ಆಹಾರ ಉದ್ಯಮ ಮನೆಯಿಂದಲೇ ಪ್ರಾರಂಭವಾಗಲಿ: ಅಜಿತ್ಕುಮಾರ್
ನಂಜನಗೂಡು: ಆಹಾರ ಉದ್ಯಮ ಪ್ರಾರಂಭಿಸಲು ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಹಾಗೂ ನಿರ್ವಹಣೆ ಸಂಸ್ಥೆಯು (ನಿಫ್ಟೆಮ್) ಮಾಹಿತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಕೌಶಲ ತರಬೇತಿ ನೀಡುವುದಾಗಿ ನಿಫ್ಟೆಮ್ ಕುಲಪತಿ ಡಾ.ಅಜಿತ್ಕುಮಾರ್ ಉದ್ಯಮಿಗಳಿಗೆ ಭರವಸೆ ನೀಡಿದರು.
ಸುತ್ತೂರಿನ ಜೆಎಸ್ಎಸ್ ಶಾಲೆಯ ಬಾಲಕರ ವಸತಿ ನಿಲಯದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ರಾಷ್ಟ್ರೀಯ ಸಂಸ್ಥೆ (ನಿಮ್ಸ್ಮಿ, ಹೈದರಾಬಾದ್) ಹಾಗೂ ನಿಫ್ಟೆಮ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಉದ್ಯಮ ಸ್ಥಾಪನೆಗಿರುವ ಅವಕಾಶಗಳ ಕುರಿತು ಮಾಹಿತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕೇವಲ 500 ಗಳಿಂದ ಪ್ರಾರಂಭವಾದ ಲಿಜ್ಜತ್ ಹಪ್ಪಳ ತಯಾರಿಕೆ ಉದ್ಯಮವು ವಾರ್ಷಿಕ 5 ಸಾವಿರ ಕೋಟಿ ಉದ್ಯಮವಾಗಿ ಬೆಳೆದುನಿಂತ ಉದಾಹರಣೆ ನೀಡಿದರು.
ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ)ನ ಮುಖ್ಯ ವಿಜ್ಞಾನಿ ಡಾ.ಪಿ.ವಿ ಸಾಲಿಮಠ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಗುಣಮ್ಟಟದ ಆಹಾರ ಒದಗಿಸಲು ಬೆಳೆದ ಆಹಾರ ಧಾನ್ಯಗಳನ್ನು ಸಂಸ್ಕರಿಸುವುದು ಅತಿ ಮುಖ್ಯವಾಗಿದೆಯೆಂದು ತಿಳಿಸಿದರು.
ಸ್ವಾವಲಂಬಿಗಳಾಗಿ: ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಅರುಣ್ ಬಳಮಟ್ಟಿ ಮಾತನಾಡಿ, ದೇಶದ 122 ಕೋಟಿ ಜನರಿಗೆ ಆಹಾರ ಉತ್ಪಾದನೆ ಆಗುತ್ತಲಿದೆ. ಆದರೆ ರೈತರು ಬೆಳೆದ ಆಹಾರದಲ್ಲಿ ಸುಮಾರು ಶೇ.30ರಷ್ಟು ಆಹಾರ ಪೋಲಾಗುತ್ತಿದೆ. ಆಹಾರ ಸಂಸ್ಕರಣೆ ಬಗ್ಗೆ ಈ ದಿನ ವಿಜ್ಞಾನಿಗಳು ಮಾಹಿತಿ ನೀಡಲಿದ್ದು, ರೈತರು, ಅದರಲ್ಲೂ ರೈತ ಮಹಿಳೆಯರು, ಆಹಾರ ಸಂಸ್ಕರಣೆಯಲ್ಲಿ ಉದ್ಯಮಿಗಳಾಗಿ ತೊಡಗಿಕೊಳ್ಳುವುದರೊಂದಿಗೆ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.
ನಿಫ್ಟೆಮ್ ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಡಾ.ಅನಿರುದ್ಧ್ ಸಿಂಗ್ ಮಾತನಾಡಿದರು. ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಆಹಾರ ಮೌಲ್ಯವರ್ಧನೆ, ಉಪ ಉತ್ಪನ್ನಗಳ ಬಳಕೆ, ಶೇಖರಣೆ ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯುವುದು ಮುಂತಾದ ವಿಷಯಗಳ ಬಗ್ಗೆ ಮೈಸೂರಿನ ಸಿಎಫ್ಟಿಆರ್ಐ ಸಂಸ್ಥೆ ವಿಜ್ಞಾನಿಗಳು ಹಾಗೂ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಶ್ರಾಂತ ಗೃಹ ವಿಜ್ಞಾನಿ ಎನ್. ಜಮುನಾ ಅರಸ್ ಮಾಹಿತಿ ನೀಡಿದರು.
ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹಾಗೂ ನಗರಗಳಿಂದ 300ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು, ಉದ್ಯಮಿಗಳು, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್.ಗ್ಲೋರಿ ಸ್ವರೂಪ ಸ್ವಾಗತಿಸಿದರು. ಎನ್. ಜಮುನಾ ಅರಸ್ ವಂದಿಸಿದರು ಹಾಗೂ ನೇತ್ರಾವತಿ ಎಂ. ಎತ್ತಿನಮನಿ ನಿರೂಪಿಸಿದರು.