ಕಾರ್ಖಾನೆಗಳಲ್ಲಿ ಸುರಕ್ಷಿತ ವಾತಾವರಣ ಅಗತ್ಯ
ಕ.ಪ್ರ.ವಾರ್ತೆ , ಮೈಸೂರು , ಮಾ. 6
ಕಾರ್ಖಾನೆಗಳಲ್ಲಿ ಸುರಕ್ಷಿತ ವಾತಾವರಣ ಇರಬೇಕು. ಕಾರ್ಮಿಕರ ಹಿತದೃಷ್ಟಿಯಿಂದ ಸುರಕ್ಷಿತ ವಾತಾವರಣ ಕಲ್ಪಿಸುವುದು ಅಗತ್ಯ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು.
ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ (ಕಾರ್ಖಾನೆಗಳು, ಬಾಯ್ಲರ್ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಅಂಗಸಂಸ್ಥೆ) ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ, ನಂಜನಗೂಡು ಕೈಗಾರಿಕಾ ಸಂಘ ಸಂಯುಕ್ತವಾಗಿ ಗುರುವಾರ ಏರ್ಪಡಿಸಿದ್ದ 43ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕಾರ್ಖಾನೆಗಳಲ್ಲಿ ಅಪಘಾತಗಳಿಂದ ಕಾರ್ಮಿಕರಿಗೆ ಗಾಯ ಅಥವಾ ಸಾವು ಹಾಗೂ ವೃತ್ತಿಪರ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಗತ್ಯ ಸುರಕ್ಷತೆ ಒದಗಿಸದಿದ್ದರೆ ಶಾಶ್ವತ ಅಂಗವಿಕಲತೆ ಸಹ ಕಾಣಿಸಿಕೊಳ್ಳಬಹುದು. ಹೀಗಾಗಿ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ದೇಶದ ವಿವಿಧೆಡೆ ನಡೆದಿರುವ ದುರಂತಗಳು ಮರುಕಳಿಸದಂತೆ ಎಚ್ಚರವಹಿಸಲು ಸುರಕ್ಷಣಾ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
78 ಅತಿ ಅಪಾಯಕಾರಿ ಕಾರ್ಖಾನೆಗಳು: ಕಾರ್ಖಾನೆಗಳು, ಬಾಯ್ಲರ್ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಉಪ ನಿರ್ದೇಶಕ ಬಿ.ಎಸ್. ಶ್ರೀಧರ್ ಮಾತನಾಡಿ, ರಾಜ್ಯದಲ್ಲಿ 13,107 ನೋಂದಾಯಿತ ಕಾರ್ಖಾನೆಗಳು, 3,600 ನೋಂದಣಿಯಾದ ಬಾಯ್ಲರ್ಗಳು ಹಾಗೂ 14,84,188 ಕಾರ್ಮಿಕರು ನೋಂದಾಯಿತ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ 1113 ಅಪಾಯಕಾರಿ ಕಾರ್ಖಾನೆಗಳಿದ್ದು, ಇವುಗಳ ಪೈಕಿ 78 ಕಾರ್ಖಾನೆಗಳು ಅತಿ ಅಪಾಯಕಾರಿ ಕಾರ್ಖಾನೆಗಳಾಗಿವೆ ಎಂದರು.
ಮೈಸೂರು ವಿಭಾಗ ವ್ಯಾಪ್ತಿಯ ಮೈಸೂರು, ಕೊಡಗು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟಾರೆ 881 ನೋಂದಾಯಿತ ಕಾರ್ಖಾನೆಗಳು, 146 ಬಾಯ್ಲರ್ಗಳು ಹಾಗೂ 84,956 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ವಿಭಾಗದಲ್ಲಿ 96 ಅಪಾಯಕಾರಿ ಕಾರ್ಖಾನೆಗಳಿದ್ದು, ಇವುಗಳ ಪೈಕಿ 8 ಕಾರ್ಖಾನೆಗಳು ಅತಿ ಅಪಾಯಕಾರಿ ಆಗಿವೆ ಎಂದು ತಿಳಿಸಿದರು.
ಈ ಬಾರಿ ಕಾರ್ಯ ಕ್ಷೇತ್ರದಲ್ಲಿನ ಒತ್ತಡಗಳನ್ನು ನಿಭಾಯಿಸಿ ಅಪಾಯಗಳನ್ನು ನಿಯಂತ್ರಿಸಿ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಆಚರಿಸಲಾಗುತ್ತಿದೆ. ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಸುರಕ್ಷಿತ ಕ್ರಮದ ಕಾನೂನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಬಹುಮಾನ ವಿತರಣೆ: ಇದೇ ವೇಳೆ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುರಕ್ಷತೆ ರಸಪ್ರಶ್ನೆ ಸ್ಪರ್ಧೆ- ಬೆಮಲ್ನ ಕಿರಣ್ಕುಮಾರ್, ಉತ್ತಪ್ಪ (ಪ್ರಥಮ), ನಂಜನಗೂಡು ಐಟಿಸಿಯ ಸತೀಶ್, ಶ್ರೀಕಾಂತ್ (ದ್ವಿತೀಯ) ಹಾಗೂ ಫಾಲ್ಕನ್ ಟೈರ್ಸ್ನ ಬಾಲಕೃಷ್ಣ, ಜಾಕೋಬ್ ನಂದೀಶ್ (ತೃತೀಯ).
