚಿಲ್ಲದೆ, ಸುಲಭವಾಗಿ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ವಿಧಾನವನ್ನು ಪ್ರೊ.ಡಿ.ವಿ.ಎಸ್. ಅಯ್ಯರ್ ಅವರು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ ಎಂದರು.
ಡಾ.ರಾಜರಾಮಣ್ಣ ಅವರು ಪ್ರಸಿದ್ಧ ವಿಜ್ಞಾನಿಯಾಗಿ ಹಾಗೂ ಭಾರತದ ಪ್ರಧಾನಿಗಳ ಸಲಹೆಗಾರರಾಗಿ ಕೆಲಸ ಮಾಡಿದವರು. ಅವರನ್ನು ಹತ್ತಿರದಿಂದ ಬಲ್ಲೆ. ಅಂಥವರ ಹೆಸರಿನ ಪುರಸ್ಕಾರ ಪಡೆದಿರುವ ಡಾ.ಕೆ. ಚಿದಾನಂದಗೌಡರು ಸರಳ ಹಾಗೂ ವಿನಯವಂತರು. ರಾಷ್ಟ್ರದ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ. ಡಾ.ರಾಜರಾಮಣ್ಣ ಹಾಗೂ ಚಿದಾನಂದಗೌಡರಿಗೂ ಸಾಮಿಪ್ಯವಿದೆ ಎಂದರು.
ಬುದ್ಧಿ ಕಲಿಸುವರು: ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಈ ಎಲ್ಲ ಪಕ್ಷಗಳಲ್ಲಿಯೂ ಉತ್ತಮ ರಾಜಕಾರಣಿಗಳಿದ್ದಾರೆ. ಕೇವಲ ನನ್ನನ್ನು ಕಳಕಿಂತರಲ್ಲದ ರಾಜಕಾರಣಿಯೆಂದು ನಿರೂಪಕರು ಹೇಳುವುದು ಸರಿಯಲ್ಲ. ಯಾರು ಕಳಂಕಿತರು ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ಅಂಥವರಿಗೆ 5 ವರ್ಷಕ್ಕೊಮ್ಮೆ ಮತದಾರರು ಬುದ್ಧಿ ಕಲಿಸುತ್ತಾರೆ. ಕಳೆದ ಲೋಕಸಭಾ ಚುನಾವಣೆ ಇದಕ್ಕೆ ನಿದರ್ಶನ ಎಂದರು.
ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಹಾಗೂ ಡಾ.ರಾಜರಾಮಣ್ಣ ಪ್ರಶಸ್ತಿ ಪುರಸ್ಕೃತ ಡಾ.ಕೆ.ಚಿದಾನಂದಗೌಡರನ್ನು ಅವರು ಸನ್ಮಾನಿಸಿದರು. ಮುದ್ರಾವಿಜ್ಞಾನ ಕನ್ನಡ ಕೃತಿಯನ್ನು ವಿಧಾನಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಹಾಗೂ ಇಂಗ್ಲಿಷ್ ಕೃತಿಯನ್ನು ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಬಿಡುಗಡೆಗೊಳಿಸಿದರು. ಎಂಜಿನಿಯರಗಳ ಸಂಸ್ಥೆ ಅಧ್ಯಕ್ಷ ಡಾ.ಟಿ.ಅನಂತಪದ್ಮನಾಭ, ಸಮಾಜ ಸೇವಕ ಕೆ.ರಘುರಾಂ ಮುಖ್ಯ ಅತಿಥಿಯಾಗಿದ್ದರು. ಮೈಸೂರು ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಅಧ್ಯಕ್ಷ ಎ.ಎಸ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಐಇಐ ಕಾರ್ಯದರ್ಶಿ ಪಿ.ಸಂಪತ್ತು, ಲೇಖಕ ಪ್ರೊ.ಡಿ.ವಿ.ಎಸ್. ಅಯ್ಯರ್ ಇದ್ದರು.