ರೈತರೆ, ಸಹಜ ಕೃಷಿಯತ್ತ ಸಾಗಿ: ಬನ್ನೂರು ಕೃಷ್ಣಪ್ಪ
ಮೈಸೂರು: ಆತ್ಮಹತ್ಯೆಯಿಂದ ಪಾರಾಗಲು ಸಹಜ ಕೃಷಿಗೆ ಮರಳುವುದೊಂದೇ ರೈತರ ಮುಂದಿರುವ ದಾರಿ ಎಂದು ಸಹಜ ಕೃಷಿಕ ಬನ್ನೂರು ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಪೀಪಲ್ಸ್ ಲೀಗಲ್ ಫೋರಂ (ಪಿಎಲ್‌ಎಫ್), ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಹಕಾರದೊಂದಿಗೆ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದಲ್ಲಿ ಸುಭಾಷ್ ಪಾಳೇಕರರ ಶೂನ್ಯ ಬಂಡವಾಳ ಕೃಷಿ ಪದ್ಧತಿ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಇಂದು ನಮ್ಮ ಹೊಲ ಗದ್ದೆಗಳು ರಾಸಾಯನಿಕಗಳಿಂದ ತುಂಬಿಹೋಗಿವೆ. ಮಣ್ಣು ಮತ್ತು ರೈತನ ಆರೋಗ್ಯ ಹದಗೆಟ್ಟಿದೆ. ಸಾಲದಲ್ಲಿ ಮುಳುಗಿ ರೈತನ ಆತ್ಮಹತ್ಯೆಗಳು ಹೆಚುತ್ತಲೇ ಇದೆ. ಈ ವಿಷವರ್ತುಲದಿಂದ ರೈತರನ್ನು ಕಾಪಾಡಲು ಸುಭಾಷ್ ಪಾಳೇಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯಿಂದ ಸಾಧ್ಯವಿದೆ. ಸಹಜ ಕೃಷಿ ಪದ್ಧತಿ ಅನುಸರಿಸಿದ ನಂತರ ಸಾಲದಿಂದ ಹೊರಬಂದು ಉತ್ತಮ ಜೀವನ ನಡೆಸುವುದರ ಬಗ್ಗೆ ವಿವರಿಸಿದ ಅವರು, ಕೃಷಿ ಕ್ಷೇತ್ರದಲ್ಲಿ ಸಾವಯವ ಹೆಸರಿನಲ್ಲಿ ಅನೇಕ ಕಳಪೆ ಕಂಪನಿಗಳು ನುಗ್ಗಿ ಮೋಸ ಮಾಡುತ್ತಿರುವುದರ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು.
ರೈತರೆ ಸ್ವಾವಲಂಬಿಯಾಗಿ: ನಾಟಿ ಹಸುವಿನ ಸೆಗಣಿ ಮತ್ತು ಗಂಜಲದಲ್ಲಿರುವ ಕೋಟ್ಯಂತರ ಜೀವಾಣುಗಳು ಮಣ್ಣಿನ ಫಲವತ್ತತೆಯನ್ನು ಮರಳಿಸುತ್ತವೆ. ಅದರ ಹಾಲು ಆರೋಗ್ಯ ನೀಡುತ್ತದೆ. ಆದರೆ, ಸೀಮೆ ಹಸುಗಳ ಹಾಲು ಅರ್ಬುದ, ಮಧುಮೇಹ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ರೈತ ಸ್ವಾವಲಂಬಿಯಾಗಬೇಕು. ಮಣ್ಣು ಮತ್ತು ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ರೈತನಿಗಿದೆ ಎಂದು ಹೇಳಿದರು.
ನಗರವಾಸಿಗಳು ಮತ್ತು ಹಳ್ಳಿಗರೂ ಇಂದು ಕಾಯಿಲೆಗಳಿಂದ ನರಳುತ್ತಿದ್ದಾರೆ. ರೈತ ನೀಡುವ ವಿಷಯುಕ್ತ ಆಹಾರದಿಂದಾಗಿ ಈ ಅನಾಹುತಗಳು ಆಗುತ್ತಿವೆ. ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಂಡು ಸ್ವಾವಲಂಬಿ ಸಹಜ ಕೃಷಿಗೆ ಮರಳಬೇಕು ಎಂದು ಕರೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ವಿದ್ಯಾಸಾಗರ್ ಅಧ್ಯಕ್ಷತೆ ವಹಿಸಿದರು. ಪಿಎಲ್‌ಎಫ್ ನಿರ್ದೇಶಕ ಪಿ.ಪಿ. ಬಾಬುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಸಂಘದ ಕಾರ್ಯದರ್ಶಿ ಗುರುಲಿಂಗೇಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ, ನಂಜಪ್ಪ, ಜೇಮ್ಸ್ ಜೇಕಬ್ ಕೈನಾಡಿ ಇದ್ದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದ ಸುಮಾರು 100 ರೈತರು ಭಾಗವಹಿಸಿದ್ದರು.