ಹರಿದಾಸ ಸಾಹಿತ್ಯ ಸಂಗೀತ ನೃತ್ಯ ವೈಭವ
ಮೈಸೂರು: ಹರಿದಾಸರ ಸಾಹಿತ್ಯ ಮತ್ತು ಸಂಗೀತದ ಸಮಾಗಮ ನೃತ್ಯ ವೈಭವ ವಿಶೇಷ ಕಾರ್ಯಕ್ರಮವು ಜಗನ್ಮೋಹನ ಅರಮನೆಯಲ್ಲಿ ಶನಿವಾರ ನಡೆಯಿತು. ನೃತ್ಯಾಲಯ ಟ್ರಸ್ಟ್ ಪ್ರದರ್ಶಕ ಕಲೆಗಳ ಅಕಾಡೆಮಿ ಏರ್ಪಡಿಸಿದ್ದ ಈ ಕಾರ್ಯಕ್ರಮ ನೃತ್ಯಾಲಯ ತಂಡದವರ ಹರಿದಾಸರ ಭಜನೆಯಿಂದ ಆರಂಭವಾಯಿತು.
ನಂತರ ರಾಜ್ಯ ಪ್ರಶಸ್ತಿ ಪುರಸ್ಕೃತೆ ವಿದುಷಿ ಎಂ.ಕೆ. ಸರಸ್ವತಿ ಅವರು ಹರಿದಾಸರ ರಚನೆಗಳ ಕುರಿತು ವೀಣಾ ವಾದನ ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ವಿದ್ವಾನ್ ರಾಧೇಶ್ ಮೃದಂಗ ನುಡಿಸಿದರು. ನೃತ್ಯಾಲಯದ ಕಿರಿಯ ವಿದ್ಯಾರ್ಥಿನಿಯರು ನರ್ತಾನಾಂಕುರ ಎಂಬ ವಿನೂತನ ರೂಪಕ ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದಲ್ಲಿ ಹೆಸರಾಂತ ಮಧುಮೇಹ ತಜ್ಞ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಿ. ಲಕ್ಷ್ಮೀನಾರಾಯಣ ಹಾಗೂ ವಿದುಷಿ ಪಂಕಜಾ ರಾಮಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು. ಲಲಿತಕಲಾ ಕಾಲೇಜಿನ ಸಂಗೀತ ಪ್ರಾಧ್ಯಾಪಕ ಡಾ.ಸಿ.ಎ. ಶ್ರೀಧರ್ ಮುಖ್ಯ ಅತಿಥಿಯಾಗಿದ್ದರು. ಗಾನಭಾರತಿ ಅಧ್ಯಕ್ಷ ಡಾ.ಸಿ.ಜಿ. ನರಸಿಂಹನ್ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು: ಕೇಂದ್ರ ಸರ್ಕಾರ ಅರ್ಜುನ ಪ್ರಶಸ್ತಿ, ಧ್ಯಾನ್ಚಂದ್ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ, ಜೀವನ ಪರ್ಯಂತ ಸಾಧನೆ ಮಾಡಿದ ಹಾಗೂ ಅತ್ಯುತ್ತಮ ಸಾಧನೆ ಮಾಡಿದ ಅರ್ಹ ಕ್ರೀಡಾಪಟುಗಳು ಮತ್ತು ತರಬೇತುದಾರರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಮತ್ತು ವಿವರಕ್ಕೆ ಇಲಾಖೆ ವೆಬ್ಸೈಟ್ ಢಿಢಿಢಿ.ಣಛಡ.ಟ್ಝ್ಛಿ.್ಝಟಿ ನಲ್ಲಿ ಪಡೆಯಬಹುದು. ಆಸಕ್ತರು ಮಾ. 15 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್ಬಾದ್, ಮೈಸೂರು ಇವರನ್ನು ಖುದ್ದಾಗಿ ಅಥವಾ ದೂ. 2564179 ಸಂಪರ್ಕಿಸಬಹುದು.
