ಜೆಡಿಎಸ್, 'ಕೈ'ಗೆ ತಲಾ ಒಂದು ಸ್ಥಾನ
ಕೆ.ಆರ್. ನಗರ: ಇಲ್ಲಿನ ಪುರಸಭೆಯ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನದಲ್ಲಿ ಜಯಗಳಿಸಿದ್ದು, ಹಿಂದೆ ತಮ್ಮ ತೆಕ್ಕೆಯಲ್ಲಿದ್ದ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
18ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಜ್ಮತ್ ಉಲ್ಲಾಖಾನ್ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‌ನ ಎಂ. ಸಿರಾಜ್ ಅವರನ್ನು 419 ಮತಗಳ ಭಾರಿ ಅಂತರದಿಂದ ಸೋಲಿಸಿದ್ದು, ಕಾಂಗ್ರೆಸ್‌ಗೆ 557 ಮತಗಳು ಬಂದಿದ್ದು, ಜೆಡಿಎಸ್ ಕೇವಲ 138 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದೆ. ಬಾರಿ ಅಬ್ಬರದಿಂದ ವಾರ್ಡ್‌ನಲ್ಲಿ ಪ್ರಚಾರ ನಡೆಸಿದ್ದ ಎಸ್‌ಡಿಪಿಐ ಅಭ್ಯರ್ಥಿ ಇಮ್ರಾನ್‌ಖಾನ್ 87 ಮತಗಳಿಸಿ ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
15ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ಟಿ.ಆರ್. ಪ್ರಕಾಶ್ 269 ಮತಗಳನ್ನು ಪಡೆದು ಗೆಲವಿನ ನಗೆ ಬೀರಿದರೆ, 231 ಮತ ಪಡೆದ ಬಿಜೆಪಿಯ ಎನ್.ರವಿ ಮತ್ತು 223 ಮತಗಳನ್ನು ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಮಹೇಶ್ ಸೋಲು ಅನುಭವಿಸಿದ್ದಾರೆ. ಪಕ್ಷೇತರರಾಗಿ ಕಣದಲ್ಲಿದ್ದ ವೃಷಬೇಷ (29 ಮತ) ಹಾಗೂ ಸಣ್ಣಲಿಂಗಪ್ಪ (24 ಮತ) ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದ್ದಾರೆ.
ಬೆಳಗ್ಗೆ 8ಕ್ಕೆ ಇಲ್ಲಿನ ಮಿನಿ ವಿಧಾನಸೌದದಲ್ಲಿ ಮತ ಎಣಿಕೆ ಆರಂಭಿಸಿ ಕೇವಲ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಸಿಪಿಐ ಸಿದ್ದಯ್ಯ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾರ್ಯಕರ್ತರ ವಿಜಯೋತ್ಸವ: ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ವಿಜೇತ ಅಭ್ಯರ್ಥಿಗಳನ್ನು ಹೊತ್ತು ಬಣ್ಣ ಎರಚಿಕೊಂಡು ವಿಜಯೋತ್ಸವ ಆಚರಿಸಿ ಮುಖಂಡರೊಂದಿಗೆ ಸಂಭ್ರಮಿಸಿದರು.
ಕಾಂಗ್ರೆಸ್ ಮುಖಂಡರಾದ ಡಾ. ಮೆಹಬೂಬ್ ಖಾನ್, ಕೆ.ಪಿ. ಪ್ರಭುಶಂಕರ್, ಸೈಯದ್ ಜಾಬೀರ್, ಸೈಯದ್ ಅಸ್ಲಾಂ, ನಗರ ಜೆಡಿಎಸ್ ಅಧ್ಯಕ್ಷ ಡಿ.ಸಿ. ಮಂಜುನಾಥ್, ಪುರಸಭಾ ಸದಸ್ಯರಾದ ಉಮೇಶ್, ಕುಮಾರ್, ಜಗದೀಶ್, ಮಾಜಿ ಸದಸ್ಯ ಗಿರೀಶ್, ಮುಖಂಡ ಸಂತೋಷ್‌ಗೌಡ, ಹರ್ಷಕುಮಾರಗೌಡ ಇದ್ದರು.
ಹೊಸಕೋಟೆ ಗ್ರಾಪಂ: ತಾಲೂಕಿನ ಹೊಸಕೋಟೆ ಗ್ರಾಪಂ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ರತ್ನಮ್ಮ 497 ಮತ ಪಡೆದು, 275 ಮತ ಪಡೆದ ತಮ್ಮ ಪ್ರತಿಸ್ಪರ್ಧಿ ಆರ್.ಎಸ್. ಕುಮಾರಿ ಅವರನ್ನು 222 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.
14ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಕೆ.ಆರ್. ನಗರದ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮಾ.14ರಂದು ಶುಕ್ರವಾರ ಚುನಾವಣೆ ನಡೆಯಲಿದೆ. ಈ ಸಂಬಂಧ ಈಗಾಗಲೇ ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ನಿರ್ಧರಿಸಿ ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ಪುರಸಭಾ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಪ. ವರ್ಗದ ಮಹಿಳೆಗೆ ಮೀಸಲಾಗಿದ್ದು, ಆ ವರ್ಗಕ್ಕೆ ಸೇರಿದ ಒಬ್ಬರೆ ಮಹಿಳೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದು, ಒಂದನೇ ವಾರ್ಡ್‌ನ ಸದಸ್ಯೆ ಪಾರ್ವತಿ ನಾಗರಾಜು ಅವಿರೋಧವಾಗಿ ಆಯ್ಕೆಯಾಗಲಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿರುವುದರಿಂದ ಚುನಾವಣೆ ನಡೆದರೂ ಬಹುಮತವಿರುವ ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನ ದಕ್ಕಲಿದೆ.