ರಾಜಮಾರ್ಗ ಸ್ವಚ್ಛತೆಗೆ ಪೌರಕಾರ್ಮಿಕರಿಲ್ಲ
ಮಾ. ವೆಂಕಟೇಶ್
ಮೈಸೂರು: ಪ್ರಸಿದ್ಧ ಮೈಸೂರು ಅರಮನೆಯ ಸುತ್ತ ನಗರಪಾಲಿಕೆಯು ನರ್ಮ್ ಯೋಜನೆಯಡಿ ರಾಜಮಾರ್ಗವನ್ನು ನಿರ್ಮಿಸುತ್ತಿದೆ. ಪ್ರತಿದಿನ ವಿದೇಶಿಯರು ಸೇರಿದಂತೆ ಸಾವಿರಾರು ಮಂದಿ ಈ ಪಥದಲ್ಲಿ ಸಂಚರಿಸುವುದುಂಟು. ಆದರೆ ಇದರ ಸ್ವಚ್ಛತೆಗೆ ಪಾಲಿಕೆಯು ಗಮನ ಹರಿಸುತ್ತಿಲ್ಲ. ಅರಮನೆಯ ಸುತ್ತ ಸುಮಾರು 3 ಕಿ.ಮೀ. ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ಕೆ ಕಡಿಮೆ ಎಂದರೂ ಪ್ರತಿದಿನ 15 ಮಂದಿ ಪೌರಕಾರ್ಮಿಕರ ಅಗತ್ಯವಿದೆ. ಆದರೆ ನಗರದ ಹೃದಯ ಭಾಗದ ತಾಜ್ಯ ನಿರ್ವಹಣೆಗೆ ಪಾಲಿಕೆ ಅಧಿಕಾರಿಗಳು ಹೆಚ್ಚಿನ ಗಮನ ಕೊಡದಿರುವುದು ದೇಶದ ಎರಡನೇ ಸ್ಪಚ್ಛ ನಗರವೆಂದು ಖ್ಯಾತಿ ಗಳಿಸಿರುವ ಸಾಂಸ್ಕೃತಿಕ ನಗರಿಗೆ ಖಂಡಿತ ಶೋಭೆ ತರದು.
ಅಗ್ರಹಾರ ಹೆಸರಿನ ಈ ವಾರ್ಡ್ಗೆ ಕೆ.ಆರ್. ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಹಾರ್ಡಿಂಜ್ ವೃತ್ತ, ಬಿ.ಎನ್. ರಸ್ತೆ, ಎಂ.ಜಿ ರಸ್ತೆ, ಮಾಧವ ರಾವ್ ವೃತ್ತ, ನಾಲಾ ಬೀದಿ, ಚಾಮರಾಜ ಜೋಡಿ ರಸ್ತೆ, ಚೆಲುವಾಂಬ ಅಗ್ರಹಾರ ಮುಖ್ಯರಸ್ತೆ, ರಮಾವಿಲಾಸ ರಸ್ತೆ, ಸ್ಯಯಾಜಿರಾವ್ ರಸ್ತೆ ಒಳಗೊಂಡಿದ್ದು, ವಸತಿ ಪ್ರದೇಶದ ಜೊತೆಗೆ ಹೆಚ್ಚಿನ ವಾಣಿಜ್ಯ ಕೇಂದ್ರಗಳು ಸಹ ಇದರ ವ್ಯಾಪ್ತಿಗೆ ಸೇರಿದೆ. ಆದ್ದರಿಂದ ಇಲ್ಲಿ ತ್ಯಾಜ್ಯ ಸಂಗ್ರಹ ಸ್ವಲ್ಪ ಅಧಿಕ ಎನ್ನಬಹುದು. ಸುಮಾರು 15 ಸಾವಿರಕ್ಕೂ ಅಧಿಕ ಜನಸಂಖ್ಯೆ, 3 ಸಾವಿರಕ್ಕೂ ಅಧಿಕ ಮನೆಗಳು, 400 ಕ್ಕೂ ಅಧಿಕ ಉದ್ದಮಿಗಳು ಇಲ್ಲಿವೆ.
ಈ ವಾರ್ಡ್ನ ಸ್ವಚ್ಛತೆಗೆ 41 ಮಂದಿ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಅವರಲ್ಲಿ 3 ಮಂದಿ ನಿಧನರಾಗಿದ್ದಾರೆ. 3 ಮಂದಿ ನಿವೃತ್ತರಾಗಿದ್ದಾರೆ. ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿರುವಂತೆ ಪೌರಬಂಧುಗಳ ಸಂಖ್ಯೆಯೂ ಹೆಚ್ಚು ಮಾಡಬೇಕು. ಆದರೆ ಹತ್ತಾರು ವರ್ಷಗಳಿಂದ ಕಾಯಂ ಪೌರಕಾರ್ಮಿಕರ ನೇಮಕಾತಿ ನಡೆಯದೆ ಇರುವುದರಿಂದ ಗುತ್ತಿಗೆ ಕಾರ್ಮಿಕರನ್ನು ಅವಲಿಂಭಿಸುವ ಸನ್ನಿವೇಶ ಎದುರಾಗಿದೆ.
ಸಮರ್ಪಕವಾಗಿತ್ತು
ನಿರ್ಮಲನಗರ ಯೋಜನೆಯಡಿ ಈ ಮೊದಲು ಮನೆ ಮನೆ ಕಸವನ್ನು ಸಂಗ್ರಹಿಸುವ ಕೆಲಸವನ್ನು ಸ್ಥಳೀಯ ಮಹಿಳಾ ಸಂಘಗಳಿಗೆ ವಹಿಸಲಾಗಿತ್ತು. ಇದರಿಂದ ಪ್ರತಿದಿನ ತಪ್ಪದೆ ಕಸವನ್ನು ಸಂಗ್ರಹಿಸುವ ಕೆಲಸ ಸಮರ್ಪಕವಾಗಿ ಮಾಡುತ್ತಿದ್ದರು. ಆನಂತರ ಆ ಯೋಜನೆ ಬದಲಾಯಿಸಿದ ನಗರ ಪಾಲಿಕೆಯು ಕಸ ಸಂಗ್ರಹದ ಕಾರ್ಯವನ್ನು ಗುತ್ತಿಗೆದಾರರಿಗೆ ವಹಿಸಿದ ಕಾರಣ, ಅವರು ನಿಯಮಿತವಾಗಿ ಕಸ ಸಂಗ್ರಹಿಸುವ ಕೆಲಸ ನಡೆಸುತ್ತಿಲ್ಲ. ಇದರಿಂದಾಗಿ ಅಲ್ಲಿನ ರಸ್ತೆ ಬದಿಯಲ್ಲಿ ಕಸದ ರಾಶಿಯು ತಾಂಡವವಾಡುತ್ತಿದೆ. ಕಸ ಸಂಗ್ರಹಿಸುವ ಆಟೋ ಟಿಪ್ಪರ್ಗಳು ಪ್ರತಿದಿನ ಬಡಾವನಣೆಗೆ ನಿಯಮಿತವಾಗಿ ಬರಬೇಕು. ಆದರೆ ಕೆಲವೊಮ್ಮೆ ಬರವುದಿಲ್ಲ. ಆಟೋ ರಿಪೇರಿ, ಗುತ್ತಿಗೆದಾರರು ಡೀಸೆಲ್ ತಂದು ಕೊಟ್ಟಿಲ್ಲ, ಸಿಬ್ಬಂದ ರಜೆ ಈ ಮುಂತಾದ ಕಾರಣ ಹೇಳುತ್ತಾರೆ ಎಂಬುದು ನಿವಾಸಿಗಳ ದೂರು.
