ರಶ್ಮಿ ರಜೆ ಆದೇಶ ರದ್ದಿಗೆ ಮಹದೇವ್ ಆಗ್ರಹ
ಮೈಸೂರು: ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾದ ಇಲಾಖೆ ಕಾರ್ಯದರ್ಶಿ ವಿ. ರಶ್ಮಿ ಅವರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿರುವುದನ್ನು ರದ್ದುಪಡಿಸಬೇಕು ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಹಾಗೂ ಕಿಮ್ಸ್ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಕೆ. ಮಹದೇವ್ ಸರ್ಕಾರವನ್ನು ಒತ್ತಾಯಿಸಿದರು.
ಬಡವರ ಪರ, ದಲಿತರ ಪರ ಎನ್ನುವ ರಾಜ್ಯ ಸರ್ಕಾರ ಖಾಸಗಿ ವೈದ್ಯಕೀಯ ಕಾಲೇಜುಗಳು ನಡೆಸುವ ಹಲವು ಅಕ್ರಮಕ್ಕೆ ಪರೋಕ್ಷವಾಗಿ ಸಹಕರಿಸುತ್ತಿದೆ. ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾದ ಇಲಾಖೆ ಕಾರ್ಯದರ್ಶಿಯನ್ನು ರಜೆ ಮೇಲೆ ಕಳುಹಿಸಿದೆ. ಕೂಡಲೆ ಸರ್ಕಾರ ತನ್ನ ಆದೇಶ ಹಿಂಪಡೆಯಬೇಕು. ಅಲ್ಲದೆ ರಾಜೀವ್‌ಗಾಂಧಿ ಆರೋಗ್ಯ ವಿವಿಯ ಕುಲಪತಿ, ಕುಲಸಚಿವರು ಹಣದ ಆಸೆಗಾಗಿ ಅನೇಕ ಸಂಸ್ಥೆಗಳಿಗೆ ಮಾನ್ಯತೆ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯದ ಹಲವು ಕಾಲೇಜುಗಳಲ್ಲಿ ಸೀಟು ಹಂಚಿಕೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಕೋಟಾದಡಿ ಮಾನ್ಯತೆ ಪಡೆದ ಈ ಸಂಸ್ಥೆಯಲ್ಲಿ ಆಯಾ ಭಾಷಿಗರಿಗೆ ಸೀಟು ಹಂಚಿಕೆ ಮಾಡಬೇಕು. ಉಳಿಕೆ ಸೀಟನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು ಸೀಟು ಹಂಚಿಕೆಯಲ್ಲಿ ಅಕ್ರಮ ಎಸಗಿವೆ ಎಂದರು. ಬಡವರು, ಹಿಂದುಳಿದವರಿಗೆ ದೊರಕಬೇಕಿದ್ದ ಇಂಥ ಸುಮಾರು 1 ಸಾವಿರ ಸೀಟುಗಳು ಅನ್ಯರ ಪಾಲಾಗಿದೆ. ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಮುಂದಾದ ರಶ್ಮಿ ಅವರನ್ನು ಸರ್ಕಾರ ರಜೆ ಮೇಲೆ ಕಳುಹಿಸಿದೆ. ರಾಜ್ಯದಲ್ಲಿ ಕಾಮೆಡ್ ಕೆ ಬೇನಾಮಿ ಸಂಸ್ಥೆ. ಕಾಮೆಡ್ ಕೆ ರದ್ದಾದರೆ ಎಷ್ಟೋ ಸಮಸ್ಯೆ ಬಗೆಹರಿಯುತ್ತದೆ. ಅಲ್ಲದೆ ಕರ್ನಾಟಕ ರಿಲೀಜಿಯಸ್ ಅಂಡ್ ಲಿಂಗ್ವಿಸ್ಟಿಕ್ ಮೈನಾರಿಟಿ ಪ್ರೊಫೆಷನಲ್ ಕಾಲೇಜು ಸಂಸ್ಥೆಯು ನಡೆಸುವ ಪರೀಕ್ಷೆಗೆ ರಾಜೀವ್‌ಗಾಂಧಿ ಆರೋಗ್ಯ ವಿವಿ ಮಾನತ್ಯೆ ನೀಡುತ್ತಿರುವುದು ಸರಿಯಲ್ಲ ಎಂದರು.