ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈತರ ಪರ ನಾವಿದ್ದೇವೆ: ಪ್ರಸನ್ನ

Vishwanath S
Updated On : 7 Mar 2014, 12:17 pm

ಪಿರಿಯಾಪಟ್ಟಣ: ರೈತರಿಗೆ ಅನ್ಯಾಯವಾದಾಗ ಹೋರಾಟದ ಮೂಲಕ ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ತಾವು ಮುಂದಿರುವುದಾಗಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ರಾಜ್ಯ ರೈತ ಹೋರಾಟ ಸಮಿತಿ ಅಧ್ಯಕ್ಷ ಪ್ರಸನ್ನ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ತಾಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಂಘದ ಸದಸ್ಯತ್ವ ಪಡೆದು ಸಂಘದ ಬಲವರ್ಧನೆಗೆ ಶ್ರಮಿಸಬೇಕು. ರಾಜ್ಯದಲ್ಲಿ ಒಕ್ಕಲುತನವೇ ಮುಖ್ಯ ಕಸುಬಾಗಿದ್ದರೂ ಈ ಹಿಂದೆ ಒಕ್ಕಲಿಗರ ಸಂಘ ರೈತ ಪರ ಹೋರಾಟಕ್ಕೆ ಒತ್ತು ನೀಡಿರಲಿಲ್ಲ. ಆದರೆ ಮುಂದೆ ರೈತರಿಗೆ ಅನ್ಯಾಯವಾದಲ್ಲಿ ಸಂಘ ಸುಮ್ಮನೆ ಕೂರುವುದಿಲ್ಲ. ಇದರ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಸನ್ಮಾನ, ಸಂಘದ ಏಳಿಗೆಗಾಗಿ ದುಡಿದವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ವಾಣಿಜ್ಯೋದ್ಯಮಿ ಟಿ.ಎಸ್. ಹರೀಶ್ ಬಿರ್ಲಾ ಮಾತನಾಡಿದರು. ಪದಾಧಿಕಾರಿಗಳಾದ ಗೋವಿಂದೇಗೌಡ, ಕೃಷ್ಣೇಗೌಡ, ಶ್ರೀನಿವಾಸಗೌಡ, ಕುಮಾರ್, ಗಿರೀಶ್, ರಂಗಸ್ವಾಮಿ, ರಾಜಣ್ಣ, ನಾರಾಯಣ ಇದ್ದರು.
20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸಂಸದರಿಂದ ಗುದ್ದಲಿ ಪೂಜೆ
ಸುತ್ತೂರು: ನಂಜನಗೂಡು ತಾಲೂಕು ಕಾರಾಪುರ, ಕಲ್ಕುಂದ, ಸರಗೂರು ಮುಂತಾದ ಗ್ರಾಮಗಳಲ್ಲಿ ಸುಮಾರು 20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸಂಸದ ಆರ್.ಧ್ರುವನಾರಾಯಣ್ ಬುಧವಾರ ಬೆಳಗ್ಗೆ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಜನ ಜೀವನ ಉತ್ತಮವಾಗಿ ನಡೆಯಲು ನೀರು, ರಸ್ತೆ, ಚರಂಡಿ ನಿರ್ಮಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಿ ಜನರಿಗೆ ಪ್ರಾಥಮಿಕ ಸೌಲಭ್ಯ ಕಲ್ಪಿಸಿಕೊಡುತ್ತಿವೆ. ಪ್ರಜ್ಞಾವಂತ ಜನರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಮಳೆಯಿಂದ ಹಾನಿಗೊಳಗಾದ ನಗರ್ಲೆ ಗ್ರಾಮದ ಸಿದ್ದರಾಜ ಶೆಟ್ಟಿಯವರ ಮನೆಗೆ ಭೇಟಿ ನೀಡಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷರಾದ ಬಸವರಾಜು, ಧರ್ಮೇಂದ್ರ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಕಾರೇಪುರ ಗ್ರಾಮದ ಮಲ್ಲಪ್ಪ, ನಾಗರಾಜು, ಸೋಮಣ್ಣ, ಶಿವಶರಣ ಮಾದರ ಚನ್ನಯ್ಯ ಕಲಾಸಂಘದ ಸಿದ್ದರಾಜು ಇದ್ದರು.
