ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹಿಳೆಯರ ಮೇಲೆ ನಿಲ್ಲದ ದೌರ್ಜನ್ಯ

Mainashree
Updated On : 30 Jun 2014, 11:01 am

ಪಿರಿಯಾಪಟ್ಟಣ: ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಅಸ್ಪೃಶ್ಯತೆ ನಡೆಯುತ್ತಿದ್ದರೂ ಇದನ್ನು ತೊಡೆದು ಹಾಕುವಲ್ಲಿ ವಿಫಲವಾಗಿದ್ದೇವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ವಿಷಾದಿಸಿದರು.
ಪಟ್ಟಣದ ಎಸ್‌ಎಲ್‌ವಿ ಸಮುದಾಯ ಭವನದಲ್ಲಿ ಮೈಸೂರು ವಿವಿಯ ಡಾ.ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಡಾ.ಬಾಬು ಜಗಜೀವನರಾಂ ಅಧ್ಯಯನ ಕೇಂದ್ರದ ದಶಮಾನೋತ್ಸವ ವರ್ಷದ ನಿಮಿತ್ತ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಂ ಅವರ ಚಿಂತನೆಗಳು ಮತ್ತು ಮಹಿಳಾ ಸಬಲೀಕರಣ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಅವರು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಅಂದೇ ಪಣ ತೊಟ್ಟಿದ್ದರು. 12ನೇ ಶತಮಾನದಲ್ಲಿ ಬಸವಣ್ಣನವರು, ಕನಕದಾಸರು ಎಲ್ಲ ಜನಾಂಗದವರನ್ನು ಮುಖ್ಯವಾಹಿನಿಗೆ ತರಬೇಕೆಂದು ಬಯಸಿ ಅನೇಕ ಸುಧಾರಣಾ ಕ್ರಮಗಳನ್ನು ಅನುಸರಿಸಿ ಹೋರಾಟ ನಡೆಸಿದ್ದರು. ಅಂತಹ ಮಹನೀಯರನ್ನು ಯಾರೂ ಮರೆಯುವಂತದಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಭ್ರೂಣಹತ್ಯೆ ಮುಂತಾದ ಪ್ರಕರಣಗಳು ನಡೆಯುತ್ತಿದೆ ಎಂದು ತಿಳಿಸಿದರು.
ಮೈಸೂರು ವಿವಿ ನೇತಾಜಿ ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್ ಮಾತನಾಡಿ, ಕಳೆದ 60 ವರ್ಷಗಳ ಇತಿಹಾಸದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರು ಬಂದಿರುವ ಉದಾಹರಣೆಗಳಿಲ್ಲ. ಮಹಿಳೆಯರಿಗೆ ಎಷ್ಟು ನೋವು, ನಲಿವು ಇದ್ದರೂ ಅದನ್ನು ಹೊರಗೆಡವದೆ ಪಾಲಿಸಿಕೊಂಡು ಹೋಗುತ್ತಿದ್ದಾರೆ. ಇದು ಮಹಿಳೆಯರಿಗೆ ಇರುವ ದೈವಿಶಕ್ತಿ, ಇತ್ತೀಚೆಗೆ ಬೆಳಗಾವಿಯ ಮಠವೊಂದರ ಸ್ವಾಮೀಜಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿರುವುದು ನಾಚಿಕೆಗೇಡಿನ ಸಂಗತಿ. ಇವರಿಗೆ ಮಹಿಳಾ ಆಯೋಗದಿಂದಲೂ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಪ್ರೊ.ಮೈಲಹಳ್ಳಿ ರೇವಣ್ಣ, ಪ್ರಾಧ್ಯಾಪಕರಾದ ಡಾ.ತಿಪ್ಪೇಸ್ವಾಮಿ, ಎನ್.ಕೆ.ಲೋಲಾಕ್ಷಿ, ಸಿಡಿಪಿಒ ದೇವಕುಮಾರ್, ಎಸಿಡಿಪಿಒ ಇಂದಿರಾ, ಅಂಗನವಾಡಿ ಕಾರ್ಯಕರ್ತೆಯರ ತಾಲೂಕು ಅಧ್ಯಕ್ಷೆ ಕೆ.ಪಿ. ಕಾವೇರಮ್ಮ, ಮುಖಂಡರಾದ ಹರೀಶ್, ತಮ್ಮಣ್ಣೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement