ಪುಸ್ತಕಂ ಹಸ್ತಭೂಷಣಂ: ಡಾ. ಅನಂತರಾಮು
ಮೈಸೂರು: ಪುಸ್ತಕ ಸಂಸ್ಕೃತಿ ಎಂದಿಗೂ ಅಳಿಸುವುದಿಲ್ಲ. ಎಲ್ಲಿಯವರೆಗೆ ಪುಸ್ತಕಂ ಹಸ್ತಭೂಷಣಂ ಎಂಬ ವಾಕ್ಯವನ್ನು ಪರಿಪಾಲಿಸುತ್ತೇವೆಯೋ ಅಲ್ಲಿಯವರೆಗೆ ಈ ಸಂಸ್ಕೃತಿ ಜೀವಂತವಾಗಿರುತ್ತದೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಹೇಳಿದರು. ಮೈಸೂರು ಗ್ರಂಥಪಾಲಕರ ಮತ್ತು ಮಾಹಿತಿ ವಿಜ್ಞಾನಿಗಳ ಸಂಘವು (ಮೈಲಿಸಾ) ಮೈಸೂರು ವಿವಿ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಪುಸ್ತಕಗಳು ಅಳಿಯುತ್ತಿವೆಯೇ ಕುರಿತ ವಿಚಾರ ಗೋಷ್ಠಿಯಲ್ಲಿ ಪುಸ್ತಕ ಸಂಸ್ಕೃತಿ ಬಗ್ಗೆ ಅವರು ಮಾತನಾಡಿದರು. ವೇದಗಳನ್ನು ಗುರುಗಳು ತಮ್ಮ ಶಿಷ್ಯರಿಗೆ ಹೇಳಿಕೊಡುತ್ತಿದ್ದರು. ಕೇಳಿಸಿಕೊಳ್ಳುವ ಮೂಲಕ ಮಸ್ತಕದಲ್ಲಿ ಶ್ಲೋಕಗಳನ್ನು ಇಟ್ಟುಕೊಳ್ಳುತ್ತಿರುವ ಪರಂಪರೆ ನಮ್ಮಲ್ಲಿ ಬೆಳೆದುಬಂದಿತು. ಪುಸ್ತಕ ಸಂಸ್ಕೃತಿ ಪೋಷಿಸಿಕೊಂಡು ಬಂದವರಲ್ಲಿ ಭಾರತೀಯರೆ ಶ್ರೇಷ್ಠರು ಎಂದು ಹೇಳಿದರು.
ಪ್ರತಿ ವಿದ್ಯಾರ್ಥಿಯೂ ಗಿಡಮರ ಬೆಳೆಸಲಿ
ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಸಸಿನೆಡುವುದಲ್ಲದೆ, ಅದಕ್ಕೆ ನೀರು ಗೊಬ್ಬರ ಹಾಕಿ ಪೋಷಿಸಬೇಕು ಎಂದು ಪಾಲಿಕೆ ಸದಸ್ಯ, ಉರಗ ತಜ್ಞ ಸ್ನೇಕ್ ಶ್ಯಾಮ್ ಹೇಳಿದರು. ನಗರದ ಗಂಗೋತ್ರಿ ವಿದ್ಯಾಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನೀರನ್ನು ಮಿತವಾಗಿ ಬಳಸಬೇಕು. ನಾವು ಇಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ದೇಶದ ಗಡಿ ಗಾಯುತ್ತಿರುವ ಸೈನಿಕರು ಮುಖ್ಯ ಕಾರಣ. ನಾವು ಇಂದು ಅನ್ನತಿನ್ನಲು ರೈತರು ಕಾರಣ. ತಂದೆ-ತಾಯಿ, ಗುರುಗಳು, ಸೈನಿಕರು ಹಾಗೂ ರೈತರನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಸಂಶೋಧನಾ ಕೇಂದ್ರದಿಂದ ರೈತರಿಗೆ ಸಲಹೆ
ಮೈಸೂರು: ರೈತರು ಕೃಷಿ ಚಟುವಟಿಕೆ ಬಗ್ಗೆ ಈ ಸಲಹೆ ಅನುರಿಸುವಂತೆ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು ಹಾಗೂ ಸಹ ಸಂಶೋಧಕ ಎನ್. ನರೇಂದ್ರಬಾಬು ಹೇಳಿದ್ದಾರೆ. ಮಾವು- ಹೂ ಬಿಡುವ ವೇಳೆ ಜಿಗಿಹುಳು ಮತ್ತು ಬೂದಿ ರೋಗಕ್ಕೆ ಮಾವಿನಲ್ಲಿ ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಚ್ಚಿದ ಕೂಡಲೇ ಜಿಗಿಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕಾಗಿ ಗಿಡಗಳಿಗೆ 1.5 ಮಿ.ಲೀ. ರೋಗರ್ ಜೊತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಿಸಿ. ಮೆಣಸಿನಕಾಯಿ- ಹೂ ಬಿಡುವ ವೇಳೆ ಎಲೆ ಮುದುಡು ರೋಗ ಕಂಡು ಬಂದಾಗ ಮೊದಲಿಗೆ ರೋಗ ಬಂದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ನಂತರ 0.6 ಮಿ.ಲೀ. ಇಮಿಡೋಕ್ಸೊಪ್ರಿಡ್ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಬತ್ತ ಬೆಳೆಯುವ ಪ್ರದೇಶದಲ್ಲಿ ಸಾಮಾನ್ಯವಾಗಿ ಸತುವಿನ ಕೊರತೆ ಬಹಳಷ್ಟು ಮಣ್ಣುಗಳಲಲ್ಲಿ ಕಂಡು ಬರುವುದರಿಂದ ಸತುವಿನ ಸಲ್ಫೇಟನ್ನು ಬತ್ತದ ಬೇಸಾಯದಲ್ಲಿ ಉಪಯೋಗಿಸುವುದು ಸೂಕ್ತ.