ಭೈರಾಪುರ ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ
ಟಿ. ನರಸೀಪುರ: ಭೈರಾಪುರ ಗ್ರಾಪಂ ಅಧ್ಯಕ್ಷೆ ಪದ್ಮಾ ವೆಂಕಟೇಶ್ ಅವರನ್ನು ಶುಕ್ರವಾರ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಗೊಳಿಸಲಾಯಿತು.
ತಾಲೂಕಿನ ಭೈರಾಪುರ ಗ್ರಾಪಂ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ 26 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಕೈಗೊಳ್ಳುವ ಮೂಲಕ ಅಧ್ಯಕ್ಷೆ ಪದ್ಮಾ ವೆಂಕಟೇಶ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು.
ಪಂಚಾಯಿತಿಯ 23 ಮಂದಿ ಸದಸ್ಯರು ಅಧ್ಯಕ್ಷರ ಆಡಳಿತದ ಮೇಲೆ ವಿಶ್ವಾಸವಿಲ್ಲವೆಂದು ಕಳೆದ ಫೆ.14ರಂದು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಶುಕ್ರವಾರ ಅವಿಶ್ವಾಸ ನಿರ್ಣಯ ಸಭೆಯನ್ನು ಕರೆಯಲಾಗಿತ್ತು. 29 ಸದಸ್ಯರಲ್ಲಿ 26 ಮಂದಿ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಅವಿಶ್ವಾಸ ನಿರ್ಣಯಕ್ಕೆ ಕೈ ಎತ್ತುವ ಮೂಲಕ ಅಧ್ಯಕ್ಷೆಯನ್ನು ಪದಚ್ಯುತಿಗೊಳಿಸಿ ವಿಜಯೋತ್ಸವ ಆಚರಿಸಿದರು.
ಗ್ರಾಪಂ ಉಪಾಧ್ಯಕ್ಷ ಪುಟ್ಟು, ಮಾಜಿ ಅಧ್ಯಕ್ಷ ಕರಿಯಪ್ಪ, ಬಿ. ವೀರಭದ್ರಪ್ಪ, ನಾಗರಾಜು, ಸದಸ್ಯರಾದ ಬಿ.ಎಲ್. ಮಹದೇವ, ಟಿ.ಎನ್. ಶಿವಕುಮಾರ್, ಆರ್. ನಂಜಯ್ಯ, ವಿಷಕಂಠಮೂರ್ತಿ, ಹೇಮಂತ್‌ಕುಮಾರ್, ಎಂ. ಮಿಥುನ್, ಸೋಮಶೇಖರ್. ರಾಚಯ್ಯ, ದಾಮೂರ್ತಿ, ರಮೇಶ್, ಪ್ರಕಾಶ್, ಶಿವಮ್ಮ, ಕಮಲಮ್ಮ, ಭಾಗ್ಯಮ್ಮ, ರೇಣುಕಾ, ಪಾರ್ವತಿ, ವಸಂತಮ್ಮ, ಜ್ಯೋತಿ, ಲೀಲಾ, ಮುಬಿನ್‌ತಾಜ್, ಲಕ್ಷ್ಮಮ್ಮ, ಉಮಾ ಇದ್ದರು.
ರೋಗದಿಂದ ಮುಕ್ತರಾಗಲು ಮಿತ ಆಹಾರ ಸೇವಿಸಲು ಕರೆ
ಹುಣಸೂರು; ರೋಗದಿಂದ ಮುಕ್ತರಾಗಲು ಪೌಷ್ಟಿಕಾಂಶಯುಕ್ತ ಮಿತ ಆಹಾರ ಸೇವನೆ, ವ್ಯಾಯಾಮ ಹಾಗೂ ಉತ್ತಮ ಪರಿಸರಕ್ಕೆ ಆದ್ಯತೆ ನೀಡಿದಲ್ಲಿ ಎಲ್ಲ ರೋಗಗಳಿಂದ ಮುಕ್ತರಾಗಬಹುದೆಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಉಮಾಕುಮಾರ್ ಸಲಹೆ ನೀಡಿದರು.
