ಸರ್ಕಾರಿ ನೌಕರರು ಎಲ್ಲರನ್ನು ಸಮನಾಗಿ ಕಾಣಬೇಕು
ಟಿ. ನರಸೀಪುರ: ಕಾರ್ಯಾಂಗದ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಕಾರ್ಯನಿರ್ವಹಿಸುವಾಗ ಹುದ್ದೆಯ ಅಂತರವನ್ನು ಕಾಯ್ದುಕೊಳ್ಳಬಾರದು ಎಂದು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ನಿರ್ಗಮಿತ ಖಜಾನಾಧಿಕಾರಿ ಎನ್.ಬಿ. ರಾಜಶೇಖರ್ ಹೇಳಿದರು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾರೇ ಆಗಲಿ ಹುಟ್ಟುವಾಗ ಇಂತಹದ್ದೆ ಜಾತಿಯಲ್ಲಿ ಹುಟ್ಟುತ್ತೇವೆ ಅಂತಾಗಲಿ ಅಥವಾ ಉನ್ನತ ಹುದ್ಧೆಗೆ ಸೇರುತ್ತೇವೆ ಎಂದಾಗಲಿ ಅರ್ಜಿ ಸಲ್ಲಿಸಿ ಬರಲು ಸಾಧ್ಯವಿಲ್ಲವಾದ್ದರಿಂದ, ಎಲ್ಲ ಸರ್ಕಾರಿ ನೌಕರರನ್ನು ಸಮಾನತೆ ಭಾವನೆಯಿಂದ ಕಾಣಬೇಕು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿವೃತ್ತಿ ಹೊಂದಿದ್ದ ಉಪ ಖಜಾನಾಧಿಕಾರಿ ಎನ್.ಬಿ. ರಾಜಶೇಖರ್ ಹಾಗೂ ಬಿಇಒ ಕಚೇರಿ ಅಧೀಕ್ಷಕ ಶಿವಶಂಕರ್ ಅವರನ್ನು ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿ, ಆತ್ಮೀಯತೆಯ ಬೀಳ್ಕೊಡುಗೆ ನೀಡಿದರು.
'ಸರ್ಕಾರದ ಯೋಜನೆ ಅರ್ಹರಿಗೆ ತಲುಪಲಿ'
ಪಿರಿಯಾಪಟ್ಟಣ: ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಯೋಜನೆ ಹಮ್ಮಿಕೊಂಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು. ಪಟ್ಟಣದ ತಾಪಂ ಆವರಣದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಶಾದಿಭಾಗ್ಯ ಯೋಜನೆಯ ಫಲಾನುಭವಿ ಬೈಲಕುಪ್ಪೆ ಗ್ರಾಮದ ನಜೀರ್ ಅವರ ಪುತ್ರಿ ಶಬಿನಾ ಅವರಿಗೆ ಯೋಜನೆಯ 50 ಸಾವಿರದ ಚೆಕ್ ವಿತರಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಶಾದಿಭಾಗ್ಯ ಯೋಜನೆಯೂ ಕೂಡ ಒಂದಾಗಿದೆ. ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಅರ್ಹರಿಗೆ ಪ್ರಾಮಾಣಿಕವಾಗಿ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು. ತಾಪಂ ಸದಸ್ಯ ಆರ್.ಸಿ. ಚಂದ್ರು, ರವಿಮಾನು ಇದ್ದರು.
ಜಯಲಲಿತಾ 66ನೇಜನ್ಮದಿನಾಚರಣೆ
ಮೈಸೂರು: ಎಐಎಡಿಎಂಕೆ ಅಲ್ಪಸಂಖ್ಯಾತ ವಿಭಾಗದ ಎನ್.ಆರ್. ಕ್ಷೇತ್ರದ ಕಾರ್ಯದರ್ಶಿ ಕಲೀಲ್ ಉರ್ ರೆಹಮಾನ್ ಷರೀಫ್ ನೇತೃತ್ವದಲ್ಲಿ ಶಾಂತಿನಗರದ ಆರ್.ಕೆ. ಟಿಪ್ಪು ಫಂಕ್ಷನ್ಹಾಲ್ನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ 66ನೇ ಹುಟ್ಟುಹಬ್ಬ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ರಾಜ್ಯ ಕಾರ್ಯದರ್ಶಿ ಪುಗಳೇಂದಿ ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಲ್.ಎನ್. ರಾಮಕಣ್ಣನ್, ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ವಿ.ಎಂ. ಶಹಜಾನ್, ಪ್ರಧಾನ ಅಧ್ಯಕ್ಷ ಕೆ. ಶಿವಾನಂದಂ, ಚಾಮುಂಡೇಶ್ವರಿ ಕ್ಷೇತ್ರದ ಎಸ್.ಡಿ. ಮೂರ್ತಿ, ಕೆ.ಆರ್. ಕ್ಷೇತ್ರದ ಕಾರ್ಯದರ್ಶಿ ಹೇಮಂತ್ ಕುಮಾರ್, ಜಂಟಿ ಕಾರ್ಯದರ್ಶಿ ನಾಗರಾಜ್ ಮುಂತಾದವರು ಭಾಗವಹಿಸಿದ್ದರು.