ತಂಬಾಕು ಬೆಳೆಗಾರರ ಪರವಾಗಿ ಕೇಂದ್ರಕ್ಕೆ ಮನವಿ
ರಾವಂದೂರು: ಕೇಂದ್ರ ಸರ್ಕಾರವು ಜುಲೈನಲ್ಲಿ ಸಂಸತ್ತಿನಲ್ಲಿ ಮಂಡಿಸುವ ಬಜೆಟ್ನಲ್ಲಿ ಪ್ರತಿ ಸಿಗರೇಟಿಗೆ 3.50 ರು. ತೆರಿಗೆಯನ್ನು ಹೆಚ್ಚಿಸಬೇಕೆಂದು ಆರೋಗ್ಯ ಇಲಾಖೆ ವತಿಯಿಂದ ಪ್ರಸ್ತಾವನೆಗೊಂಡಿರುವುದು ತಂಬಾಕು ಬೆಳೆಗಾರರಿಗೆ ಆತಂಕಕಾರಿಯಾದ ವಿಷಯವಾಗಿದೆ ಎಂದು ವರ್ಜಿನಿಯಾ ತಂಬಾಕು ಬೆಳೆಗಾರರ ಒಕ್ಕೂಟದ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯ ಡಿ.ಟಿ. ಸ್ವಾಮಿ ತಿಳಿಸಿದ್ದಾರೆ.
ಸುಮಾರು 4 ಲಕ್ಷ ತಂಬಾಕು ಬೆಳೆಗಾರರ ಕುಟುಂಬಗಳ ಜೀವನೋಪಯಕ್ಕೆ ಕುತ್ತು ತರುವಂತಹ ಈ ಪ್ರಸ್ತಾವನೆಯಿಂದ ಬೆಳೆಗಾರರು ಬೀದಿಗೆ ಬೀಳುವಂತಾಗುತ್ತದೆ. ಅಲ್ಲದೆ ಪ್ರತಿ ವರ್ಷ ಕೇವಲ ಸಿಗರೇಟ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ತಂಬಾಕು ಬೆಳೆಯ ಬೇಡಿಕೆ ಹಾಗೂ ರೈತನಿಗೆ ಸಿಗುವ ಆದಾಯಕ್ಕೆ ಕುತ್ತು ತರಲಾಗುತ್ತದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ದೇಶದ ಶೇ0.3 ಪ್ರದೇಶದ ವ್ಯಾಪ್ತಿಯಲ್ಲಿ ತಂಬಾಕು ಕೃಷಿಯನ್ನು ರೈತರು ಮಾಡುತ್ತಿದ್ದು, ವಾರ್ಷಿಕವಾಗಿ ತಂಬಾಕು ಮತ್ತು ಇತರೆ ಉತ್ಪನ್ನಗಳಿಂದ 28 ಸಾವಿರ ಕೋಟಿ ರು. ಆದಾಯ ಅಬಕಾರಿ ಹಾಗೂ ಕಂದಾಯ ಇಲಾಖೆಗೆ ಹರಿದು ಬರುತ್ತಿದೆ. ಅಲ್ಲದೆ ತಂಬಾಕು ರಫ್ತಿನಿಂದ ದೇಶದ ಬೊಕ್ಕಸಕ್ಕೆ 6 ಸಾವಿರ ಕೋಟಿ ರು. ಆದಾಯ ವಿದೇಶಿ ವಿನಿಮಯ ಬರುತ್ತಿದ್ದರೂ, ವರ್ಜಿನಿಯಾ ತಂಬಾಕು ಬೆಳೆಗಾರರ ಮೇಲೆ ಗದಾಪ್ರಹಾರ ಮಾಡ ಹೊರಟಿರುವುದು ಖಂಡನಾರ್ಹ ಸಂಗತಿಯಾಗಿದೆ. ಈ ಮೇಲ್ಕಂಡ ಸಮಸ್ಯೆಗಳ ಬಗೆಗೆ ಕೇಂದ್ರ ಸರ್ಕಾರ ಹಾಗೂ ತಂಬಾಕು ಮಂಡಳಿಯೂ ಗಮನ ಹರಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಅವರು ಮನವಿ ಮಾಡಿದರು.
ರೈತ ಮುಖಂಡರಾದ ಆರ್.ಎಸ್. ಕುಮಾರವಿಜಯ, ಪ್ರಶಾಂತ್ ರಾಜೇಅರಸ್, ಆರ್.ವಿ. ವಿಶ್ವನಾಥ್, ಬಿ.ಜೆ. ಚಂದ್ರೇಗೌಡ, ವಾಸೇಗೌಡ ಇದ್ದರು.