ಮೈಸೂರು ಜಿಲ್ಲಾ ಆಯುಷ್ ಕಚೇರಿ ಹಾಗೂ ಏಕಲ್ ವಿದ್ಯಾಲಯ ಯೋಜನೆ ವತಿಯಿಂದ ತಾಲೂಕಿನ ಹನಗೋಡು ಹೋಬಳಿಯ ವೀರನಹೊಸಹಳ್ಳಿ ಹಾಗೂ ನೇರಳಕುಪ್ಪೆ ಗಿರಿಜನ ಆಶ್ರಮ ಶಾಲೆಯಲ್ಲಿ ಆದಿವಾಸಿಗಳಿಗೆ ಉಚಿತ ಮಧುಮೇಹ ಹಾಗೂ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜನರು ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಮುನ್ನೆಚ್ಚರಿಕೆ ವಹಿಸಿ ಆಯಾ ಋತುಗಳಿಗೆ ಅನುಗುಣವಾಗಿ ಮಿತ ಆಹಾರ ಸೇವಿಸುವುದರೊಂದಿಗೆ ಮನೆಯ ಸುತ್ತ ಉತ್ತಮ ಪರಿಸರ ನಿರ್ಮಿಸಿಕೊಳ್ಳುವುದರೊಂದಿಗೆ ರೋಗದಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಎ.ವಿ. ಬಾಲಕೃಷ್ಣ ತಾಪಂ ಸದಸ್ಯ ಕೆ.ಗಣಪತಿ, ಪಿಡಿಒ ಮಣಿ ಮಾತಾನಾಡಿದರು. ವೈದ್ಯರಾದ ಡಾ. ಜ್ಯೋತಿ, ಡಾ.ರೂಪಾದೇವಿ, ಡಾ.ಸಂದೀಪ್, ಡಾ.ಪರಮೇಶ್ ಚಿಕಿತ್ಸೆ ನೀಡಿದರು. ಏಕಲ್ ವಿದ್ಯಾಲಯ ಯೋಜನೆಯ ಜಿಲ್ಲಾ ಸಂಚಾಲಕ ಎನ್.ಎಸ್. ಲೋಕೇಶ್, ಸೂರ್ಯಕುಮಾರ್, ಶಾಲೆಯ ಶಿಕ್ಷಕರಾದ ಮಾದಪ್ಪ, ಕೆ.ಎಸ್. ರಾಜು, ದೊಡ್ಡಸ್ವಾಮಿ, ಕೆ.ಕೆ. ಸ್ವಾಮಿ, ಮೈತ್ರಿ ಭಾಗವಹಿಸಿದ್ದರು.