ಸಫಾಯಿ ಕರ್ಮಚಾರಿ ವೇದಿಕೆಗೆ ನೇಮಕ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ವೇದಿಕೆಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಗೌರವಾಧ್ಯಕ್ಷರಾಗಿ ಸಿ. ನರೇಂದ್ರ, ಅಧ್ಯಕ್ಷರಾಗಿ ಎಚ್.ಎಸ್. ಸುರೇಶ್ಕುಮಾರ್, ಉಪಾಧ್ಯಕ್ಷರಾಗಿ ಎಸ್. ಮಣಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಆರ್. ರಾಚಯ್ಯ, ಖಜಾಂಚಿಯಾಗಿ ಎನ್. ಅರುಣ್ಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಎ. ಮುರುಗನ್, ಸಹ ಕಾರ್ಯದರ್ಶಿ ವಿ. ಮುರಳಿ, ನಿರ್ದೇಶಕರಾಗಿ ಕಿಶೋರ್, ಸಿ.ಆರ್. ಮಹದೇವ, ಎಸ್.ಪಿ. ಪುಷ್ಪರಾಜ್, ಸೋಮಶೇಖರ್ ನೇಮಕವಾಗಿದ್ದಾರೆ ಎಂದು ಸುರೇಶ್ಕುಮಾರ್ ತಿಳಿಸಿದ್ದಾರೆ. ಕರ್ಮಚಾರಿಗಳಿಗೆ 50 ಸಾವಿರ ರು.ನಿಂದ 1 ಲಕ್ಷ ಸಾಲಕ್ಕೆ ಎರಡು ಕಂತುಗಳು ಎಂಬ ನಿಯಮವನ್ನು ಅನುಸರಿಸಲಾಗುತ್ತಿದ್ದು, ಈ ನಿಯಮವನ್ನು ರದ್ದುಪಡಿಸಿ, ಹಿಂದೆ ನೀಡುತ್ತಿದ್ದ ಸಾಲದ ನಿಯಮದಂತೆ ಸಾಲ ವಿತರಿಸುವುದು ಇನ್ನಿತರ ಬೇಡಿಕೆಈಡೇರಿಸುವಂತೆ ಕೋರಿದ್ದಾರೆ.
ಬಸ್ ನಿಲ್ಲಿಸದ್ದಕ್ಕೆ ಹಲ್ಲೆ: ಬಂಧನ
ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯನ್ನು ಜಯಪುರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮೈಸೂರು ತಾಲೂಕು ಚಿಂತರಾಯನಹುಂಡಿ ನಿವಾಸಿ ಮಲ್ಲಿಕಾರ್ಜುನಸ್ವಾಮಿ ಅ. ಗಜೇಂದ್ರ (45) ಬಂಧಿತ ಆರೋಪಿ. ಈತನು ಹಾರೋಹಳ್ಳಿಯಿಂದ ಮೈಸೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಅನ್ನು ಚಿಂತಕಾನಯಹುಂಡಿ ಬಳಿ ಗುರುವಾರ ತಡೆದಿದ್ದಾನೆ. ಆದರೆ, ಚಾಲಕ ಬಸ್ ನಿಲ್ಲಿಸದೇ ಮುಂದೆ ಬಂದಿದ್ದ. ಇದರಿಂದ ಕುಪಿತಗೊಂಡ ಆತ, ಬೈಕಿನಲ್ಲಿ ಬಸ್ಸನ್ನು ಹಿಂಬಾಲಿಸಿಕೊಂಡು ಬಂದು ಅಡ್ಡ ಹಾಕಿದ್ದಾನೆ. ಬಳಿಕ ಹಲ್ಲೆ ನಡೆಸಿದ್ದಾನೆ. ನಿರ್ವಾಹಕ ರೇವಣ್ಣೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಎಸ್ಐ ಎಸ್. ಗಂಗಾಧರ್ ಮತ್ತು ಸಿಬ್ಬಂದಿ, ಆರೋಪಿ ಮಲ್ಲಿಕಾರ್ಜುನಸ್ವಾಮಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮನೆಯಲ್ಲಿ ಕಳವು
24 ಸಾವಿರ ರು. ಮೌಲ್ಯದ ವಸ್ತುಗಳು ಕಳವಾಗಿರುವ ಘಟನೆ ನಗರದ ರಾಮಸ್ವಾಮಿ ವೃತ್ತ ಜೆಎಲ್ಬಿ ರಸ್ತೆಯಲ್ಲಿ (ದತ್ತಾ ಆಡ್ಸ್ ಆವರಣ) ಶನಿವಾರ ಬೆಳಗಿನ ಜಾವ ನಡೆದಿದೆ. ಬಸವರಾಜ್ ಎಂಬವರ ಪುತ್ರ ಹಾಗೂ ಛಾಯಾಗ್ರಾಹಕ ಉಮೇಶ್ ಈ ಮನೆಯಲ್ಲಿ ವಾಸವಾಗಿದ್ದರು. ಮನೆಯ ಹೆಂಚು ತೆಗೆದು ಒಳ ನುಗ್ಗಿ ಆಸ್ತಿ ದಾಖಲೆ, 7000 ರು., ಕ್ಯಾಮರಾ, 3 ವಾಚ್ ಸೇರಿದಂತೆ 24 ಸಾವಿರ ರು. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಉಮೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಉಮೇಶ್ ಮತ್ತು ಸಂಬಂಧಿಕರ ನಡುವೆ ಆಸ್ತಿ ವಿವಾದವಿತ್ತು. ಈ ಹಿನ್ನೆಲೆಯಲ್ಲಿ ಕಳವು ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಲಕ್ಷ್ಮಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಡಿಸಿಪಿ ಎಂ.ಎಂ. ಮಹದೇವಯ್ಯ, ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ. ಕವಿತಾ, ಲಕ್ಷ್ಮಿಪುರಂ ಠಾಣೆ ಇನ್ಸ್ಪೆಕ್ಟರ್ ಪಿ.ಎಂ. ಸಿದ್ದರಾಜು, ಎಸ್ಐ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.