'ದೇಶದ ವೈವಿಧ್ಯತೆ ಸಂಶೋಧನೆಗೆ ಸವಾಲು'
ಮೈಸೂರು: ಭಾರತದ ವೈವಿಧ್ಯಮಯ ಸ್ವರೂಪದಿಂದಾಗಿ ಇಲ್ಲಿ ಸಂಶೋಧನೆ ಕೈಗೊಳ್ಳುವುದು ಒಂದು ಸವಾಲಿನ ಕೆಲಸ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಸಿ.ಕೆ. ಮಹೇಶ್ವರಪ್ಪ ಹೇಳಿದರು.
ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿವಿ ಸಂಖ್ಯಾಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೆ ಸಂಶೋಧನೆ ಸಮಾಜಕ್ಕೆ ಉಪಯುಕ್ತವಾದ ಮೌಲ್ಯಗಳನ್ನು ಹೊಂದಿರಬೇಕು. ತಪ್ಪಿದರೆ ಆ ಸಂಶೋಧನೆ ಕೇವಲ ಒಂದು ಶೈಕ್ಷಣಿಕ ಪ್ರಕ್ರಿಯೆಯಾಗಿ ಉಳಿಯುತ್ತದೆ. ದೇಶವು ಪಾಶ್ಚಿಮಾತ್ಯ ಸಂಶೋಧನಾ ಮಾದರಿಗಳ ಮೇಲೆ ಅವಲಂಬಿತವಾಗದೆ ತನ್ನದೇ ಆದ ಸಂಶೋಧನಾ ನಿಯತಾಂಕಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ವಿ. ಪ್ರಭಾಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶೋಧನಾತ್ಮಕ ಗುಣವನ್ನು ವಿದ್ಯಾರ್ಥಿಗಳಲ್ಲಿ ಶಾಲಾ ಮಟ್ಟದಲ್ಲೆ ಬೆಳೆಸಬೇಕು. ಈ ನಿಟ್ಟಿನಲ್ಲಿ ಕಾಲೇಜಿನ ಸಂಶೋಧನಾ ಘಟಕ ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದರು.
ಮಂಗಳೂರಿನ ಎಐಎಂಐಟಿ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಸುಮಿತ ಆಚಾರ್ ಅವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮೈಸೂರು ವಿವಿ ಸಂಖ್ಯಾಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ್ಥಡಾ.ಬಿ.ಎಸ್. ಬಿರಾದರ್ ಕಾರ್ಯಾಗಾರ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಸಂಶೋಧನಾ ಘಟಕದ ಸಂಚಾಲಕ ಡಾ. ಶಂಕರ್ ಪಿ. ಹೊಸಮನಿ ಸ್ವಾಗತಿಸಿದರು. ಜೀವರಸಾಯನಶಾಸ್ತ್ರ ವಿಭಾಗದ ಎಸ್.ಆರ್. ಅನಿತ ವಂದಿಸಿದರು. 245 ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಇದ್ದರು.