27.35 ಲಕ್ಷ ಉಳಿತಾಯ ಬಜೆಟ್
ಟಿ. ನರಸೀಪುರ: ಪಟ್ಟಣ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿ, ತಹಸೀಲ್ದಾರ್ ಸಿ. ಚೌಡಯ್ಯ 27.35 ಲಕ್ಷಗಳ ಉಳಿತಾಯ ಬಜೆಟ್ ಮಂಡಿಸಿದರು.
2014-15ನೇ ಸಾಲಿಗೆ ಒಟ್ಟು 11.61 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ವೆಚ್ಚ 11.34 ಕೋಟಿ ಎಂದು ಅಂದಾಜಿಸಲಾಗಿದೆ. ಇದರಿಂದ 27 ಲಕ್ಷ ಉಳಿತಾಯ ದೊರಕಲಿದೆ ಎಂದು ತಿಳಿಸಿದರು.
ಈ ಸಾಲಿನ ಬಜೆಟ್‌ನಲ್ಲಿ ಹಣಕಾಸು ನಿಧಿಯಿಂದ ಎರಡು ಕೋಟಿ, ಬರ ಪರಿಹಾರ ನಿಧಿಯಿಂದ 50 ಲಕ್ಷ, ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಿಧಿಯಿಂದ 5 ಕೋಟಿ, 13ನೇ ಹಣಕಾಸು ಯೋಜನೆಯಿಂದ 64 ಲಕ್ಷ, ಕಟ್ಟಡ ಬಾಡಿಗೆ 30 ಲಕ್ಷ, ಬಾಡಿಗೆ ಠೇವಣಿಯಿಂದ 66 ಲಕ್ಷ, ಆಸ್ತಿ ಮತ್ತು ನೀರಿನ ತೆರಿಗೆಯಿಂದ ತಲಾ 25 ಲಕ್ಷ ಸೇರಿದಂತೆ ಒಟ್ಟು 11 ಕೋಟಿ ವೆಚ್ಚದ ಬಜೆಟ್ ನಿರೀಕ್ಷಿಸಲಾಗಿದೆ ಎಂದು ಮುಖ್ಯಾಧಿಕಾರಿ ವಿ.ಟಿ. ವಿಲ್ಸನ್ ಹೇಳಿದರು. ಲೆಕ್ಕ ಪರಿಶೋಧಕ ವಿನಯ್, ಯೋಜನಾಧಿಕಾರಿ ಕೆಂಪರಾಜು ಇದ್ದರು.
'ಹಾಲು ಉತ್ಪಾದಕರ ಸಂಘದ ಏಳಿಗೆಗೆ ಶ್ರಮಿಸಿ'
ಕೆ.ಆರ್. ನಗರ: ಹಳ್ಳಿಗಳಲ್ಲಿರುವ ಪ್ರತಿಯೊಬ್ಬರೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿ ಸಂಘದ ಏಳಿಗೆಗೆ ದುಡಿಯುವುದರ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಲಾಭಗಳಿಸಿ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ತಾಲೂಕಿನ ಲಾಳಂದೇವನಹಳ್ಳಿ ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹೈನುಗಾರಿಕೆಯಿಂದ ಆರ್ಥಿಕ ಲಾಭದ ಜತೆಗೆ ಆರೋಗ್ಯ ವೃದ್ಧಿಯಾಗಲಿದೆ ಎಂದರು. ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವನಾಯಕ, ಸದಸ್ಯ ದಿವಾಕರ, ಮಾಜಿ ಸದಸ್ಯ ಸತೀಶ್, ಪುರಸಭಾ ಸದಸ್ಯ ಎನ್. ಶಿವಕುಮಾರ್, ಸಂಘದ ಅಧ್ಯಕ್ಷೆ ವನಜಾಕ್ಷಿ, ಕಾರ್ಯದರ್ಶಿ ಹೇಮಲತಾ, ನಿರ್ದೇಶಕರಾದ ರಾಜೇಶ್ವರಿ, ರೇಣುಕಾ, ಸಾವಿತ್ರಮ್ಮ, ನಾಗಮ್ಮ, ಸುಶಿಲಮ್ಮ, ಕಾಂತಾಮಣಿ, ಇಂದ್ರಮ್ಮ, ಸಾಕಮ್ಮ, ಜೆಡಿಎಸ್ ಮುಖಂಡ ಪುಟ್ಟರಾಜು ಇದ್ದರು.
