ಕಬ್ಬಿಗೆ ಸೂಕ್ತ ಬೆಲೆ ನೀಡಲು ಆಗ್ರಹ
ಭೇರ್ಯ: ಉಪ ಉತ್ಪನ್ನಗಳನ್ನೂ ಪರಿಗಣಿಸಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಿದರೆ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕಿದೆ ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸುನಯ್ಗೌಡ ಹೇಳಿದರು.
ಸಮೀಪದ ಮಿರ್ಲೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ್ದ ಕಬ್ಬಿನ ಸುಸ್ಥಿರ ಬೇಸಾಯ ಪದ್ಧತಿಯಲ್ಲಿ ಅಧಿಕ ಇಳುವರಿ ಮಾರ್ಗೋಪಾಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಸಕ್ಕರೆ ಇಳುವರಿ ಮಾತ್ರ ಪರಿಗಣಿಸಿ ಬೆಲೆ ನಿಗದಿ ಮಾಡಿದರೆ ರೈತರಿಗೆ ನಷ್ಟ ಕಟ್ಟಿಟ್ಟ ಬುತ್ತಿ. ಸಕ್ಕರೆ ಕಾಯಿದೆ ಪ್ರಕಾರ ಶೇ.60ರಷ್ಟು ಲಾಭ ರೈತನಿಗೆ ಸಿಗಬೇಕು ಎಂದ ಅವರು, ಸಕಾಲದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ಸಿಗದ ಕಾರಣ ರೈತರು ಸರಿಯಾದ ಸಮಯಕ್ಕೆ ಕಬ್ಬು ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಇಳುವರಿ ಕೂಡ ಕುಂಠಿತಗೊಳ್ಳಲು ಕಾರಣ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಿ.ಅಶೋಕ್ ಮಾತನಾಡಿ, ಕಬ್ಬು ಸೇರಿದಂತೆ ಯಾವುದೇ ಬೆಳೆಯಲ್ಲಾದರೂ ಅಧಿಕ ಇಳುವರಿಗಾಗಿ ಸಾಂಪ್ರದಾಯಿಕ ಕೃಷಿ ಪದ್ಧತಿ ಕೈಬಿಟ್ಟು ಆಧುನಿಕ ಪದ್ಧತಿಗೆ ರೈತರು ಹೊಂದಿಕೊಳ್ಳಬೇಕಿದೆ, ಕೃಷಿ ಕ್ಷೇತ್ರದಲ್ಲಿ ತಾಂತ್ರಿಕತೆ ಅತಿಮುಖ್ಯ, ವೈಜ್ಞಾನಿಕ ಬೆಳೆಯಿಂದ ಅಧಿಕ ಫಸಲು ನಿರೀಕ್ಷೆ ಮಾಡಬಹುದು ಎಂದು ರೈತರಿಗೆ ಸಲಹೆ ನೀಡಿದರು.
ಕೃಷಿ ಪದವೀಧರ ಚಂದನ್ಕುಮಾರ್ ಸುಸ್ಥಿರ ಕಬ್ಬಿನ ಬೇಸಾಯದ ಆಧುನಿಕ ತಳಿಗಳು ಮತ್ತು ರೋಗಬಾಧೆಯ ಕುರಿತು ಮಾಹಿತಿ ನೀಡಿದರು. ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಜಿ.ಎಂ. ಹೇಮಂತ್, ಪ್ರಗತಿಪರ ರೈತ ಸುನಿಲ್, ಸಂಸ್ಥೆಯ ಹೈನುಗಾರಿಕಾ ಅಧಿಕಾರಿ ಚಂದ್ರಪ್ಪ, ಗ್ರಾಪಂ ಸದಸ್ಯ ತುಕರಾಂ, ಮುಖಂಡ ಧನಂಜಯ, ವಲಯ ಮೇಲ್ವಿಚಾರಕಿ ಪಾರ್ವತಿ, ಸೇವಾ ಪ್ರತಿನಿಧಿ ನೇತ್ರಾವತಿ ಕುಮಾರ್, ಚಂದ್ರಶೇಖರ್ ಇದ್ದರು.