ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಐಎಎಸ್, ಕೆಎಎಸ್ ಆಕಾಂಕ್ಷಿಗಳು ಜನಸೇವೆಗೆ ಬನ್ನಿ

Vishwanath S
Updated On : 8 Mar 2014, 12:58 pm

ಮೈಸೂರು: ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರು ಜನಸೇವೆಯೇ ತಮ್ಮ ಮೊದಲ ಗುರಿ ಎಂಬ ಮನೋಭಾವನೆ ಬೆಳೆಸಿಕೊಂಡು ಸಾರ್ವಜನಿಕ ವಲಯಕ್ಕೆ ಬನ್ನಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕಳೆದ 45 ದಿನಗಳಿಂದ ನಡೆಸಿದ 2014ರ ಐಎಎಸ್, ಕೆಎಎಸ್ ಮತ್ತು ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನಸೇವೆ ಎಂಬುದು ಜವಾಬ್ದಾರಿಯುತ ಕೆಲಸ. ತಾನು ಐಎಎಸ್, ಕೆಎಎಸ್ ಅಧಿಕಾರಿ ಎಂದು ಗುರುತಿಸಿಕೊಳ್ಳುವುದು, ಕಾರಿನಲ್ಲಿ ತಿರುಗಾಡುವುದಕ್ಕಿಂತ ಹೆಚ್ಚು ಶ್ರಮ ಹಾಕಿ ಜನರ ಯೋಗಕ್ಷೇವು ವಿಚಾರಿಸುವುದು ಈ ಕೆಲಸದ ಧ್ಯೇಯವಾಗಿದೆ ಎಂದರು.
ಯುಪಿಎಸ್ಸಿ ನಡೆಸುವ ಪರೀಕ್ಷೆಗಳು ಅಷ್ಟು ಸುಲಭವಾಗಿರುವುದಿಲ್ಲ. ಈಗ ಐಎಎಸ್ ನಡೆಸುವ ರೀತಿ ಬದಲಾಗಿರುವುದರಿಂದ ಸ್ಪರ್ಧಾಕಾಂಕ್ಷಿಗಳು ಹೆಚ್ಚು ಶ್ರಮ ಹಾಕಿ ಓದಬೇಕು. ಸಾಮಾನ್ಯ ಜ್ಞಾನ, ವಿಷಯಜ್ಞಾನ, ಸಂದರ್ಶನ ಎದುರಿಸುವ ತಂತ್ರ, ಕಾಲ ಕಾಲಕ್ಕೆ ಪ್ರಚಲಿತ ವಿಷಯಗಳ ಜ್ಞಾನ ಪಡೆದುಕೊಳ್ಳುವುದು ಹಾಗೂ ಎಲ್ಲವನ್ನು ಸ್ಪರ್ಧಾ ಮನೋಭಾವನೆಯಿಂದ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಹಳೆ ಪುಸ್ತಕಗಳಿಂದ ಅಷ್ಟೇನು ಪ್ರಯೋಜನವಾಗುವುದಿಲ್ಲ. ಪರಿಷ್ಕೃತಗೊಂಡು ಪುಸ್ತಕಗಳನ್ನು ಓದಿದರೆ ವಿಷಯಜ್ಞಾನ ಬೆಳೆಯುತ್ತದೆ ಎಂದು ತಿಳಿಸಿದರು.
ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಿ: ಶಾಸನಸಭೆಯಲ್ಲಿ ಮಂಡಿಸುವ ಮಸೂದೆಗಳು, ಅವು ನಂತರ ಕಾನೂನುಗಳಾಗಿ ಪರಿವರ್ತಿತವಾಗುವುದು. ಹೀಗೆ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. ಪರೀಕ್ಷೆಯನ್ನು ನಿಗದಿತ ಸಮಯದೊಳಗೆ ಮುಗಿಸಬೇಕಾದ್ದರಿಂದ ಆದಷ್ಟು ಬರವಣಿಗೆಯನ್ನು ಅಭಿವೃದ್ಧಿಪಡಿಸಿಕೊಳ್ಳಿ. ನೀವು ಬರೆದದ್ದು ನಿಮಗೆ ಅರ್ಥವಾಗದಿದ್ದರೆ ಬೇರೆಯವರಿಗೆ ಅರ್ಥವಾಗಲು ಹೇಗೆ ಸಾಧ್ಯ ಎಂಬುದರ ಅರಿವು ನಿಮಗಿರಬೇಕು. ಪ್ರತಿದಿನ ಬರವಣಿಗೆ ಅಭ್ಯಾಸ ಮಾಡಿ, ವಿವಿಧ ಕೋರ್ಸುಗಳ ಉಪಯೋಗ ಪಡೆದುಕೊಳ್ಳಿ. ಒಂದು ವಿಷಯವನ್ನು ಕೈಗೆತ್ತಿಕೊಂಡರೆ ಯೋಜನಾ ಬದ್ಧವಾಗಿ ಅಭ್ಯಸಿಸುವುದು, ಕೀ ಪುಸ್ತಕಗಳನ್ನು ನಿರ್ವಹಣೆ ಮಾಡುವ ಕೌಶಲ್ಯ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಮಾತನಾಡಿ, ಶಿಬಿರದ ಆರಂಭದಲ್ಲಿ ಅಭ್ಯರ್ಥಿಗಳಿಗೆ ಇದ್ದ ಕೀಳರಿಮೆ, ಭಯ, ಆತ್ಮವಿಶ್ವಾಸದ ಕೊರತೆಯನ್ನು ಈ ತರಬೇತಿ ತುಂಬಿಕೊಟ್ಟಿದೆ ಎಂಬ ಆಶಾಭಾವನೆ ನನಗಿದೆ. ಒಂದು ರೀತಿಯಲ್ಲಿ ಯೋಚಿಸುವುದಾದರೆ ಈ ರೀತಿಯ ತರಬೇತಿಗಳ ಔಚಿತ್ಯವಿತ್ತೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇಂತಹ ಜಿಜ್ಞಾಸೆಯ ನಡುವೆ ನಾವು ಆಯೋಜಿಸಿದ ತರಬೇತಿ ಶಿಬಿರವು ನಾಲ್ಕಾರು ಮಂದಿಗೆ ಉಪಯೋಗವಾದರೆ ಸಾರ್ಥಕ್ಯವಾಗುತ್ತದೆ. ಅಭ್ಯರ್ಥಿಗಳು ಆಸಕ್ತಿಯಿಂದ ಶ್ರಮವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಒಳ್ಳೆಯ ಅಧಿಕಾರಿಗಳಾಗುವಂತೆ ಆಶಿಸಿದರು. ಕಳೆದ 45 ದಿನಗಳಿಂದ ನಡೆದ ಶಿಬಿರದಲ್ಲಿ 34 ಮಂದಿ ಸಂಪನ್ಮೂಲ ವ್ಯಕ್ತಿಗಳು, ಐಎಎಸ್ ಅಧಿಕಾರಿಗಳಾದ ಪಿ. ಮಣಿವಣ್ಣನ್, ಡಾ.ಅಜಯ್‌ನಾಗಭೂಷಣ್, ಅನೀಸ್ ಜಾಯ್ ಕಣ್ಮಣಿ, ಐಪಿಎಸ್ ಅಧಿಕಾರಿಗಳಾದ ಡಾ. ಓಂಪ್ರಕಾಶ್, ಭೂಷಣ್ ಜಿ. ಬೊರಸೆ, ಅಭಿನವ ಖರೆ, ಡಾ.ಪಿ. ರಾಜಾ, ಡಾ.ಎಸ್. ಭೀಮಾಶಂಕರ್ ಎಸ್. ಗುಳೇಶ್, ಜಿ.ರಾಧಿಕಾ ಸೇರಿದಂತೆ ಐಎಫ್‌ಎಸ್, ಕೆಎಎಸ್ ಅಧಿಕಾರಿಗಳು ಶಿಬಿರಾರ್ಥಿಗಳಿಗೆ ಬೋಧಿಸಿದ್ದರು ಎಂದು ಸಂಯೋಜಕ ಜೈನಹಳ್ಳಿ ಸತ್ಯನಾರಾಯಣಗೌಡ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement