ಅಂತಾರಾಜ್ಯ ಡಕಾಯಿತರ ಬಂಧನ
ಕ.ಪ್ರ. ವಾರ್ತೆ, ಮೈಸೂರು, ಜೂ.30
ವಿವಿಧ ಡಕಾಯಿತಿ ಕೃತ್ಯದಲ್ಲಿ ತೊಡಗಿದ್ದ ಐದು ಮಂದಿ ಅಂತಾರಾಜ್ಯ ಡಕಾಯಿತರನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿ, ಒಟ್ಟು 17 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ನಿವಾಸಿಗಳಾದ ಬಾದ್ಶಾ (36), ಶ್ರೀನಿವಾಸ (28), ನಾಗರಾಜ್ (35), ಹುಣಸೂರು ತಾಲೂಕು ವಿನೋಬಾ ಕಾಲೋನಿಯ ಲಕ್ಷ್ಮಯ್ಯ (23) ಮತ್ತು ಬಿಳಿಕೆರೆ ಬಳಿಯ ಹಳೇಪುರ ಗ್ರಾಮದ ಕೆಂಡಮ್ಮ ಅ. ಕೆಂಡಿ ಬಂಧಿತ ಆರೋಪಿಗಳು.
ಈ ಐದು ಮಂದಿ ಟಿ.ನರಸೀಪುರ ಪಟ್ಟಣದಲ್ಲಿ ಅನುಮಾನಸ್ಪದವಾಗಿ ಕಾರಿನಲ್ಲಿ ತಿರುಗಾಡುತ್ತಿದ್ದಾಗ ಜೂ.23 ರಂದು ಪೊಲೀಸರು ಬಂಧಿಸಿ, ಕಾರು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಆರೋಪಿಗಳನ್ನು ಟಿ. ನರಸೀಪುರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಬಂಧಿತ ಆರೋಪಿಗಳು ಜನವರಿಯಲ್ಲಿ ಮೂಗೂರು ಗ್ರಾಮದಲ್ಲಿ ತ್ರಿಪುರ ಸುಂದ್ರಮ್ಮಣಿ ಜಾತ್ರೆಯಲ್ಲಿ ಮಹಿಳೆಯೊಬ್ಬರ 25 ಗ್ರಾಂ. ಚಿನ್ನದ ಸರ ಅಪಹರಿಸಿದ್ದರು. ಮೈಸೂರಿನ ರಾಜ್ಯ ಮುಕ್ತ ವಿವಿ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬರನ್ನು ವಂಚಿಸಿ, 50 ಗ್ರಾಂ. ಚಿನ್ನದ ಸರ ಎಗರಿಸಿದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಎಸ್ಪಿ ಅಭಿನವ್ ಖರೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
12 ಕೆ.ಜಿ. ಚಿನ್ನ ಎಗರಿಸಿದ್ದ ಭೂಪರು: 2013ರ ಆಗಸ್ಟ್ನಲ್ಲಿ ತಮಿಳುನಾಡಿನ ಶ್ರೀಪೆರಂಬದೂರು ಠಾಣೆ ವ್ಯಾಪ್ತಿಯ ಗುವಾಹಟಿ- ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲ್ಲರ್ ಮೂಲಕ ಸಿಕ್ವೆಲ್ ಲಾಜೆಸ್ಟಿಕ್ ಕಂಪನಿ ವತಿಯಿಂದ ಸಾಗಿಸುತ್ತಿದ್ದ 3.50 ಕೋಟಿ ಮೌಲ್ಯದ 12 ಕೆ.ಜಿ. ಚಿನ್ನಾಭರಣವನ್ನು ವಾಹನ ಸಮೇತ ಕಳವು ಆಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳನ್ನು ತಮಿಳುನಾಡು ಪೊಲೀಸರು ಬಂಧಿಸಿ, ಹತ್ತೂವರೆ ಕೆ.ಜಿ. ಚಿನ್ನಾಭರಣ ವಶಪಡಿಸಿಕೂಂಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ನಾಗರಾಜ್ ಮೂಲತಃ ಹುಣಸೂರು ತಾಲೂಕು ಮಾದಳ್ಳಿಕೊಪ್ಪಲು ನಿವಾಸಿ. ಈತ ಕಳೆದ 10 ತಿಂಗಳಿಂದ ತಲೆಮರೆಸಿಕೊಂಡಿದ್ದು, ಈಗ ಸಿಕ್ಕಿಬಿದ್ದಿದ್ದಾನೆ ಎಂದರು.
