ಶುರುವಾಗದ ಸಂಸ್ಕರಣಾ ಘಟಕ
ಕ.ಪ್ರ. ವಾರ್ತೆ ಟಿ ಮೈಸೂರು ಟಿ ಜೂ.29
ಇದು ಸಹ ಮೈಸೂರು ನಗರದ ಹಳೆಕೆಸರೆಯ ಮುಖ್ಯರಸ್ತೆಯ ಬಳಿ ನಿರ್ಮಿಸಿರುವ ಶೂನ್ಯಕಸ ನಿರ್ವಹಣಾ ಘಟಕ. ಮಹಾನಗರ ಪಾಲಿಕೆಯು ನರ್ಮ್ ಯೋಜನೆಯಡಿ ಸುಮಾರು 35 ಲಕ್ಷ ವೆಚ್ಚ ಮಾಡಿ ಕಟ್ಟಡ ಮತ್ತಿತರ ಯೋಜನೆ ರೂಪಿಸಿದೆ. ಆದರೆ ಇನ್ನೂ ಈ ಘಟಕ ಕಾರ್ಯಾರಂಭ ಮಾಡಿಲ್ಲ ಎಂಬುದು ಆಶ್ಚರ್ಯದ ಸಂಗತಿ.
ಸ್ಯೂಯೇಜ್ ಫಾರಂನಲ್ಲಿ ನಿರ್ಮಿಸಿರುವ ಎಕ್ಸೆಲ್ ಪ್ಲಾಂಟ್ಗೆ ಮೈಸೂರಿನ ಎಲ್ಲಾ ಬಡಾವಣೆಗಳ ಕಸವನ್ನು ರವಾನಿಸಲಾಗುತ್ತಿತ್ತು. ಇದರಿಂದಾಗಿ ಆ ಭಾಗದ ಜನರ ಪ್ರತಿರೋಧ ವ್ಯಕ್ತವಾದ ಕಾರಣ, ಆಯಾಯ ವಾರ್ಡ್ನ ತ್ಯಾಜ್ಯವನ್ನು ಅದೇ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಹಾಗೂ ಸಂಸ್ಕರಿಸುವ ಸಲುವಾಗಿ ವಲಯಗಳ ವ್ಯಾಪ್ತಿಯಲ್ಲಿ ಶೂನ್ಯಕಸ ನಿರ್ವಹಣಾ ಘಟಕ ಸ್ಥಾಪಿಸಲಾಯಿತು. ಘಟಕದ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದಿದ್ದರೂ ಇನ್ನೂ ಇದು ಕಾರ್ಯಾರಂಭ ಮಾಡಿಲ್ಲ. ಸ್ವಸಹಾಯ ಗುಂಪುಗಳು ಅಥವಾ ಸ್ವಯಂಸೇವಾ ಸಂಸ್ಥೆಗಳು ಮುಂದೆ ಬಂದರೆ ಅಂಥವರಿಗೆ ಗುತ್ತಿಗೆ ಆಧಾರ ಮೇಲೆ ಇದನ್ನು ನಿರ್ವಹಿಸಲು ವಹಿಸುವ ಯೋಜನೆಯನ್ನು ಪಾಲಿಕೆ ಹಮ್ಮಿಕೊಂಡಿದೆ.
ಸಾವಯವ ಗೊಬ್ಬರ
ವಲಯ 9ರ ವ್ಯಾಪ್ತಿಗೆ ಸೇರಿರುವ ಈ ಪ್ರದೇಶದಲ್ಲಿ ಕೊಳೆಗೇರಿಗಳು ಸೇರಿದಂತೆ ವಸತಿ ಪ್ರದೇಶವು ಹೆಚ್ಚಾಗಿದ್ದು, ಸುಮಾರು 50- 60 ಟನ್ ಕಸ ದಿನಕ್ಕೆ ಲಭ್ಯವಾಗಲಿದೆ. ಇದನ್ನು ಸಂಗ್ರಹಿಸಿ ವಿಂಗಡಿಸಿದರೆ ಈ ಕೇಂದ್ರದಿಂದ ಪ್ರತಿದಿನ 5 ರಿಂದ10 ಟನ್ ಗೊಬ್ಬರ ತಯಾರಿಸಬಹುದು. ಇದರಿಂದ ರೈತರು ಕೃಷಿ ಕಾರ್ಯಕ್ಕೆ ಹಾಗೂ ನಗರದ ಕೈತೋಟಗಳಿಗೂ ಸುಲಭ ದರದಲ್ಲಿ ಗೊಬ್ಬರ ದೊರೆಯಲಿದೆ. ಇದು ಕಸ ಸಂಸ್ಕರಣೆಗೆ ಸೂಕ್ತ ತಾಣವೇನೋ ಸರಿ. ಆದರೆ ಗೊಬ್ಬರ ತಯಾರಿಕೆಗೆ ಅಗತ್ಯವಾದ ನೀರು ಹಾಗೂ ವಿದ್ಯುತ್ ವ್ಯವಸ್ಥೆ ಅಗತ್ಯವಿದೆ. ಶೆಡ್ ಮತ್ತು ಕಟ್ಟಡದ ಸೌಲಭ್ಯಗಳನ್ನು ಒದಗಿಸಲಾಗಿದೆ. ಘಟಕ ಕಾರ್ಯಾರಂಭ ಮಾಡದ ಕಾರಣ, ಕಟ್ಟಡ ಹಾಗೂ ಆವರಣದ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಕೊಂಪೆಯಂತಾಗಿದೆ. ಅಲ್ಲದೆ ಅಲ್ಲಲ್ಲಿ ಕಸದ ರಾಶಿ ತಾಂಡವವಾಡುತ್ತಿದೆ. ಇದನ್ನೆಲ್ಲಾ ಸರಿಪಡಿಸಿ ಕೂಡಲೇ ಘಟಕ ಆರಂಭಿಸಬೇಕಿದೆ.
ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ವಾರ್ಡ್ 55- ಕಲ್ಯಾಣಗಿರಿ, 56- ಯರಗನಹಳ್ಳಿ, 57- ವಿದ್ಯಾನಗರ, 58- ರಾಘವೇಂದ್ರನಗರ, 59- ಗೌಸಿಯಾನಗರ, 60- ಕೆ.ಎನ್. ಪುರ, 61- ಕ್ಯಾತಮಾರನಹಳ್ಳಿ, 62- ಗಾಯತ್ರಿಪುರಂ, 63- ಸಿದ್ಧಾರ್ಥನಗರ ಹಾಗೂ 65 ಇಟ್ಟಿಗೆಗೂಡು- ಈ ಹತ್ತು ಪ್ರದೇಶಗಳು ಸೇರಿವೆ. ಸುಮಾರು 2 ಲಕ್ಷಕ್ಕೂ ಅಧಿಕ ಜನಸಂಖ್ಯೆ, 60 ಸಾವಿರಕ್ಕೂ ಅಧಿಕ ಮನೆಗಳು ಹಾಗೂ 3 ಸಾವಿರಕ್ಕೂ ಹೆಚ್ಚಿನ ಉದ್ದಿಮೆಗಳಿವೆ. ಈ ಭಾಗದಲ್ಲಿ ಸಂಗ್ರಹವಾಗುವ ಕಸವನ್ನು ಇಲ್ಲಿನ ಘಟಕದಲ್ಲಿ ಸಂಸ್ಕರಿಸುವ ಯೋಜನೆ ರೂಪಿಸಲಾಗಿದ ್ದೂ, ಇದರ ಜತೆಗೆ ಸುಮಾರು 4 ಟನ್ ಸಾಮರ್ಥ್ಯದ ಬಯೋಗ್ಯಾಸ್ ಕೇಂದ್ರ ಆರಂಭಿಸುವ ಯೋಜನೆಯನ್ನು ನಗರ ಪಾಲಿಕೆ ರೂಪಿಸಿದೆ. ಇದರ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಒಟ್ಟಾರೆ ಈ ಘಟಕ ಪ್ರಾರಂಭವಾದರೆ ಕಸವನ್ನು ಸಮರ್ಪಕವಾಗಿ ನಿರ್ವಹಿಸಲು ಹಾಗೂ ಅದರಿಂದ ಸಾವಯವ ಗೊಬ್ಬರ ಮತ್ತು ಜೈವಿಕ ಅನಿಲ ತಯಾರಿಸಲು ಅನುಕೂಲವಾಗಲಿದೆ.
ಮೈಸೂರು ರಕ್ಷಣಾ ವೇದಿಕೆ ಶ್ಲಾಘನೆ
'ಕನ್ನಡಪ್ರಭ'ದಲ್ಲಿ ಮೈಸೂರು ಕಸಬ್ ಸರಣಿ ಮಾಲಿಕೆಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿನ ಶೂನ್ಯಕಸ ನಿರ್ವಹಣಾ ಘಟಕಗಳ ಸಮಸ್ಯೆಗಳನ್ನು ಬಿಂಬಿಸಿರುವುದನ್ನು ಮೈಸೂರು ರಕ್ಷಣಾ ವೇದಿಕೆ ಶ್ಲಾಘಿಸಿದೆ. ಜೂ.25 ರಂದು ಪತ್ರಿಕೆಯಲ್ಲಿ ಪ್ರಕಟವಾದ ಕಸಾಸುರನ ಸಂಹಾರ ವರದಿಗೆ ಸ್ಪಂದಿಸಿ ಮೇಯರ್ ಹಾಗೂ ಆಯುಕ್ತರು, ಕುಂಬಾರಕೊಪ್ಪಲಿನ ಶೂನ್ಯ ನಿರ್ವಹಣ ಘಟಕಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟಕದ ಹಿಂದೆ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡರ ಪರಿಶ್ರಮವಿದೆ ಎಂದು ವೇದಿಕೆ ಉಪಾಧ್ಯಕ್ಷ ಕುಮಾರ್ಗೌಡ ತಿಳಿಸಿದ್ದಾರೆ. ಮಾದರಿ ವಾರ್ಡ್ ಎನಿಸಿಕೊಂಡಿರುವ ಈ ಘಟಕವು ಇತರೆ ವಾರ್ಡ್ಗಳಿಗೆ ಅನುಕರಣೀಯ. ಆದರೆ ಇದು ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳ ಕಣ್ಣು ಕೆಂಪಾಗಿಸಿದೆ. ಅಸಹಕಾರ ತೋರಿಸುವ ಜನಪ್ರತಿನಿಧಿಗಳ ಕ್ರಮ ಖಂಡನೀಯ. ಇಂತಹ ಘಟಕಗಳ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಹೇಳಿದ್ದಾರೆ.