ಜಾತಿ ಸಂಘರ್ಷಕ್ಕೆ ನಾಂದಿ ಹಾಡಿದ ಶಾಸಕ
ಕೆ.ಆರ್. ನಗರ: ಕ್ಷುಲ್ಲಕ ವಿಚಾರ ಮುಂದಿಟ್ಟುಕೊಂಡು ವೈಯಕ್ತಿಕ ಹಗೆತನದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ ಅವರನ್ನು ಅಮಾನತು ಮಾಡಿಸಿರುವ ಶಾಸಕ ಸಾ.ರಾ.ಮಹೇಶ್ ತಾಲೂಕಿನಲ್ಲಿ ಜಾತಿ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ ಎಂದು ಟಿ.ಮರಿಯಪ್ಪ ವಿದ್ಯಾಸಂಸ್ಥೆಯ ಕಾರ್ಯದರ್ಶಿ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್ ಆರೋಪಿಸಿದರು.
ಜೂ.23 ರಂದು ಪಟ್ಟಣದ ಟಿ.ಮರಿಯಪ್ಪ ಸ್ಮಾರಕ ವಿದ್ಯಾಸಂಸ್ಥೆಗೆ ಮಾಜಿ ಸಂಸದ ಎಚ್.ವಿಶ್ವನಾಥ್ ಭೇಟಿ ನೀಡಿದ್ದರು. ಅಂದು ಅವರು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಇಲಾಖೆಯ ವಿಚಾರಗಳ ಮಾಹಿತಿ ಪಡೆಯಲು ಶಾಲೆಗೆ ಕರೆಸಿಕೊಂಡಿದ್ದರು. ಅವರನ್ನು ಭೇಟಿ ಮಾಡಲು ಬಂದಿದ್ದ ಎಸ್.ಟಿ.ಜವರೇಗೌಡರು ಅಕ್ಷರ ದಾಸೋಹ ಭವನ ಉದ್ಘಾಟನಾ ಸಮಾರಂಭದಲ್ಲಿ ನಮ್ಮ ಜತೆಗಿದ್ದರು. ಇದನ್ನು ಹೊರತುಪಡಿಸಿ ಶಿಕ್ಷಣ ಇಲಾಖೆಯಿಂದ ಯಾವುದೇ ಅಧಿಕೃತ ಕಾರ್ಯಕ್ರಮ ನಡೆಸಿಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕಿನ ಅಭಿವೃದ್ಧಿ ವಿಚಾರ ಮತ್ತು ಕಳೆದ ಮೂರು ವರ್ಷಗಳಿಂದ ಕಬ್ಬು ಅರೆಯದೆ ಸ್ಥಗಿತಗೊಂಡಿರುವ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭದ ಬಗ್ಗೆ ವಿಧಾನಸಭೆಯಲ್ಲಿ ಎಂದೂ ಚರ್ಚಿಸದ ಸಾ.ರಾ. ಮಹೇಶ್, ಯಾವುದೇ ತಪ್ಪು ಮಾಡದ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಇಂತಹ ಕ್ರಮಕ್ಕೆ ಮುಂದಾಗಿದ್ದು ಖಂಡನೀಯ ಎಂದು ಹೇಳಿದರು.
ಶಾಸಕರಾಗಿ ಆಯ್ಕೆಯಾದವರು ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ ಕ್ಷೇತ್ರದ ಮತದಾರರನ್ನು ಸಮಾನ ಮನೋಭಾವನೆಯಿಂದ ಕಾಣಬೇಕು. ಆದರೆ ಅವರು ಪಕ್ಷದ ಚೌಕಟ್ಟಿನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದು, ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಕಾಂಗ್ರೆಸ್ ಮುಖಂಡರು ಮತ್ತು ಜನಪ್ರತಿನಿಧಿಗಳಿಂದ ಶಿಫಾರಸು ಪಡೆದು ವರ್ಗಾವಣೆಯಾಗಿ ಬಂದಿದ್ದಾರೆ ಎಂದು ದ್ವೇಷದ ರಾಜಕಾರಣ ಮಾಡುತ್ತಿರುವುದಕ್ಕೆ ಖಂಡಿಸಿದರು. ಅಧಿಕಾರಿಗಳನ್ನು ಬೆದರಿಸಿ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಸಣ್ಣ ವಿಚಾರವನ್ನು ದೊಡ್ಡದು ಮಾಡಿ, ಅಧಿಕಾರಿ ವರ್ಗದಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿರುವ ಶಾಸಕರು, ಇನ್ನಾದರೂ ಈ ಕೆಟ್ಟ ಚಾಳಿಯನ್ನು ಕೈಬಿಡಬೇಕೆಂದು ಹೇಳಿದರು.
ಪುರಸಭಾಧ್ಯಕ್ಷೆ ಪಾರ್ವತಿ ನಾಗರಾಜು, ಉಪಾಧ್ಯಕ್ಷೆ ಸಿ.ಬಿ. ಕವಿತಾವಿಜಯ್‌ಕುಮಾರ್, ಸದಸ್ಯರಾದ ಕೆ.ಬಿ. ಸುಬ್ರಹ್ಮಣ್ಯ, ಸರೋಜಮ್ಮ ಮಹದೇವ್, ಕೆ.ಜಿ.ಸುಬ್ರಹ್ಮಣ್ಯ, ಮಾಜಿ ಸದಸ್ಯರಾದ ರಾಜಾಶ್ರೀಕಾಂತ್, ಸೈಯದ್ ಅಸ್ಲಾಂ, ಜಿಪಂ ಮಾಜಿ ಸದಸ್ಯ ಜಿ.ಆರ್. ರಾಮೇಗೌಡ, ಮುಖಂಡರಾದ ನಟರಾಜ, ಧನಂಜಯ, ಕಾಳಿಕುಮಾರ್, ಸ್ವಾಮಿ ಇದ್ದರು.