ಪೌರಕಾರ್ಮಿಕರ ಸಭೆ ರದ್ದು ಸರಿಯಲ್ಲ
ಮೈಸೂರು: ಲೋಕಸಭಾ ಚುನಾವಣಾ ದಿನಾಂಕ ಪ್ರಕಟ ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಪೌರಕಾರ್ಮಿಕರ ಸಭೆಯನ್ನು ರದ್ದುಗೊಳಿಸಲಾಯಿತು. ಇದಕ್ಕೆ ಪೌರಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿರ ಕುಂದುಕೊರತೆ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಸಭೆ 11ಕ್ಕೆ ಆರಂಭ ಆಗಬೇಕಿತ್ತು. ಆದರೆ, ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ. ಶಿಖಾ ಸಭೆಯನ್ನು ರದ್ದುಗೊಳಿಸಿದರು. ಈ ವಿಚಾರವನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಿ.ಬಿ. ಲಿಂಗಣ್ಣಯ್ಯ ಸಭೆಯಲ್ಲಿ ಪ್ರಕಟಿಸಿದರು.
ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಪೌರಕಾರ್ಮಿಕರು ಮತ್ತು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಡಾ.ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ (ಪೌರಕಾರ್ಮಿಕ) ಯುವಕರ ಅಭಿವೃದ್ಧಿ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಎಂ. ವಡಿವೇಲು, ಮೈಸೂರು ನಗರಪಾಲಿಕೆ ಪೌರಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಚಯ್ಯ, ರಾಜ್ಯ ಗ್ರಾಪಂ, ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯ ಉಪಾಧ್ಯಕ್ಷ ಆರ್. ಶಿವಣ್ಣ, ಜಿಲ್ಲಾಧ್ಯಕ್ಷ ಚಿನ್ನಪ್ಪ, ಉಪಾಧ್ಯಕ್ಷ ಗೋಪಾಲ, ಮುಖಂಡರಾದ ಸಿ.ಎಂ. ರಾಮಯ್ಯ, ರಾಜು, ಎನ್. ರಾಜು, ಎಂ. ಕೃಷ್ಣ, ರಂಗಣ್ಣ, ಸಣ್ಣಬೋರ, ಮಂಜುನಾಥ, ಕೆ. ರಾಜು ಇದ್ದರು.