ಮೈಸೂರು ವಿವಿ ವಿರುದ್ಧ ಸರ್ಕಾರಕ್ಕೆ ದೂರು
ಮೈಸೂರು: ಮೈಸೂರು ವಿವಿ ಬಹದ್ಧೂರ್ ನಿರ್ವಹಣಾ ವಿಜ್ಞಾನ ಸಂಸ್ಥೆ ವಿಭಾಗದ ಪ್ರಾಧ್ಯಾಪಕ ಬಿ. ಶಿವರಾಜ್ ವಿರುದ್ಧ ಆರೋಪ ಸಾಬೀತಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಮೈಸೂರು ವಿವಿ ವಿರುದ್ಧ ಆರ್.ಎನ್. ಸತ್ಯನಾರಾಯಣ್ ಎಂಬುವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಶಿವರಾಜ್ ಸರ್ಕಾರದ ಗಮನಕ್ಕೆ ತರದೆ ಸಿಸ್ತಾನ್ ಮತ್ತು ಬಲೂಚಿಸ್ತಾನ್ ವಿವಿಯೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆ ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ ಸೂಕ್ತ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ದಾಖಲೆ ಸಹಿತ 13.10.2012 ರಂದು ತಮಗೆ ದೂರು ನೀಡಿದ್ದೆ. ಅದನ್ನು ಆಧರಿಸಿ ತಾವು ಮೈಸೂರು ವಿವಿಗೆ ಸೂಚನೆ ನೀಡಿದ್ದೀರಿ. ಆದರೆ, ಈವರೆಗೆ ವಿವಿ ಆಡಳಿತ ಮಂಡಳಿ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದೆ. ನಾನು ದೂರು ನೀಡಿ 16 ತಿಂಗಳು ಕಳೆದಿದ್ದು, ಡಿಒ ಪತ್ರದಂತೆ ಮೈಸೂರು ವಿವಿ ಕುಲಸಚಿವರು ಆಮೆ ವೇಗದಲ್ಲಿ ವಿಚಾರಣೆ ನಡೆಸುತ್ತಿದ್ದಾರೆಂದು ಪತ್ರದಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ದಿಸೆಯಲ್ಲೇ ನೆರವಿನ ಔದಾರ್ಯ ಬೆಳೆಸಿಕೊಳ್ಳಿ
ಮೈಸೂರು: ವಿದ್ಯಾರ್ಥಿ ದಿಸೆಯಲ್ಲಿಯೇ ನೆರವಿನ ಔದಾರ್ಯ ಬೆಳೆಸಿಕೊಳ್ಳವುದು ಅವಶ್ಯಕ ಎಂದು ಮೈಸೂರು ಕೋ ಆಪರೇಟಿವ್ ಬ್ಯಾಂಕ್ನ ಉಪಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಎಂ. ಮಂಜು ಹೇಳಿದರು.ವೆಂಕಟಗಿರಿ ಪ್ರಕಾಶನ ಹಾಗೂ ಹಿರಣ್ಮಯಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಮಾತೃ ಮಂಡಳಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಕೋ ಆಪರೇಟಿವ್ ಬ್ಯಾಕ್ ವತಿಯಿಂದ ನೀಡಿರುವ ವ್ಯಾಕರಣ ಛಂದಸ್ಸು ಪುಸ್ತಕಗಳ ವಿತರಣೆ ಹಾಗೂ ರಸಪ್ರಶ್ನೆ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಮತ್ತೊಬ್ಬರು ಕಷ್ಟದಲ್ಲಿರುವಾಗ ಅವರ ಬಗ್ಗೆ ಕನಿಕರ ತೋರಿಸುವ ಮನೋಭಾವ ಅವಶ್ಯಕ. ಅಲ್ಲದೆ ತಮ್ಮ ಕೈಲಾದ ಸಹಾಯ ಮಾಡುವಂಥ ಗುಣ ವಿದ್ಯಾರ್ಥಿಗಳು ಈಗಿನಿಂದಲೇ ಬೆಳೆಸಿಕೊಳ್ಳಬೇಕು. ತಾವು ಶಿಕ್ಷಣ ಪಡೆದು ಉತ್ತಮ ಹುದ್ದೆಗಳನ್ನು ಹೊಂದಿದಾಗ ಅಥವಾ ಉತ್ತಮ ಜೀವನ ಹೊಂದಿದಾಗ, ತನ್ನೊಂದಿಗೆ ಕಲಿತು ಅಸಹಾಯಕ ಸ್ಥಿತಿಯಲ್ಲಿರುವ ಸ್ನೇಹಿತರಿಗೆ ನೆರವಾಗುವ ಔದಾರ್ಯ ತೋರಿಸಬೇಕು ಎಂದು ತಿಳಿಸಿದರು.