ಲೋಕಾಯುಕ್ತ ಬಲೆಗೆ ಗ್ರಾಮಲೆಕ್ಕಿಗ
ಹನೂರು: ಜಮೀನು ಖಾತೆ ಮಾಡಿಕೊಡಲು ರೈತನಿಂದ ಲಂಚ ಪಡೆಯುವ ವೇಳೆಯಲ್ಲಿ ಗ್ರಾಮಲೆಕ್ಕಿಗನೊಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.  ಹನೂರು ವ್ಯಾಪ್ತಿಯ ಪಿ.ಜಿ.ಪಾಳ್ಯ ನಿವಾಸಿ ರೈತ ಸಿದ್ದರಾಜು ಸರ್ಕಾರದಿಂದ ಮಂಜೂರಾಗಿರುವ ಜಮೀನು ಖಾತೆ ಮಾಡಿಸಿಕೊಳ್ಳಲು ಕಳೆದ 3 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದನು. ಹನೂರು ಹೆಚ್ಚುವರಿ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಸಹಾಯಕ ವೆಂಕಟಮಾದನಾಯ್ಕ ಖಾತೆ ಮಾಡಿಕೊಡಲು 10 ಸಾವಿರ ರು. ಹಣ ನೀಡುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ರೈತ ಸಿದ್ದರಾಜು ಮುಂಗಡವಾಗಿ 3ಸಾವಿರ  ರು. ಹಣ ನೀಡಿ ಉಳಿದ ಹಣವನ್ನು ಆಮೇಲೆ ನೀಡುವುದಾಗಿ ತಿಳಿಸಿದ್ದನು. ಅದರಂತೆ ಗುರುವಾರ ಬೆಳಗ್ಗೆ ರೈತ ಸಿದ್ದರಾಜು ಅವರಿಂದ ವೆಂಕಟಮಾದನಾಯ್ಕ ಉಳಿಕೆ 7 ಸಾವಿರ ರು.ಗಳನ್ನು ಪಡೆಯುವ ವೇಳೆಯಲ್ಲಿ ಚಾಮರಾಜನಗರದ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿ ವೆಂಕಟಮಾದನಾಯ್ಕನನ್ನು  ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಪಿಎಸ್‌ಐಗಳಾದ ಕ್ಯಾತೇಗೌಡ, ಗೋಪಿಕೃಷ್ಣ, ಸಿಬ್ಬಂದಿ ಭಾಗವಹಿಸಿದ್ದರು.
ಸುಬ್ರಹ್ಮಣ್ಯ ಅಧಿಕಾರ ಸ್ವೀಕಾರ
ಮೈಸೂರು: ಅರಮನೆ ಮಂಡಳಿ ಉಪ ನಿರ್ದೇಶಕರಾಗಿ ಟಿ.ಎಸ್.ಸುಬ್ರಹ್ಮಣ್ಯ ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆಯೂ ಅರಮನೆ ಮಂಡಳಿ ಉಪ ನಿರ್ದೇಶಕರಾಗಿದ್ದ ಸುಬ್ರಹ್ಮಣ್ಯ ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಧಾರವಾಡದ ಪ್ರಾಚ್ಯವಸ್ತು ಮತ್ತು ಪಾರಂಪರಿಕ ಇಲಾಖೆ ಉಪ ನಿರ್ದೇಶಕರ ಸ್ಥಾನಕ್ಕೆ ವರ್ಗಾಯಿಸಿ ಸ್ವಾಮಿ ಅವರನ್ನು ನೇಮಿಸಲಾಗಿತ್ತು. ಸರ್ಕಾರದ ಈ ತೀರ್ಮಾನ ಪ್ರಶ್ನಿಸಿ ಸುಬ್ರಹ್ಮಣ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಸುಬ್ರಹ್ಮಣ್ಯ ಅವರನ್ನೇ ಮುಂದುವರೆಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಬುಧವಾರ ಅವರು ಅಧಿಕಾರ ಸ್ವೀಕರಿಸಿದರು.
