ಸ್ವಉದ್ಯೋಗದತ್ತ ಮುಖ ಮಾಡಲು ಕರೆ
ಮೈಸೂರು: ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಕೆಲಸವನ್ನೇ ನೆಚ್ಚಿಕೊಂಡು ಕೂರುವ ಪರಿಸ್ಥಿತಿ ಇಲ್ಲದಿರುವುದರಿಂದ ಯುವಜನತೆ ಸ್ವಉದ್ಯೋಗದತ್ತ ಮನಸ್ಸು ಮಾಡಬೇಕು ಎಂದು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಶ್ವನಾಥ್ ಕರೆ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಸಿಡಾಕ್, ಮೈಸೂರು ಜಿಲ್ಲಾ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಒಂದು ವಾರದ ಉದ್ಯಮಶೀಲ ಪ್ರೇರಣಾ ಶಿಬಿರ ಹಾಗೂ ಉದ್ಯಮಶೀಲ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಉದ್ಯೋಗ ಕೊಡುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಯುವಜನರನ್ನು ಸ್ವ ಉದ್ಯೋಗದತ್ತ ಸೆಳೆಯಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಮೂಲಕ ನಿರುದ್ಯೋಗ ಸಮಸ್ಯೆ ಆದಷ್ಟು ನೀಗಲಿದೆ. ಜ್ಞಾನ ವೃದ್ಧಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರ ಜಂಟಿ ನಿರ್ದೇಶಕ ಎಂ.ಎನ್. ಮರುಳೇಶ್ ಮಾತನಾಡಿ, ಹೊಸ ಕೈಗಾರಿಕಾ ನೀತಿಯಡಿ ಉದ್ಯೋಗ ಆರಂಭಿಸುವವರಿಗೆ 25 ಲಕ್ಷ ಸಹಾಯಧನ ನೀಡಲಾಗುತ್ತದೆ. ಆಗಿಂದಾಗ್ಗೆ ಉದ್ಯಮದ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಸದುಪಯೋಗಪಡಿಸಿಕೊಳ್ಳಿ ಎಂದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸತೀಶ್, ಸಿಡಾಕ್ ಉಪ ನಿರ್ದೇಶಕ ಲೋಕೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ರಮೇಶ್, ಮೈಸೂರು ಜಿಲ್ಲಾ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘದ ಅಧ್ಯಕ್ಷ ಜಯಚಂದ್ರ ಅರಸ್, ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್, ಖಜಾಂಚಿ ಶಿವಶಂಕರ್, ಮೈಸೂರು ಪ್ರಿಂಟರ್ಸ್ ಕ್ಲಸ್ಟರ್‌ನ ಪ್ರಧಾನ ಕಾರ್ಯದರ್ಶಿ ರಮೇಶ್ ಇದ್ದರು. ಮೈಸೂರು, ಶಿವಮೊಗ್ಗ, ನಂಜನಗೂಡು, ಎಚ್.ಡಿ. ಕೋಟೆ, ಹಾವೇರಿ, ಶ್ರೀರಂಗಪಟ್ಟಣ, ಚಾಮರಾಜನಗರ ಸೇರಿದಂತೆ ರಾಜ್ಯದ ಇತರೆ ಭಾಗಗಳಿಂದ 30ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.