ಕಿರುನಾಟಕ ಸ್ಪರ್ಧೆ- ಫಾಲ್ಕನ್ ಟೈರ್ಸ್ (ಪ್ರಥಮ), ಆಟೋಮೋಟಿವ್ ಆಕ್ಸಲ್ (ದ್ವಿತೀಯ) ಮತ್ತು ಬೆಮಲ್ (ತೃತೀಯ). ಕಿರುನಾಟಕ ಸ್ಪರ್ಧೆ (ಸಾವಿರಕ್ಕಿಂತ ಕಡಿಮೆ ಕಾರ್ಮಿಕರಿರುವ ಕಾರ್ಖಾನೆಗಳ ವಿಭಾಗ)- ಎಲ್ ಅಂಡ್ ಟಿ (ಪ್ರಥಮ), ಸ್ಕ್ಯಾನ್ರೇ (ದ್ವಿತೀಯ) ಮತ್ತು ಮದ್ದೂರಿನ ಎವರಿಡೇ (ತೃತೀಯ). ಅಲ್ಲದೆ, ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದ ಕಿರಣ್ಕುಮಾರ್, ಉತ್ತಪ್ಪ ಹಾಗೂ ಜಾವೇದ್ ಪಾಷ ಅವರಿಗೂ ಬಹುಮಾನ ನೀಡಿ ಗೌರವಿಸಲಾಯಿತು.
ಇದೇ ವೇಳೆ ಕಾರ್ಮಿಕರು ಹಾಗೂ ಉದ್ಯಮಿಗಳಿಗೆ ಸುರಕ್ಷತಾ ವಾಗ್ದಾನ ಮಾಡಿಸಲಾಯಿತು. ಉದ್ಯಮಿ ಆರ್. ಗುರು ಅಧ್ಯಕ್ಷತೆ ವಹಿಸಿದ್ದರು. ಸ್ಕ್ಯಾನ್ರೇ ಎಂಡಿ ವಿಶ್ವಪ್ರಸಾದ್ ಆಳ್ವಾ, ಜೆಕೆ ಟೈರ್ಸ್ ಉಪಾಧ್ಯಕ್ಷ ಉಮೇಶ್ ಕೃಷ್ಣ ಶೆಣೈ, ಆಟೋಮೋಟಿವ್ ಆಕ್ಸೆಲ್ಸ್ ಹಿರಿಯ ಉಪಾಧ್ಯಕ್ಷ ಎನ್.ಮುತ್ತುಕುಮಾರ್, ಮೈಸೂರು ವೈದ್ಯಕೀಯ ಕಾಲೇಜು ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್. ರವೀಶ್ ಇದ್ದರು. ಎನ್ಐಪಿಎಂ ಮೈಸೂರು ವಿಭಾಗದ ಅಧ್ಯಕ್ಷ ಕೆ. ಅನಂತಗೌಡ ಸ್ವಾಗತಿಸಿದರು.
ರಾಷ್ಟ್ರೀಯ ಸುರಕ್ಷತಾ ನಡಿಗೆ
ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸುರಕ್ಷತಾ ನಡಿಗೆ ಕಾರ್ಯಕ್ರಮವನ್ನು ಕಾರ್ಖಾನೆಗಳು, ಬಾಯ್ಲರ್ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ನಿರ್ದೇಶಕ ಬಿ.ಎಸ್. ರಾಮಚಂದ್ರ ಉದ್ಘಾಟಿಸಿದರು. ಜಗನ್ಮೋಹನ ಅರಮನೆಯಿಂದ ಆರಂಭವಾದ ನಡಿಗೆಯು ಸಯ್ಯಾಜಿರಾವ್ ರಸ್ತೆ, ಸಂಸ್ಕೃತ ಪಾಠಶಾಲೆ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್ಬಿ ರಸ್ತೆ, ರೋಟರಿ ಶಾಲೆ ವೃತ್ತ, ಕೃಷ್ಣ ವಿಲಾಸ ರಸ್ತೆ ಮೂಲಕ ವಾಪಸ್ ಜಗನ್ಮೋಹನ ಅರಮನೆಗೆ ತಲುಪಿತು. ಈ ನಡಿಗೆಯಲ್ಲಿ ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಭಾಗವಹಿಸಿದ್ದರು. ಇದೇ ವೇಳೆ ಸುರಕ್ಷತಾ ಧ್ವಜಾರೋಹಣವನ್ನು ಸುಪ್ರೀಂ ಫಾರ್ಮಸುಟಿಕಲ್ಸ್ ಎಂಡಿ ಎಸ್.ಎನ್. ರಾವ್ ನೆರವೇರಿಸಿದರು. ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್, ನಂಜನಗೂಡು ಕೈಗಾರಿಕಾ ಸಂಘದ ರಾಮಪ್ರಸಾದ್ ಇದ್ದರು.