7 ಪಾಯಿಂಟ್ ಗುರುತು
ವಿವಿಧೆಡೆ ಕಸ ಸಂಗ್ರಹಿಸಿ ತಂದು ಹಾಕುವ ಸಲುವಾಗಿ 7 ಪಾಯಿಂಟ್ಗಳನ್ನು ಗುರುತಿಸಲಾಗಿದೆ. ಆದರೆ ಇಲ್ಲಿ ಶೇಖರಣೆಯಾಗುವ ಕಸವನ್ನು ಸಮರ್ಪಕವಾಗಿ ಎತ್ತುವಳಿ ಮಾಡದ ಕಾರಣ ಅವ್ಯವಸ್ಥೆ ಹೆಚ್ಚಾಗಿದೆ. ಬುಧುವಾರ ಮತ್ತು ಭಾನುವಾರ ಒಂದು ಬಾರಿ ಹಾಗೂ ಇತರೆ ದಿನಗಳಲ್ಲಿ ಎರಡು ಬಾರಿ ಮಾತ್ರ ಕಸ ಸಾಗಿಸಲು ಲಾರಿ ಬರಲಿದೆ. ಅಲ್ಲಿಯವರಿಗೆ ತ್ಯಾಜ್ಯದ ಪಾಡು ಹೇಳತೀರದು. ಇಲ್ಲಿನ ನಾಲಾ ಬೀದಿಯಲ್ಲಿ ಕಸ ಸುರಿಯುವ ಪಾಯಿಂಟ್ ಇಲ್ಲದಿದ್ದರೂ, ಮುಖ್ಯ ರಸ್ತೆಯ ಬದಿಯಲ್ಲಿಯೇ ಕಸ ಸುರಿಯುತ್ತಿರುವುದು ಸುತ್ತ ಮುತ್ತಲಿನ ನಿವಾಸಿಗಳಿಗೆ ಮುಜುಗರ ತರಿಸಿದೆ. ಇದು ವಾರ್ಡ್ನ 1 ರ ವ್ಯಾಪ್ತಿಗೆ ಸೇರಿದ್ದರೂ, 2 ನೇ ವಾರ್ಡ್ನ ವ್ಯಾಪ್ತಿಯ ಕಸವನ್ನು ತಂದು ಹಾಕುತ್ತಿರುವುದಕ್ಕೆ ಈ ಭಾಗದ ನಿವಾಸಿಗಳ ವಿರೋಧವಿದೆ. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂಬುದು ನಾಗರಿಕರ ಆಶಯ.
ಈ ವಾರ್ಡ್ನ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಸಂಖ್ಯೆ ತೀರಾ ಕಡಿಮೆ. ರಾಜಮಾರ್ಗ ನಿರ್ಮಿಸಿರುವುದು ದೊಡ್ಡ ವಿಚಾರವಲ್ಲ. ಅದನ್ನು ಸರಿಯಾಗಿ ನಿರ್ವಹಿಸಬೇಕಾಗಿರುವುದು ಬಹುಮುಖ್ಯ. ಅರಮನೆ ಸುತ್ತ ಇರುವ 3 ಕಿ.ಮೀ ರಾಜಮಾರ್ಗದ ಸ್ವಚ್ಛತೆಗಾಗಿ ಕಳೆದ ಡಿಸೆಂಬರ್ನಲ್ಲಿಯೆ ಕೌನ್ಸಿಲ್ನಲ್ಲಿ ಚರ್ಚಿಸಲಾಯಿತು. ಆದರೂ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಮುಂದಾಗಿಲ್ಲ. ಕೋಟ್ಯಂತರ ರು. ಹಣ ವ್ಯಯವಾಗುತ್ತಿದೆ. ಆದರೆ ವೆಚ್ಚಕ್ಕೆ ತಕ್ಕಂತೆ ಕೆಲಸ ಆಗುತ್ತಿಲ್ಲ. ಈ ಭಾಗದ ಕಸ ವಿಲೇವಾರಿ ಸ್ವಲ್ಪವೂ ತೃಪ್ತಿ ತಂದಿಲ್ಲ.
ಟಿ ಬಿ.ವಿ. ಮಂಜುನಾಥ್, ಪಾಲಿಕೆ ಸದಸ್ಯರು, ವಾರ್ಡ್ 1, ಮೈಸೂರು ನಗರ ಪಾಲಿಕೆ