ಈ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ನಾಗರಾಜ್ನನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆತ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನ ಹೊಸೂರು, ಕುಶಾಲನಗರ, ಹುಣಸೂರಿನ ಗದ್ದಿಗೆಯಲ್ಲಿ ಇರಿಸಿದ್ದ ಒಟ್ಟು 540 ಗ್ರಾಂ. ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸಿದ್ದ ಕಾರು ಮತ್ತು ಬೈಕ್ ಸೇರಿದಂತೆ ಒಟ್ಟು 17 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಈ ಡಕಾಯಿತ ತಂಡವು ಒಂದು ಕಡೆ ಇರುತ್ತಿರಲಿಲ್ಲ. ಪದೇ ಪದೇ ಸ್ಥಳ ಬದಲಾಯಿಸುತ್ತಿತ್ತು. ಇವರ ಚಲನವಲನಗಳ ಮೇಲೆ ನಿಗಾ ಇರಿಸಿ, ಈಗ ಬಂಧಿಸಲಾಗಿದೆ. ಆರೋಪಿ ನಾಗರಾಜ್ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕುಶಾಲನಗರದಲ್ಲಿ ಬಾಡಿಗೆ ಮನೆ ಪಡೆದಿದ್ದ. ಅಲ್ಲಿರಿಸಿದ್ದ ಚಿನ್ನಾಭರಣವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಎಸ್ಪಿ ಪ್ರದೀಪ್ಕುಮಾರ್, ನಂಜನಗೂಡು ಉಪ ವಿಭಾಗದ ಹೆಚ್ಚುವರಿ ಎಸ್ಪಿ ಡಾ.ಎ.ರಾಜಾ ಅವರ ಮಾರ್ಗದರ್ಶನದಲ್ಲಿ ಟಿ.ನರಸೀಪುರ ಸರ್ಕಲ್ ಇನ್ಸ್ಪೆಕ್ಟರ್ ಎಂ.ಮಹೇಶ್ಕುಮಾರ್, ಪಿರಿಯಾಪಟ್ಟಣ ಸಿಪಿಐ ಪ್ರಸನ್ನಕುಮಾರ್, ಡಿಸಿಐಬಿ ಇನ್ಸ್ಪೆಕ್ಟರ್ ಗೋಪಾಲಕೃಷ್ಣ, ಟಿ.ನರಸೀಪುರ ಠಾಣೆ ಎಸ್ಐ ವಿ.ಎಸ್. ಶಶಿಕುಮಾರ್, ಎಎಸ್ಐ ತಿರುಮಲೇಶ್, ಬನ್ನೂರು ಠಾಣೆ ಎಸ್ಐ ಸಂತೋಷ್ ಕಶ್ಯಪ್, ಮಹಿಳಾ ಎಸ್ಐ ಜೈಕಾಂತಮಣಿ ಮತ್ತು ಸಿಬ್ಬಂದಿ ಮಂಜನಾಥ್, ಗೌರಿಶಂಕರ್, ಪಾಂಡು, ಶಾಂತಲಿಂಗಯ್ಯ, ನಂಜೇಗೌಡ, ಶ್ರೀನಿವಾಸ, ಪ್ರಭಾಕರ, ಜವರೇಶ, ದಿವಾಕರ, ಜೈಕುಮಾರ್, ಎ.ಪಿ. ಮಂಜು, ಲೀಲಾವತಿ, ಸುನಿತಾ, ಸುರೇಸ್ರಾವ್, ಶಿವಪ್ಪನಾಯಕ, ಸುನಿಲ್, ಶಾಂತಕುಮಾರ್, ಮಹದೇವ, ವಸಂತಕುಮಾರ್, ರೇಖಾ ಅವರು ಈ ಪತ್ತೆ ಮಾಡಿದ್ದಾರೆ.
ಅಕ್ರಮ ಮರಳು ನಿಯಂತ್ರಣಕ್ಕೆ ತಂಡ
ಮೈಸೂರು: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ಅಭಿನವ್ ಖರೆ ಹೇಳಿದರು. ಅಕ್ರಮ ಮರಳು ಸಾಗಾಣಿಕೆ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ವಿಶೇಷ ಪೊಲೀಸ್ ತಂಡ ರಚಿಸಿರುವುದು ಕಾರಣ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಳೆಗಾಲದಲ್ಲಿ ಅಕ್ರಮ ಮರಳುಗಾರಿಕೆ ಕಡಿಮೆ. ತುಂಬಾ ದಿನಗಳಿಂದ ಮರಳು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಹೀಗಾಗಿ ಅಕ್ರಮ ಮರಳು ಸಾಗಾಣಿಕೆಗೆ ಅವಕಾಶ ಆಗುತ್ತಿಲ್ಲ. ಅಕ್ರಮವಾಗಿ ಮರಳು ಸಂಗ್ರಹಿಸುವುದು ಸಹ ಅಪರಾಧ. ಅಕ್ರಮವಾಗಿ ಮರಳು ಸಂಗ್ರಹಿಸಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಅಕ್ರಮ ಮರಳು ಸಾಗಾಣಿಕೆ ಹಾಗೂ ಸಂಗ್ರಹಣೆ ಮಾಡಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ನೇರವಾಗಿ ಪೊಲೀಸರಿಗೆ ನೀಡಬಹುದು. ಸಾರ್ವಜನಿಕರ ಮಾಹಿತಿ ಪರಿಶೀಲಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.