ಕಬಿನಿ ಜಲಾಶಯದಿಂದ ನೀರು ಬಿಡುಗಡೆ: ಪ್ರತಿಭಟಿಸಿದ ರೈತರ ಬಂಧನ- ಬಿಡುಗಡೆ
ಮೈಸೂರು: ತಮಿಳುನಾಡಿಗೆ ಕಬಿನಿ ಜಲಾಶಯದಿಂದ ನೀರು ಹರಿಸಿರುವ ಸರ್ಕಾರದ ಕ್ರಮ ಖಂಡಿಸಿ ಕಬಿನಿ ರೈತ ಹಿತರಕ್ಷಣಾ ಸಮಿತಿಯವರು ಕಾಡಾ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.
ಬೆಳಗ್ಗೆಯಿಂದ ಕಾಡಾ ಕಟ್ಟಡದಲ್ಲಿರುವ ನೀರಾವರಿ ಇಲಾಖೆಯ ಕಚೇರಿ ಎದುರು ಪ್ರತಿಭಟಿಸಿದ ರೈತರು, ಮಧ್ಯಾಹ್ನದ ವೇಳೆಗೆ ಬೀಗ ಹಾಕಲು ಪ್ರಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು 50 ಮಂದಿ ರೈತರನ್ನು ಬಂಧಿಸಿ, ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋಗಿ, ಬಳಿಕ ಬಿಡುಗಡೆಗೊಳಿಸಿದರು.
ಇದಕ್ಕೂ ಮುನ್ನ ಕಾಡಾ ಕಚೇರಿಯೊಳಗೆ ನುಗ್ಗಲು ಪ್ರಯತ್ನಿಸಿದ ರೈತರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ. ಕವಿತಾ ಮತ್ತು ಇತರೆ ಅಧಿಕಾರಿಗಳು ಮಧ್ಯಪ್ರವೇಶಿಸಿ, ರೈತರನ್ನು ಸಮಾಧಾನಪಡಿಸಿದರು.
ಕಬಿನಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡರಾದ ಅತ್ತಹಳ್ಳಿ ದೇವರಾಜ್, ಕಿರಗೊಸೂರು ಶಂಕರ್, ಬನ್ನೂರು ನಾರಾಯಣ್, ಕುರುಬೂರು ಸಿದ್ದೇಶ್, ಕುಮಾರ್, ಮರಿಸ್ವಾಮಿ, ರಂಗಸ್ವಾಮಿ, ಪ್ರಸಾದ್, ಪುರುಷೋತ್ತಮ್ ಇದ್ದರು.