ವೈದ್ಯ ಸೀಟು ಹಗರಣದ ತನಿಖೆಗೆ ಎಬಿವಿಪಿ ಆಗ್ರಹ
ಮೈಸೂರು: ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿಯದೆ, ಈ ಕೂಡಲೇ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿ. ರಶ್ಮಿ ಅವರನ್ನು ಕಡ್ಡಾಯ ರಜೆಯಿಂದ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯರು ಶುಕ್ರವಾರ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ, ಉನ್ನತ ಮಟ್ಟದ ತನಿಖೆಗೆ ಕೂಡಲೇ ಆದೇಶಿಸಬೇಕು. ಸೀಟು ಹಂಚಿಕೆ ಹಗರಣದಲ್ಲಿ ಭಾಗಿಯಾಗಿ, ವಿದ್ಯಾರ್ಥಿಗಳಿಗೆ ವಂಚಿಸಿದ ಕಾಲೇಜುಗಳ ಅಲ್ಪಸಂಖ್ಯಾತ (ಭಾಷಾ, ಧಾರ್ಮಿಕ) ಸ್ಥಾನಮಾನ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಸೀಟು ಹಗರಣದಲ್ಲಿ ಭಾಗಿಯಾದ ಕಾಲೇಜುಗಳಿಗೆ ಪ್ರತಿ ಸೀಟಿನ ಮೌಲ್ಯದ ಹತ್ತು ಪಟ್ಟು ಹಣವನ್ನು ದಂಡವಾಗಿ ವಸೂಲಿ ಮಾಡಬೇಕು, ತಪ್ಪಿದರೆ ಕಾಲೇಜಿನ ಪರವಾನಗಿ ರದ್ದುಗೊಳಿಸಬೇಕು. ಸೀಟು ಹಗರಣದ ತನಿಖಾ ವರದಿ ಹಾಗೂ ಕಾಲೇಜುಗಳ ವಿರುದ್ಧ ಕ್ರಮದ ಎಲ್ಲಾ ಮಾಹಿತಿಯನ್ನು ಭಾರತೀಯ ವೈದ್ಯ ಪರಿಷತ್ತು, ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗಕ್ಕೆ ನೀಡಿ ಮುಂಬರುವ ದಿನಗಳಲ್ಲಿ ಇತರೆ ಅಲ್ಪಸಂಖ್ಯಾತ ಕಾಲೇಜುಗಳ ಸೀಟನ್ನು ಮಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಾಜ ಪರಿವರ್ತಿಸುವಲ್ಲಿ ಮಹಿಳೆ ಪಾತ್ರ ಮುಖ್ಯ
ಮೈಸೂರು: ಸಮಾಜ ಪರಿವರ್ತಿಸುವಲ್ಲಿ ಮಹಿಳೆ ಪ್ರಧಾನ ಪಾತ್ರ ವಹಿಸುತ್ತಾಳೆ. ಆದರೆ, ಈ ಸತ್ಯವನ್ನು ಅರಿಯುವಲ್ಲಿ ಸಮಾಜ ಸೋತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್ ಅಭಿಪ್ರಾಯಪಟ್ಟರು.
ಭಾರತೀಯ ಕೈಗಾರಿಕಾ ಒಕ್ಕೂಟ ಜಿಲ್ಲಾ ಶಾಖೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಭಾರತೀಯ ಮಹಿಳಾ ಸಬಲೀಕರಣ- ಉನ್ನತ ದೃಷ್ಟಿಕೋನ ವಿಷಯ ಕುರಿತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿದೆ ಪ್ರತಿದಿನವೂ ಆಚರಿಸಬೇಕು. ಮಹಿಳೆಯರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕು. ಅವರ ಭಾವನೆಗಳನ್ನು ಇತ್ಯಾತ್ಮಕವಾಗಿ ಪರಿಗಣಿಸಬೇಕು. ಪ್ರತಿ ಮಹಿಳೆಯ ತಾಯಿ ಸ್ವರೂಪಳೆ.
ಆಕೆ ತಾನು ಮಾಡುವ ಕೆಲಸದಿಂದ ಹೊಳೆಯಲು ಪ್ರಯತ್ನಿಸುತ್ತಾಳೆ. ಇದೇ ರೀತಿ ಮಾಡಿದ ಹಲವರು ಇಂದಿನ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಆದರೆ, ಮಹಿಳಾವಾದಿಗಳು ಸೇರಿದಂತೆ ಕೆಲವೇ ಮಂದಿ ಇಂತಹ ಸತ್ಕಾರ್ಯ ಗುರುತಿಸುತ್ತಾರೆ. ಉಳಿದಂತೆ ಸಮಾಜ ನಿರ್ಲಕ್ಷಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮ ಸಂಯೋಜಕ, ಎಲ್ ಆ್ಯಂಡ್ ಟಿ ಎಚ್‌ಆರ್‌ಡಿ ಕೆ. ಅನಂತಗೌಡ, ಪ್ಲಾನ್ಸೀ ಇಂಡಿಯಾ ಎಚ್‌ಪಿಎಂ ಸಿಎಫ್‌ಒ ಸುಪ್ರಿಯಾ ರಾಮದಾಸಿ, ಸೆಟ್ಟಿಮೆಕ್ ಎಂಜಿನಿಯರ್ ಪ್ರೈ.ಲಿ. ಎಂಡಿ ಶ್ರೀಮತಿ ಮನೋಜ್, ಡಾ. ಅನುಪಮಾ ಡಿ. ರೋಹಿಡೇಕರ್, ಎಂ ಗ್ರೀನಾ, ಕೆ. ಹರಿಹರನ್, ಪೂರ್ಣಿಮಾ ಕೆ. ಮೂರ್ತಿ ಇದ್ದರು.
ಬಹುಮಾಧ್ಯಮ ಬೋಧನ ಕಾರ್ಯಾಗಾರಕ್ಕೆ ತೆರೆ
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಬಹುಮಾಧ್ಯಮ ಕಲಿಕಾ ಸಂಪನ್ಮೂಲ ಸೃಷ್ಟಿ ಕೇಂದ್ರವು ಆಯೋಜಿಸಿದ್ದ ಬಹುಮಾಧ್ಯಮ ಬೋಧನೆ ಕುರಿತಾದ ಎರಡು ದಿನಗಳ ಕಾರ್ಯಾಗಾರ ಶುಕ್ರವಾರ ಸಮಾರೋಪಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಡಿ. ಶ್ರೀಜಯದೇವರಾಜ ಅರಸ್ ಕಾರ್ಯಾಗಾರದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಮೈಸೂರು ವಿವಿ ಹಣಕಾಸು ಅಧಿಕಾರಿ ಮತ್ತು ಪಿಎಂಇಬಿ ನಿರ್ದೇಶಕ ಪ್ರೊ.ಎಸ್. ರವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಯ ಎಂಬುದು ಹಣಕ್ಕಿಂತ ಹೆಚ್ಚು ಮೌಲ್ಯ ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಬಹುಮಾಧ್ಯಮ ಬೋಧನಾ ವ್ಯವಸ್ಥೆ ತೀರ ಅನಿವಾರ್ಯವಾಗಿದೆ. ಅನೇಕ ವಿದೇಶಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಈಗ ಮೈಸೂರು ವಿವಿ ಮುಂದಿನ ಭವಿಷ್ಯದ ದೃಷ್ಟಿಯಿಂದ ಬಹುಮಾಧ್ಯಮ ಬೋಧನಾ ಕಲಿಕಾ ಸಂಪನ್ಮೂಲ ಸೃಷ್ಟಿಗಾಗಿ ಈ ಕಾರ್ಯಾಗಾರ ಆಯೋಜಿಸಲಾಗಿತ್ತು ಎಂದರು.
ಆನ್‌ಲೈನ್ ಮೂಲಕ ಕಲಿಯುವ ಈ ವ್ಯವಸ್ಥೆಯಲ್ಲಿ ಗುಣಮಟ್ಟದ ವಿಷಯದಲ್ಲಿ ಹೊಂದಾಣಿಕೆ ಇರದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದ ತಾವು ಮುಂದಿನ ದಿನಗಳಲ್ಲಿ ಇದರ ಸದುಪಯೋಗ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಯುಪಿಇ ಯೋಜನೆಯ ಸಹ ಸಂಯೋಜನಾಧಿಕಾರಿ ಪ್ರೊ.ಎನ್. ಉಷಾರಾಣಿ, ಎಂಎಲ್‌ಆರ್‌ಸಿಯ ಸಂಯೋಜನಾಧಿಕಾರಿ ಪ್ರೊ.ಬಾಲಸುಬ್ರಮಣಿಯನ್ ಇದ್ದರು.