ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಾಮಸಭೆಗೆ ಖಾಲಿ ಕೊಡ ತಂದರು

Mainashree
Updated On : 30 Jun 2014, 12:33 pm

ಪಿರಿಯಾಪಟ್ಟಣ: ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಸಭೆಗೆ ಖಾಲಿ ಕೊಡಗಳೊಂದಿಗೆ ಬಂದು ಪ್ರತಿಭಟಿಸಿದ ಘಟನೆ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಜರುಗಿತು.
ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮಸಭೆಗೆ ಆಗಮಿಸಿದ್ದ ಹಲವಾರು ಮಹಿಳೆಯರು ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಖಾಲಿ ಕೊಡ ತರುವ ಮೂಲಕ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಮುಜುಗರಕ್ಕೊಳಗಾಗುವಂತೆ ಮಾಡಿದರಲ್ಲದೆ, ಗ್ರಾಪಂಯಲ್ಲಿನ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಗ್ರಾಮದ ಅಂಬೇಡ್ಕರ್ ಬಡಾವಣೆಯ ಯುವಕರು ಹಾಗೂ ಮಹಿಳೆಯರು ಅಸಮರ್ಪಕ ನೀರು ಪೂರೈಕೆಯಾಗದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕಳೆದ 20 ದಿನಗಳಿಂದಲೂ ನೀರು ಪೂರೈಕೆಯಾಗುತ್ತಿಲ್ಲ ಕಾರಣ, ಕೇಳಿದರೆ ಮೋಟರ್ ಕೆಟ್ಟಿದೆ ಎಂದು ಉತ್ತರಿಸುತ್ತೀರಾ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವವರೆಗೂ ಸಭೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟಹಿಡಿದು ಕುಳಿತರು.  
ಅಧ್ಯಕ್ಷೆ ಪುಷ್ಪ ಪರಮೇಶ್ ಮಾತನಾಡಿ, ಕೆಟ್ಟಿರುವ ಮೋಟರ್ ಅನ್ನು ರಿಪೇರಿ ಮಾಡಿಸಿದ್ದು, ಸಂಜೆಯೊಳಗೆ ನೀರು ಪೂರೈಕೆ ಮಾಡುವುದಾಗಿ ತಿಳಿಸಿದರು.
ಅವರ ಉತ್ತರಕ್ಕೆ ತೃಪ್ತರಾಗದ ಬಡಾವಣೆಯ ನಿವಾಸಿಗಳು ಅಧ್ಯಕ್ಷರಾದ ಮೇಲೆ ಗ್ರಾಮದ ಯಾವ ಬೀದಿಗೂ ಭೇಟಿ ನೀಡಿಲ್ಲ. ನೀರು ಮತ್ತು ಬೀದಿ ದೀಪದ ಸಮಸ್ಯೆ ಏನೆಂದು ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ನಿಮ್ಮ ಭಾಗದಿಂದ ಗೆದ್ದಿರುವ ಸದಸ್ಯರನ್ನು ಬಿಟ್ಟು ನನ್ನನ್ನೇ ಏಕೆ ಪ್ರಶ್ನಿಸುತ್ತೀರಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 4 ಲಕ್ಷ ವೆಚ್ಚದಲ್ಲಿ ಬೋರ್‌ವೆಲ್ ಕೊರೆಸಲಾಗಿದೆ. ಪೈಪ್‌ಲೈನ್ ಒಡೆದಿದ್ದರಿಂದ ನೀರು ಪೂರೈಕೆ ವಿಳಂಬವಾಗಿದೆ ನೀರಿನ ಸಮಸ್ಯೆ ಒಂದೇ ಗ್ರಾಮದಲ್ಲಿಲ್ಲ ಎಲ್ಲ ಕಡೆಗಳಲ್ಲೂ ಇದೆ. ವಿದ್ಯುತ್ ಕೊರೆತೆಯಿಂದ ಟ್ಯಾಂಕ್‌ಲೋಡ್ ಆಗುತ್ತಿಲ್ಲ ಎಂದು ಸಮಜಾಯಿಶಿ ನೀಡಿದರು. ಯಾವುದಾದರೂ ಕಾಮಗಾರಿಯ ಚೆಕ್‌ಗೆ ಸಹಿ ಮಾಡಲು ಕಮಿಷನ್ ಕೇಳುವ ನೀವು ಪಂಚಾಯಿತಿ ವ್ಯಾಪ್ತಿಯ ಯಾವ ಬೀದಿಗಾದರೂ ಒಂದು ದಿನವೂ ಭೇಟಿ ನೀಡಲ್ಲ ಎಂದು ಅಧ್ಯಕ್ಷೆ ಪುಷ್ಪಾ ಅವರನ್ನು ಗ್ರಾಪಂ ಸದಸ್ಯ ಪ್ರಕಾಶ್ ಗೌಡ ತರಾಟೆಗೆ ತೆಗೆದುಕೊಂಡರು.
ಪಿಡಿಒ ಕುಮಾರ್ ಮಾತನಾಡಿ, ಸಮರ್ಪಕ ನೀರು ಪೂರೈಕೆಗಾಗಿ ಪೈಪ್‌ಲೈನ್ ದುರಸ್ತಿ ಮಾಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ತಾಪಂ ಸದಸ್ಯೆ ರತ್ನಮ್ಮ, ಗ್ರಾಪಂ ಉಪಾಧ್ಯಕ್ಷೆ ರಾಜಮ್ಮ, ಎಂಜಿನಿಯರ್ ಸೋಮಣ್ಣ, ರೇಷ್ಮೆ ಇಲಾಖೆ ಅಧಿಕಾರಿಗಳಾದ ಶಿವನಂಜಯ್ಯ, ಗುರುಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement