ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ಎಂಕೆಎಸ್
ಮೈಸೂರು: ಮಹಿಳೆಯರು ಧಾರವಾಹಿಗಳನ್ನು ನೋಡುವುದನ್ನು ಕಡಿಮೆ ಮಾಡಿ, ಮಕ್ಕಳ ಶಿಕ್ಷಣ ಹಾಗೂ ಜ್ಞಾನ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಎಂ.ಕೆ. ಸೋಮಶೇಖರ್ ಸಲಹೆ ನೀಡಿದರು.
ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಗ್ರಹಾರ ವಲಯದ ಪ್ರಗತಿ ಸ್ವಸಹಾಯ ಸಂಘದ ಒಕ್ಕೂಟಗಳನ್ನು ಉದ್ಘಾಟಿಸಿ ಮಾತನಾಡಿ, ಧಾರಾವಾಹಿ ಬದಲು ವಾರ್ತೆ ಕೇಳಬೇಕು. ಸಂಘಟನಾ ಚರ್ಚೆಗಳ ಮೂಲಕ ಮಹಿಳೆಯರು ಜ್ಞಾನ ವೃದ್ಧಿಸಿಕೊಂಡು ಸ್ವಾವಲಂಬಿಗಳಾಗಬಹುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೌಲಭ್ಯ ಹಾಗೂ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಸಂಪನ್ಮೂಲ ವ್ಯಕ್ತಿಗಳಾಗಬೇಕು. ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಬೇಕು ಎಂದರು.
ಶ್ರಮದಿಂದ ಜೀವನವನ್ನು ರೂಪಿಸಿಕೊಳ್ಳಬಹುದೇ ಹೊರತು ಜ್ಯೋತಿಷ್ಯದಿಂದ ಸಾಧ್ಯವಿಲ್ಲ. ಹೀಗಾಗಿ ಮೂಢನಂಬಿಕೆಯಿಂದ ದೂರವಿರಬೇಕು. ಮಹಿಳೆಯರಿಗೂ ಸಮಾನ ಶಿಕ್ಷಣ ನೀಡಬೇಕು. ಗುಣಮಟ್ಟದ ಶಿಕ್ಷಣದಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಸಾಧ್ಯ ಎಂದರು.
ನಗರಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಅಧಿಕಾರಿ ಚೇತನಾ, ದೇವಣ್ಣ, ಪರಶಿವಮೂರ್ತಿ ಇದ್ದರು.