ಪದಕ ವಿಜೇತರ ತಾತ್ಕಾಲಿಕ ಪಟ್ಟಿ
ಮೈಸೂರು: ಮಾನಸ ಗಂಗೋತ್ರಿಯ 94ನೇ ವಾರ್ಷಿಕ ಘಟಿಕೋತ್ಸವ ಮಾ.22ರಂದು ನಡೆಯಲಿದೆ. ಪದಕ ಮತ್ತು ನಗದು ಬಹುಮಾನಗಳಿಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ವೆಬ್‌ಸೈಟ್ ವಿಳಾಸ ಢಿಢಿಢಿ.್ಡಟ್ಝಿ.ಟಣಡ್ಟ್ಠಜ.ಛ್ಛ.್ಝಟಿ ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ವ್ಯತ್ಯಾಸ ಕಂಡುಬಂದಲ್ಲಿ ಕೂಡಲೆ ದಾಖಲಾತಿಗಳೊಂದಿಗೆ ಮಾ.10ರೊಳಗೆ ವಿವಿ ಸಂಪರ್ಕಿಸಬಹುದು.
ಅರ್ಜಿ ಆಹ್ವಾನ
ಸಿಆರ್‌ಪಿಎಫ್ ಬೆಂಗಳೂರಿನಲ್ಲಿ ಖಾಲಿಯಿರುವ 271 ಎಎಸ್‌ಐ ಸ್ಟೆನೂ ಮತ್ತು 482 ಮುಖ್ಯಪೇದೆ ಹುದ್ದೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಎಸ್‌ಐಸ್ಟೆನೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾ.10 ಹಾಗೂ ಮುಖ್ಯಪೇದೆ ಹುದ್ದೆಗೆ ಅರ್ಜಿ ಸಲ್ಲಿಸಲು ಮಾ.12 ಕೊನೆ ದಿನ. ವಿದ್ಯಾರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ ಢಿಢಿಢಿ.್ಛ್ಠಠಜಿ.್ಜ್ಟಢ.್ಝಟಿ ನೋಡಬಹುದು.
ಸಾಮೂಹಿಕ ವಿವಾಹ
ಉದ್ಯಮಿ ಎಂ.ಕೆ. ಪೋತರಾಜ್ ಅವರ ಷಷ್ಠಿಪೂರ್ತಿ ಶಾಂತಿ ಮಹೋತ್ಸವ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾ. 28ರ ಬೆಳಗ್ಗೆ 9ಕ್ಕೆ ಮೈಸೂರು- ಶ್ರೀರಂಗಪಟ್ಟಣ ರಸ್ತೆಯ ಬ್ರಹ್ಮಪುರದಲ್ಲಿ ಏರ್ಪಡಿಸಿದೆ ಎಂದು ರಂಗಕರ್ಮಿ ರಾಜಶೇಖರ ಕದಂಬ ಹೇಳಿದರು. ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಕೈಲಾಸಾಶ್ರಮದ ಶ್ರೀ ಜಯೇಂದ್ರಪುರಿ ಸ್ವಾಮೀಜಿ, ಬೇಬಿಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ಆರ್ಯ ರೇಣುಕಾನಂದ ಸ್ವಾಮೀಜಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕನಿಷ್ಠ 60 ಜೋಡಿಯ ಸಾಮೂಹಿಕ ವಿವಾಹ ನೆರವೇರಿಸಲು ಉದ್ದೇಶಿಸಲಾಗಿದೆ. ಜಾತಿಯ ತಾರತಮ್ಯವಿಲ್ಲದೆ ಆಯೋಜಿಸಿರುವ ಈ ಸಾಮೂಹಿಕ ವಿವಾಹದಲ್ಲಿ ವರನಿಗೆ ರೇಷ್ಮೆ ಪಂಚೆ, ಶಲ್ಯ, ವಧುವಿಗೆ ರೇಷ್ಮೆ ಸೀರೆ, ಕುಪ್ಪಸ, 4 ಗ್ರಾಂ. ಚಿನ್ನದ ಮಾಂಗಲ್ಯ ನೀಡಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಮಾ. 15ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಅಂದು ಆರೋಗ್ಯ ತಪಾಸಣೆ, ರಕ್ತದಾನ, ನೇತ್ರ ತಪಾಸಣೆ, ಉದ್ಯೋಗ ಮೇಳ, ಜನಪದ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಉಚಿತ ಸಾಮೂಹಿಕ ವಿವಾಹದ ಹೆಸರು ನೋಂದಣಿಗೆ ಮೊ. 9880333333, 9845222223 ಸಂಪರ್ಕಿಸಬಹುದು. ಉದ್ಯಮಿ ಧ್ರುವರಾಜ್, ಮೈಸೂರು ಮತ್ತು ಚಾ.ನಗರ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಮೂಗೂರು ನಂಜುಂಡಸ್ವಾಮಿ, ಕೃಷ್ಣ ಮತ್ತು ಮುರುಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement